ಶ್ರೀಮದ್-ವಾರುಣ-ಮಹಾಪುರಾಣಮ್ ೨
ಶ್ರೀಮದ್-ವಾರುಣ-ಮಹಾಪುರಾಣಮ್ ೨
ದ್ವಿತೀಯೋऽಧ್ಯಾಯಃ
(ಋ.ಸಂ.೧೦.೧೨೯.೧—
ನಾಸದಾಸೀನ್ನೋ ಸದಾಸೀತ್ತದಾನೀಂ
ನಾಸೀದ್ ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್-
-ಅಂಭಃ ಕಿಮಾಸೀದ್ಗಹನಂ ಗಭೀರಮ್ ||)
ಇನ್ದ್ರಿಯಾತೀತಮವ್ಯಕ್ತ-
-ಮವ್ಯಾಕೃತಂ ತಥಾಪಿ ವಾ |
ಅಸದ್ಇತ್ಯುಚ್ಯತೇ ವೇದೇ
ಮಿಥ್ಯಾऽನಾತ್ಮೇತಿ ನಾತ್ರ ವೈ || ೧ ||
ಅವ್ಯಕ್ತವೂ (ಸಾಕಾರವಾಗಿ ವ್ಯಕ್ತವಾಗದಿರುವುದೂ) ಇಂದ್ರಿಯಗಳಿಗೆ ನಿಲುಕದುದೂ ಅವ್ಯಾಕೃತವೂ (ಅಪ್ರಕಟಿತವೂ, ಸಮಷ್ಟಿಕರ್ಮಬೀಜರೂಪವಾಗಿ ಜಗತ್ಕಾರಣವಾದ ಅಜ್ಞಾನರೂಪವೂ, ಸರ್ವಕಾರಣಜ್ಞಾನಬ್ರಹ್ಮಸ್ವರೂಪವೂ, ಸಾಂಖ್ಯಮತದ ಪ್ರಧಾನತತ್ತ್ವವೂ ) ಇಲ್ಲಿ ವೇದದ ಸಂಹಿತಾ-ಬ್ರಾಹ್ಮಣಭಾಗದಲ್ಲಿ ಹೇಳಿರುವಂತೆ ಅಸತ್ ಎನ್ನಲ್ಪಡುತ್ತದೆಯೇ ಹೊರತು, ವೇದಾಂತದಲ್ಲಿ ಹೇಳಿರುವಂತೆ ಮಿಥ್ಯೆಯೂ, ಅನಾತ್ಮವೂ ನೇರವಾಗಿ ಇದಕ್ಕೆ ಸಂಬಂಧಿಸಿಲ್ಲ. ಇಲ್ಲಿ ಪೂರ್ವಕರ್ಮಬೀಜಯುಕ್ತವಾದ ಅವ್ಯಕ್ತಬ್ರಹ್ಮತತ್ತ್ವವನ್ನೇ ಅಸತ್ ಎನ್ನಲಾಗಿದೆ.
ಇನ್ದ್ರಿಯಗ್ರಾಹ್ಯಮೇವೇತಿ
ವ್ಯಕ್ತಂ ವ್ಯಾಕೃತಮಿತ್ಯಪಿ |
ಸತ್ಪದೇನ ವಿಜಾನೀಯಾತ್
ಸತ್ಯಮಾತ್ಮೇತಿ ನಾತ್ರ ವೈ || ೨ ||
ವ್ಯಕ್ತವೂ (ಸಾಕಾರವಾಗಿ ತೋರಿಬರುವುದೂ) ಇಂದ್ರಿಯಗೋಚರವಾದುದೂ ವ್ಯಾಕೃತವಾದುದೂ (ಪ್ರಕಟಿತವಾದುದೂ, ನಾಮರೂಪಗಳಿಂದ ತೋರಿಬರುವುದೂ) ಆಗಿರುವ ತತ್ತ್ವವನ್ನು ಸತ್ ಎಂಬ ಶಬ್ದದಿಂದ ವಿಶೇಷವಾಗಿ ತಿಳಿಯಬೇಕು. ಇಲ್ಲಿ ವೇದಾಂತದೃಷ್ಟಿಯ ಸತ್ಯಬ್ರಹ್ಮವೆಂಬ ಸತ್ ಪದಕ್ಕೆ ನೇರವಾದ ಸಂಬಂಧವಿಲ್ಲ.
ತದಾನೀಂ ಸೃಷ್ಟಿಪೂರ್ವೇ ತು
ಪ್ರಲಯಾನ್ತೇ ಬಭೂವ ತತ್ |
ಸನ್ನೈವಾಸೀದಸನ್ನಾಸೀದ್-
ವ್ಯಕ್ತಾವ್ಯಕ್ತಾತ್ಪರಾತ್ಪರಮ್ || ೩ ||
ಆವಾಗಲಾದರೋ, ಸೃಷ್ಟಿಗೂ ಮುಂಚೆ, ಪ್ರಳಯದ ಕೊನೆಯಲ್ಲಿ, ತದ್ ವಾಚ್ಯವಾದ ಪರತತ್ತ್ವವೊಂದೇ ಇದ್ದಿತ್ತು. ಅದು ಅಸತ್ತೂ (ನಿರಾಕಾರ) ಆಗಿರಲಿಲ್ಲ; ಸತ್ (ಸಾಕಾರ) ಅಂತೂ ಆಗಿರಲೇ ಇಲ್ಲ. ಅದು ಅವ್ಯಕ್ತ-ವ್ಯಕ್ತಗಳಿಗೂ ಅತೀತವಾದ ಪರಾತ್ಪರತತ್ತ್ವವಾಗಿತ್ತು.
ತದಾ ನಾಸೀದ್ ರಜೋ ಲೋಕ-
-ಸಮವಾಯಸ್ತಥಾ ವಿಯತ್ |
ಪಾತಾಲಾದ್ಯಾ ಭುವಾದ್ಯಾಶ್ಚ
ವ್ಯೋಮಾ ನಾಸೀತ್ತಥಾಪಿ ವಾ || ೪ ||
ಆಗ ರಜಸ್ಸು (ನಾನಾ ಲೋಕಗಳ ಸಮೂಹ) ಹಾಗೂ ಆಕಾಶಾದಿ ಪಂಚಭೂತಗಳೂ, ಅತಲ-ವಿತಲ-ಸುತಲ-ತಲಾತಲ-ರರಸಾತಲ-ಮಹಾತಲ-ಪಾತಲ(ಪಾತಾಲ) ಎಂಬ ಸಪ್ತ ಅಧೋಲೋಕಗಳೂ, ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಮ್ ಎಂಬ ಸಪ್ತ ಊರ್ಧ್ವಲೋಕಗಳೂ ಇರಲಿಲ್ಲ. ವ್ಯೋಮ / ಬಾಹ್ಯಾಕಾಶ / space ಎಂಬುದೂ ಇರಲಿಲ್ಲ.
ಪಂಚಭೂತಾऽऽವರೀವೋ ನಾ-
-ऽऽಸೀದಾವರಣಮಿತ್ಯಪಿ |
ಶರ್ಮನ್ ಸುಖಕರಂ ನಾಸೀತ್
ಆಹಾರೋ ಜೀವಿನಾಂ ತದಾ || ೫ ||
ಸೃಷ್ಟಿಗೂ ಹಿಂದೆ, ಆಕಾಶ-ವಾಯು-ಅಗ್ನಿ-ಆಪಸ್(ಜಲಮ್)-ಪೃಥಿವೀ ಎಂಬ ಪಂಚಭೂತಗಳ ಆವರಣವೂ ಇರಲಿಲ್ಲ. ಜೀವರುಗಳಿಗೆ, ಪ್ರಾಣಿಗಳಿಗೆ ಬೇಕಾದ ಅನ್ನಾಹಾರಾದಿ ಸುಖ-ಸಾಧನ-ಸಂಪತ್ತುಗಳೂ ಆಗ ಇರಲಿಲ್ಲ.
ಅಮ್ಭಃ ಕಿಂ ಗಹನಂ ಸೂಕ್ಷ್ಮಂ
ಗಭೀರಂ ನು ಸಮನ್ತತಃ |
ಆಸೀದ್ವೇತಿ ನ ವೇತ್ಯಾಹ
ಪರಮೇಷ್ಠೀ ಪ್ರಜಾಪತಿಃ || ೬ ||
ಅತ್ಯಂತ ಗಹನವೂ, ಗೂಢವೂ, ಗಂಭೀರವೂ (ಆಳವರಿಯದುದೂ) ಆದ ಸೂಕ್ಷ್ಮಜಲ (ಇಂದು ತೋರುವ ಸ್ಥೂಲವಾದ ನೀರಲ್ಲ, ಅದರ ಸೂಕ್ಷ್ಮಪೂರ್ವಜ) / ಪ್ರಳಯಜಲವೊಂದೇ ಸರ್ವತ್ರ (ಎಲ್ಲೆಡೆಯಿಂದಲೂ) ವ್ಯಾಪಿಸಿದ್ದೂ ಇಲ್ಲದಂತೆಯೇ ಅವ್ಯಕ್ತವಾಗಿತ್ತೆಂದು ಈ ಮಂತ್ರಸಮೂಹರೂಪವಾದ ಸೂಕ್ತವನ್ನು ದರ್ಶನಮಾಡಿಕೊಂಡ ಪರಮೇಷ್ಠಿಯೆನಿಸಿದ ಪ್ರಜಾಪತಿಯೆಂಬ ಋಷಿಯು ಹೇಳುತ್ತಾನೆ. ಪರಮಾಕಾಶ / ಹೃದಯಾಕಾಶ / ಬ್ರಹ್ಮಾನಂದದಲ್ಲೇ ಸ್ಥಿತನಾದವನೇ ಪರಮೇಷ್ಠೀ (ಪರಮೇ ಸ್ಥಿತಃ). ಸಮಸ್ತ ಪ್ರಜಾಸೃಷ್ಟಿಯ ಒಡೆಯನೂ, ಸೃಷ್ಟಿಕರ್ತನೂ ಆಗಿ ಪ್ರಜಾಪತಿಯೆನಿಸಿದ ಈತನೇ ಚತುರ್ಮುಖ ಬ್ರಹ್ಮಾ.
ಭಾವವೃತ್ತಪರಂ ಸೂಕ್ತಂ
ನಾಸದೀಯಂ ತು ಬಹ್ವೃಚೇ |
ಸಪ್ತರ್ಚಂ ದಶಮೇ ಪ್ರೋಕ್ತಂ
ಮಂಡಲೇ ಸೃಷ್ಟಿಕಲ್ಪನಮ್ || ೭ ||
ಋಕ್ಕು / ಋಚೆಗಳ ಬಾಹುಳ್ಯದಿಂದ ಬಹ್ವೃಚಸಂಹಿತಾ ಎನಿಸಿದ ಋಗ್ವೇದಸಂಹಿತೆಯ ಹತ್ತನೆಯ ಮಂಡಲದಲ್ಲಿ ಹೇಳಲ್ಪಟ್ಟ ಈ ನಾಸದೀಯ ಸೂಕ್ತವು ೭ ಋಕ್ಕುಗಳಿಂದ ಕೂಡಿ ಸಪ್ತರ್ಚವಾಗಿದ್ದು, ಇದರ ಋಷಿಯು ಪರಮೇಷ್ಠೀ ಪ್ರಜಾಪತಿಯು. ಇದರ ದೇವತೆ / ವಿಷಯವಸ್ತು ಭಾವವೃತ್ತಮ್. ಇದರಲ್ಲಿ ಸೃಷ್ಟಿಪರಿಕಲ್ಪನೆಯ ವಿಚಾರವನ್ನು ಮಾಡಲಾಗಿದೆ.
(ಋ.ಸಂ.೧೦.೧೨೯.೩—
ತಮ ಆಸೀತ್ತಮಸಾ ಗೂಳ್ಹಮಗ್ರೇ
ಅಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ವಪಿಹಿತಂ ಯದಾಸೀತ್
ತಪಸಸ್ತನ್ಮಹಿನಾಜಾಯತೈಕಮ್ ||)
ಆಸೀದ್ವೃತಂ ಗೂಢತಮಸ್ತಮೋऽಪ್ರ-
-ಕೇತಂ ಜಲಂ ತಾಮಸಿಕೇನ ಪೂರ್ಣಮ್ |
ಸರ್ವಂ ತದಾಭೂತ್ ಪಿಹಿತಂ ತು ತೇನ
ಸತಾऽಸತಾ ಕಾರ್ಯಲೋಕಂ ತಪೋಭಿಃ || ೯ ||
(ಉಪಜಾತಿವೃತ್ತಮ್— ಸ್ಯಾದಿಂದ್ರವಜ್ರಾ ಯದಿ ತೌ ಜಗೌಗಃ + ಉಪೇಂದ್ರವಜ್ರಾ ಜತಜಾಸ್ತತೋ ಗೌ)
ಗೂಢಾತಿಗೂಢವೂ ರಹಸ್ಯತಮವೂ ಆದ ತಮೋಭಾವರೂಪವಾದ ಗಾಢವಾದ ಅಜ್ಞಾನಾಂಧಕಾರವು ಸರ್ವತ್ರ ಆವರಿಸಿತ್ತು. ತಮಸ್ಸಿನಿಂದ ತುಂಬಿದ ಅಪ್ರಕೇತವಾದ (ಸೂಕ್ಷ್ಮವಾದ, ಇಂದ್ರಿಯಾತೀತವಾದ) ಪ್ರಳಯಜಲವೇ ಎಲ್ಲೆಲ್ಲೂ ತುಂಬಿಕೊಂಡಂತಿತ್ತು. ಆಗ, ತದ್ ವಾಚ್ಯವಾದ ಕಾರಣ-ಪರಬ್ರಹ್ಮವಸ್ತುವಿನಿಂದಲೇ ಇದೆಲ್ಲವೂ ಮುಚ್ಚಿಹೋಗಿತ್ತು. ಅಂತಹ ಸದಸದಾತ್ಮಕವಾದ (ಸತ್ + ಅಸತ್) ಕಾರಣಬ್ರಹ್ಮದ ಮಹಿಮೆಯಿಂದ ತಪಃಕಾರ್ಯರೂಪವಾದ, ಕಾರ್ಯಬ್ರಹ್ಮ / ಹಿರಣ್ಯಗರ್ಭ / ಚತುರ್ಮುಖಬ್ರಹ್ಮ / ಕಾರ್ಯಲೋಕದ ಸೃಷ್ಟಿಯಾಯಿತು.
(ಋ.ಸಂ.೧೦.೧೨೯.೪—
ಕಾಮಸ್ತದಗ್ರೇ ಸಮವರ್ತತಾಧಿ
ಮನಸೋ ರೇತಃ ಪ್ರಥಮಂ ಯದಾಸೀತ್ |
ಸತೋ ಬಂಧುಮಸತಿ ನಿರವಿನ್ದನ್
ಹೃದಿ ಪ್ರತೀಷ್ಯಾ ಕವಯೋ ಮನೀಷಾ ||)
ಪೂರ್ವಕಲ್ಪಗತಾ ಕರ್ಮ|ವಾಸನಾ ಜೀವಿನಾಂ ತು ಯಾ |
ಕಾರಣಾऽಜ್ಞಾನರೂಪೇಣ ಸೃಷ್ಟ್ಯಾದೌ ಬೀಜತಾಂ ವ್ರಜೇತ್ || ೧೦ ||
ಸೃಷ್ಟಿಯ ಪ್ರಲಯವಾದ ಬಳಿಕ, ಹಿಂದಿನ ಬ್ರಾಹ್ಮಕಲ್ಪದ / ಹಿಂದಿನ ಸೃಷ್ಟಿಕಾಲದ ಮುಕ್ತರಾಗದ ಜೀವರ ಉಳಿದುಕೊಂಡ ಕರ್ಮವಾಸನೆಯು ಯಾವುದಿದೆಯೋ ಅದು ಅವಿದ್ಯೆ / ಅಜ್ಞಾನ / ಕಾರಣದೇಹರೂಪದಿಂದ ಮರುಸೃಷ್ಟಿಕಾಲದ ಆದಿಯಲ್ಲಿ ಮುಂದಿನ ಸೃಷ್ಟಿಗೆ ಬೀಜವೆನಿಸುತ್ತದೆ.
ತಾದೃಶಾ ವಿಶ್ವಮಸ್ತಿಷ್ಕೇ ಮನಸ್ಯಾಸೀತ್ ಪರಾತ್ಮನಃ |
ಅಚೋದಯತ್ತಮಾತ್ಮಾನಂ ಸೃಷ್ಟಿಕಾಮಸ್ಯ ರೂಪತಃ || ೧೧ ||
ಅಂತಹ ಅವಿದ್ಯಾ-ಕಾಮ-ಕರ್ಮ ವಾಸನೆಯು ಆ ಪರಮಾತ್ಮನ ಸಮಷ್ಟಿಪ್ರಜ್ಞೆಯೆಂಬ ಮನಸ್ಸಿನಲ್ಲಿತ್ತು. ಅದೇ ಆತನನ್ನು ಸೃಷ್ಟಿಮಾಡಬೇಕೆಂಬ ಬಯಕೆಯ ಮೂಲಕ ಪ್ರಚೋದಿಸಿತು.
ಅಸತೀತ್ಥಂ ಸತೋ ಬನ್ಧುಂ ಬನ್ಧಕಂ ತಪಸಾ ವಿದುಃ |
ಕವಯೋ ದಿವ್ಯದೃಷ್ಟ್ಯಾ ಚ ಹೃದ್ಧ್ಯಾನೇನ ಮನೀಷಿಣಃ || ೧೨ ||
ಹೀಗೆ ಅಸತ್ತಿನಲ್ಲಿ / ಅವ್ಯಕ್ತದಲ್ಲಿ ಸದ್ವಸ್ತುವಿಗೆ ಬಂಧಕವಾದ ರೂಪಕಾರಕ ಗುಣವನ್ನು ಮನೀಷಿಗಳೂ ಮಹರ್ಷಿಗಳೂ ತಪಸ್ಸು ಅಂತರ್ಧ್ಯಾನ ಹಾಗೂ ದಿವ್ಯದೃಷ್ಟಿಯ ಬಲದಿಂದ ತಿಳಿದರು.
(ಋ.ಸಂ.೧೦.೯೦.೩,೪—
ಪಾದೋऽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ||
ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋऽಸ್ಯೇಹಾಭವತ್ಪುನಃ ||)
ಸರ್ವಾಣ್ಯೇತಾನಿ ಸದ್ಭೂತ್ವಾ ಜಾತಾನ್ಯೇಕಾಂಶತೋऽಸತಃ |
ಪದಾನಿ ತ್ರೀಣಿ ಚಾವ್ಯಕ್ತಂ ಚತುರ್ಥಂ ವ್ಯಕ್ತಮೇವ ಹಿ || ೧೩ ||
ಆ ಅಸತ್ / ಅವ್ಯಕ್ತದ ಕೇವಲ ಏಕಾಂಶದಿಂದ / ಕಾಲು ಭಾಗದಿಂದ ವ್ಯಕ್ತವಾದ ಇವೆಲ್ಲವೂ ಸತ್ತಾಗಿ ತೋರಿಕೊಂಡವು. ಉಳಿದ ಮುಕ್ಕಾಲು ಭಾಗವೂ ಅವ್ಯಕ್ತವಾಗಿ ತೋರದೇ ಇರುವುದು.
(ಋ.ಸಂ.೧೦.೧೨೯.೫—
ತಿರಶ್ಚೀನೋ ವಿತತೋ ರಶ್ಮಿರೇಷಾಮ್
ಅಧಃ ಸ್ವಿದಾಸೀದುಪರಿ ಸ್ವಿದಾಸೀತ್ |
ರೇತೋಧಾ ಆಸನ್ಮಹಿಮಾನ ಆಸನ್-
-ತ್ಸ್ವಧಾ ಅವಸ್ತಾತ್ಪ್ರಯತಿಃ ಪರಸ್ತಾತ್ ||)
ಅವಿದ್ಯಾಕಾಮಕರ್ಮಾಣಾಂ ಸೃಷ್ಟಿಹೇತುಸ್ವರೂಪಿಣಾಮ್ |
ಸೃಜತಾಂ ಭೂತಜಾತಾನಾಂ
ಸೂರ್ಯರಶ್ಮೀವ ಶೀಘ್ರತಾ || ೧೪ ||
ಹೀಗೆ, ಚರಾಚರಗಳಾಗಿ ಉದ್ಭವಿಸಿದ ಸೃಷ್ಟಿಗೆ ಕಾರಣವಾದ ಅವಿದ್ಯಾ-ಕಾಮ-ಕರ್ಮಗಳಿಗೆ, ಸೂರ್ಯನ ಕಿರಣಗಳಂತಹ ವೇಗವಿತ್ತು. ಸೂರ್ಯೋದಯವಾದ ಕೂಡಲೇ ಎಲ್ಲೆಡೆ ಬೆಳಕಾಗುವಂತೆಯೇ ಇವುಗಳು ಬಹುಶೀಘ್ರವಾಗಿ ಹಬ್ಬಿ ಸಮಸ್ತಸೃಷ್ಟಿಯೂ ತೋರಿಕೊಂಡಿತು.
ಸರ್ವತ್ರ ವ್ಯಾಪ್ನುವನ್ನಾದೌ ವಿತತೋ ವಿಸ್ತೃತೋऽಭವತ್ |
ಕಾರ್ಯವರ್ಗಸ್ತಿರಶ್ಚೀನಸ್ತಿರ್ಯಙ್ಮಧ್ಯೇ ವ್ಯವಸ್ಥಿತಃ || ೧೫ ||
ಆದಿಯಲ್ಲಿ ಎಲ್ಲೆಡೆಯೂ ವ್ಯಾಪಿಸಿ ಮತ್ತಷ್ಟು ವಿಸ್ತಾರವಾಯಿತು. ಈ ಅವಿದ್ಯಾಕಾಮಕರ್ಮಗಳೆಂಬ ಕಾರ್ಯವರ್ಗವು ಉದ್ದುದ್ದವಾಗಿಯೂ, ಅಡ್ಡಡ್ಡವಾಗಿಯೂ ನಾಲ್ದೆಸೆಗಳಲ್ಲೂ ಸೃಷ್ಟಿಪ್ರಕ್ರಿಯೆಯಾಗಿ ಪಸರಿಸಿತು.
ಅಧೋऽಧಸ್ತಾತ್ಕಿಮಾಸೀದ್ವಾ ಹ್ಯುಪರ್ಯುಪರಿ ಕಿಂ ಸ್ಥಿತಃ |
ಅಹೋಸ್ವಿತ್ಸರ್ಗಕಾರ್ಯಸ್ತು ವಿದ್ಯುದ್ವೇಗೇ ಸಮಾವೃತಃ || ೧೬ ||
ಈ ಸೃಷ್ಟಿಪ್ರಕ್ರಿಯೆಯಾದರೋ ಮೇಲಿನಿಂದ ಕೆಳಕೆಳಗೆ / ಅಧೋಮುಖವಾಗಿ ಇತ್ತೋ? ಅಥವಾ ಕೆಳಗಿನಿಂದ ಮೇಲ್ಗಡೆಗೆ ಆಯಿತೋ? ಈ ಸೃಷ್ಟಿಕಾರ್ಯವಾದರೋ ವಿದ್ಯುದ್ವೇಗದಿಂದ ಎಲ್ಲೆಡೆ ಒಂದೊಮ್ಮೆಗೇ ಹಬ್ಬಿತಾದ್ದರಿಂದ ಇದರ ಕೊನೆಮೊದಲೆಂಬುದು ತೋರದಾಯಿತು.
ತನ್ಮಧ್ಯೇ ಕರ್ಮಬೀಜಾಖ್ಯಂ ರೇತಸಂ ಯೇ ಧರನ್ತಿ ತೇ |
ರೇತೋಧಾಃ ಕರ್ತೃಭೋಕ್ತಾರೋ ಜೀವಾ ಆಸನ್ ಪರಾತ್ಮನಿ || ೧೭ ||
ಈ ನಡುವೆ, ಕರ್ಮಬೀಜವೆಂಬ ರೇತಸ್ಸನ್ನು / ವೀರ್ಯವನ್ನು ಧಾರಣೆಮಾಡಿಕೊಂಡ ಕರ್ತೃಗಳೂ ಭೋಕ್ತೃಗಳೂ ಎನಿಸಿದ ಜೀವರು ಪರಮಾತ್ಮನಲ್ಲೇ ಆಶ್ರಯಿಸಿದ್ದರು.
ಅನ್ಯೇ ಭೋಗ್ಯಾ ಮಹಾನ್ತಶ್ಚ ವಿಯದ್ವಾಯ್ವನಲಾದಯಃ |
ಇತ್ಥಮೇತತ್ಪ್ರಸೃಜ್ಯಾಸೌ ಸ್ವಮಾಯಯಾ ವಿವೇಶ ಹ || ೧೮ ||
ಆಕಾಶ-ವಾಯು-ಅಗ್ನಿ ಮುಂತಾದ ಮಹಾಭೂತಗಳು ಕರ್ತೃ-ಭೋಕ್ತೃಗಳಾದ ಜೀವರಿಗಾಗಿ ಜೀವೇತರ ಭೋಗ್ಯಪದಾರ್ಥಗಳೆನಿಸಿದವು. ಈ ರೀತಿಯಾಗಿ ಪರಮಾತ್ಮನು ಭೋಕ್ತೃಭೋಗ್ಯಗಳನ್ನುಂಟುಮಾಡಿ ತನ್ನ ಮಾಯೆಯಿಂದ ಅವನ್ನೆಲ್ಲ ಸ್ವತಃ ಪ್ರವೇಶಿಸಿದನು.
ಸ್ವಧಾऽಖ್ಯಂ ತೇನ ಮಧ್ಯೇऽನ್ನಂ ಕೃತಂ ವೈ ಭೋಕ್ತೃಭೋಗ್ಯಯೋಃ |
ನಿಕೃಷ್ಟೋ ಭೋಗ್ಯ ಉತ್ಕೃಷ್ಟಃ ಕೃತೌ ಭೋಕ್ತಾ ಪರಾವರೌ || ೧೯ ||
ಈ ಭೋಕ್ತೃ-ಭೋಗ್ಯಗಳ ನಡುವೆ ಸ್ವ-ಧಾ (ತನ್ನನ್ನು ತಾನು ಧಾರಣೆಮಾಡಬಲ್ಲ) ಎಂಬ ಅನ್ನವು ಆತನಿಂದಲೇ ಉಂಟುಮಾಡಲ್ಪಟ್ಟಿತು. ಭೋಗ್ಯವಸ್ತುಗಳು ಕೆಳಮಟ್ಟದವೂ, ಭೋಕ್ತೃಗಳು ಮೇಲ್ಮಟ್ಟದವೂ ಎಂಬುದಾಗಿ ಅವುಗಳ ನಡುವೆ ತಾರತಮ್ಯತೆ (ತರ, ತಮ)ಯೂ ಮಾಡಲ್ಪಟ್ಟಿತು. ಭೋಕ್ತೃವು ಭೋಗ್ಯವನ್ನು ಬಳಸಿಕೊಳ್ಳಬಲ್ಲನಾದ್ದರಿಂದ ಶ್ರೇಷ್ಠನೂ, ಭೋಗ್ಯವು ಭೋಕ್ತೃವನ್ನು ಬಳಸಿಕೊಳ್ಳಲಾರದ್ದರಿಂದ ಕನಿಷ್ಠವೂ ಎನಿಸಿದವು.
(ಋ.ಸಂ.೧೦.೧೨೯.೬—
ಕೋ ಅದ್ಧಾ ವೇದ ಕ ಇಹ ಪ್ರ ವೋಚತ್ಕುತ ಆಜಾತಾ ಕುತ ಇಯಂ ವಿಸೃಷ್ಟಿಃ |
ಅರ್ವಾಗ್ದೇವಾ ಅಸ್ಯ ವಿಸರ್ಜನೇನಾಥಾ ಕೋ ವೇದ ಯತ ಆಬಭೂವ ||)
ಭೋಕ್ತೃಭೋಗ್ಯಾದಿರೂಪೇಣ ಸೃಷ್ಟಿರಿತ್ಥಂ ಪ್ರಕಲ್ಪಿತಾ |
ಸಂಗ್ರಹೇಣಾವಿಸ್ತರೇಣ ದುರ್ವಿಜ್ಞಾನಮಿತಿ ಶ್ರುತಿಃ || ೨೦ ||
ಈ ರೀತಿಯಾಗಿ ತಿಳಿಯಲು ಅತ್ಯಂತ ಗಹನವಾದ ಸೃಷ್ಟಿಪ್ರಕ್ರಿಯೆಯು, ಭೋಕ್ತೃ (ಉಣ್ಣುವವನು, ಅನುಭವಿಸುವವನು, ಕರ್ತೃ) ಹಾಗೂ ಭೋಗ್ಯ (ಉಣ್ಣಬಹುದಾದ ವಸ್ತು, ಅನುಭವಯೋಗ್ಯ ಪದಾರ್ಥ, ಕಾರ್ಯ) ಮುಂತಾದ ರೂಪದಲ್ಲಿ ಸಂಕ್ಷೇಪವೂ ಅನತಿವಿಸ್ತಾರವೂ ಆಗಿ ಕಲ್ಪಿಸಲ್ಪಟ್ಟಿರುವುದೆಂದು ವೇದವು ಹೇಳಿದೆ.
ಕೋ ವೇದ ಪಾರಮಾರ್ಥ್ಯೇನ ಸರ್ಗಾದೀನ್ವೈ ಸಮನ್ತತಃ |
ಕೋ ವಾ ಶಕ್ನೋತಿ ವಕ್ತುಂ ತಾನ್ ಭೂತಾಂಸ್ತಾನ್ ತತ್ರ ವೇತ್ತೃಷು || ೨೧ ||
ಸೃಷ್ಟಿಯೇ ಮುಂತಾದುವನ್ನು ಪರಮಾರ್ಥವಾಗಿ ಸಂಪೂರ್ಣವಾಗಿ ಯಾರು ತಾನೇ ಬಲ್ಲರು? ಹಾಗೆ ಹೇಳಬಲ್ಲವರಲ್ಲೂ ಯಾರು ತಾನೇ ಭೂತಸೃಷ್ಟಿಯನ್ನು ಪರಿಪೂರ್ಣವಾಗಿ "ಇದಮಿತ್ಥಮ್ (ಇದು ಹೀಗೆಯೇ)" ಎಂಬುದಾಗಿ ಹೇಳಲು ಶಕ್ತರಿರುವರು?
ಭೂತಸೃಷ್ಟೇಃ ಪರಸ್ತಾತ್ತು ದೇವಸೃಷ್ಟಿರಭೂದಿತಿ |
ಸರ್ವಜ್ಞಾ ಅಪಿ ದೇವಾಸ್ತೇ ಕಥಂ ತತ್ಪೂರ್ವಮಾವದೇತ್ || ೨೨ ||
ಪಂಚಮಹಾಭೂತಗಳ ಸೃಷ್ಟಿಯ ಬಳಿಕ ದೇವತೆಗಳ ಸೃಷ್ಟಿಯಾಯಿತೆಂಬುದರಿಂದಾಗಿ, ಸರ್ವಜ್ಞರಾದರೂ ದೇವತೆಗಳು ತಮಗಿಂತ ಹಿಂದಿನ ಸೃಷ್ಟಿಯನ್ನು ಹೇಗೆ ತಾನೇ ಹೇಳಬಲ್ಲರು?
ಏವಂಭೂತೇ ಮನುಷ್ಯಾದಿಃ ಕಥಂ ವೇತ್ತಿ ಹಿ ತತ್ತ್ವತಃ |
ಕಾರಣಂ ಜಗತಃ ಕೃತ್ಸ್ನಂ ಕಾರಣಾದಿತ್ಯಜಾಯತ || ೨೩ ||
ದೇವತೆಗಳೇ ಹೇಳಲಶಕ್ತರಾಗಿದ್ದಮೇಲೆ ನಮ್ಮಂತಹ ಮನುಷ್ಯಮಾತ್ರರು ಸೃಷ್ಟಿಯ ಬಗ್ಗೆ ಯಥಾರ್ಥವಾಗಿ ಹೇಗೆ ತಾನೇ ತಿಳಿದಿರಲು ಸಾಧ್ಯ? ಈ ಜಗತ್ತಿಗೆ ಕಾರಣವು ಯಾವುದಿದೆಯೋ ಅದರಿಂದಲೇ ಇದೆಲ್ಲವೂ ಉಂಟಾಯಿತೆಂದು ತಿಳಿಯಬೇಕು.
ಉಪಾದಾನಂ ನಿಮಿತ್ತಂ ಚ ದ್ರವ್ಯಜ್ಞಾನದ್ವಯಾತ್ಮಕಮ್ |
ಕಾರಣಂ ಕಿಮು ಸರ್ವಸ್ಯ ಮೃದ್ವಿಜ್ಞಾನಂ ಘಟಸ್ಯವತ್ || ೨೪ ||
ಇಂತಹ ಕಾರಣವು ಉಪಾದಾನ ಹಾಗೂ ನಿಮಿತ್ತವೆಂದು ೨ ಬಗೆ. ಉಪಾದಾನಕಾರಣವು ದ್ರವ್ಯಮೂಲವು, ನಿಮಿತ್ತಕಾರಣವು ಜ್ಞಾನಮೂಲವು. ಮಡಕೆಗೆ ಮಣ್ಣು ಉಪಾದಾನವೂ, ಕುಲಾಲವಿದ್ಯೆಯು ನಿಮಿತ್ತವೂ ಆಗಿರುವಂತೆ ಈ ಸಮಸ್ತಕ್ಕೂ ಕಾರಣವಾವುದು?
(ಋ.ಸಂ.೧೦.೧೨೯.೭—
ಇಯಂ ವಿಸೃಷ್ಟಿರ್ಯತ ಆ ಬಭೂವ
ಯದಿ ವಾ ದಧೇ ಯದಿ ವಾ ನ |
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್-
ತ್ಸೋ ಅಂಗ ವೇದ ಯದಿ ವಾ ನ ವೇದ ||)
ಯತೋऽಯಂ ವಿವಿಧಾ ಸೃಷ್ಟಿರಭವತ್ತೇನ ಧಾರ್ಯತೇ |
ಪರಾತ್ಮನಾ ಯದೀತ್ಥಂ ನ ಕೋऽನ್ಯೋ ವಾ ಶಕ್ತ ಇತ್ಯುತ || ೨೫ ||
ಯಾವನಿಂದಾಗಿ ಈ ಬಹುವಿಧ ಸೃಷ್ಟಿಯು ಆಯಿತೋ, ಆತನಿಂದಲೇ ಇದೆಲ್ಲವೂ ಧರಿಸಲ್ಪಡುತ್ತದೆ. ಇದು ಪರಮಾತ್ಮನಿಂದಲೇ ಹೊರತು, ಹಾಗಲ್ಲದಿದ್ದರೆ ಬೇರಾರಿಗೆ ತಾನೇ ಸಾಧ್ಯ?
ಅಸ್ಯಾಧ್ಯಕ್ಷಃ ಪರಾತ್ಮಾ ವೈ ಸ್ವಪ್ರಕಾಶೋ ವಿನಿರ್ಮಲಃ |
ಪೂರ್ಣಕಾಮಃ ಪರೇ ವ್ಯೋಮ್ನಿ ಹ್ಯಂತರ್ಹೃದಿ ಪ್ರತಿಷ್ಠಿತಃ || ೨೬ ||
ಇದೆಲ್ಲದರ ಅಧ್ಯಕ್ಷನು ಸ್ವಯಂಪ್ರಕಾಶನೂ ವಿಶೇಷವಾಗಿ ಅಕಳಂಕನೂ ಯಾವುದೇ ಬಯಕೆಗಳಿರದ ಪೂರ್ಣಕಾಮನೂ ಆದ ಪರಮಾತ್ಮನು. ಆತನು ನಮ್ಮ ಹೃದಯದೊಳಗೆ ಪರಮಾಕಾಶದಲ್ಲಿ ಸುಪ್ರತಿಷ್ಠಿತನಾಗಿರುವನು.
ವ್ಯೋಮವತ್ಸರ್ವಭೂತೇಷು ಸರ್ವಜ್ಞೋ ವ್ಯಾಪಕಃ ಸ ವೈ |
ವೇದೇತೀದಂ ಪ್ರಸಿದ್ಧಂ ಹಿ ನೋ ಚೇದನ್ಯೋ ನ ಕೋऽಪಿ ವೈ || ೨೭ ||
ಆಕಾಶದಂತೆ ಸಕಲ ಚರಾಚರಗಳಲ್ಲೂವ ಸರ್ವಜ್ಞನಾದ ಆತನು ವ್ಯಾಪಿಸಿರುವನು. ಹೀಗೆ ಎಲ್ಲ ಜಗದಲ್ಲಿ ಸುಪ್ರಸಿದ್ಧನಾಗಿ ಸ್ವಯಂಸಿದ್ಧನಾಗಿರುವ ಪರಮಾತ್ಮನನ್ನು ತಿಳಿ. ಹಾಗೆ ಪೂರ್ಣವಾಗಿ ತಿಳಿದವನು ಅವನೊಬ್ಬನೇ. ಬೇರಾರೂ ಹೀಗೆ ಮಾಡಲೂ, ತಿಳಿಯಲೂ ಶಕ್ತರಲ್ಲ. ಹಾಗಾಗಿ ತಿಳಿಯುವವನೂ (ಜ್ಞಾತೃ), ತಿಳುವಳಿಕೆಯೂ (ಜ್ಞಾನ), ತಿಳಿಯಬೇಕಾದದ್ದೂ (ಜ್ಞೇಯ) ಅವನೇ ಆಗಿರುವನು.
|| ಇತಿ ಶ್ರೀಮದ್ವಾರುಣೇ ಮಹಾಪುರಾಣೇ ಪ್ರಥಮೇ ಸರ್ಗಕಾಣ್ಡೇ ಪ್ರಥಮೇ ವೇದೋಕ್ತಸೃಷ್ಟಿಪರ್ವಣಿ ಪ್ರಜಾಪತಿಃ ಪರಮೇಷ್ಠೀ ನಾಮ ಋಷಿದೃಷ್ಟ ಋಗ್ವೇದೀಯ-ನಾಸದೀಯಸೂಕ್ತಸಾರೋ ನಾಮ ದ್ವಿತೀಯೋऽಧ್ಯಾಯಃ ||
|| ಇಲ್ಲಿಗೆ ಶ್ರೀಮದ್ ವಾರುಣ ಮಹಾಪುರಾಣದಲ್ಲಿ ಮೊದಲನೆಯದಾದ ಸರ್ಗಕಾಂಡದಲ್ಲಿ, ಮೊದಲನೆಯದಾದ ವೇದೋಕ್ತಸೃಷ್ಟಿಪರ್ವದಲ್ಲಿ, ಪರಮೇಷ್ಠೀ ಪ್ರಜಾಪತಿಯೆಂಬ ಋಷಿಯು ಕಂಡುಕೊಂಡ ಋಗ್ವೇದೀಯ-ನಾಸದೀಯಸೂಕ್ತದ ಸಾರ ಎಂಬ ಎರಡನೆಯ ಅಧ್ಯಾಯವು ಸಂಪೂರ್ಣವಾಯಿತು ||
|| ಹರಿಃ ಓಂ ತತ್ಸತ್ ||
Comments
Post a Comment