ಶ್ರೀಮದ್-ವಾರುಣ-ಮಹಾಪುರಾಣಮ್ ೩
ಶ್ರೀಮದ್-ವಾರುಣಮಹಾಪುರಾಣಮ್ ೧.೧.೩
ತೃತೀಯೋऽಧ್ಯಾಯಃ
( ಋ.ಸಂ.೧೦.೧೨೧.೧, ತೈ.ಸಂ.೪.೨.೮.೫— ಹಿರಣ್ಯಗರ್ಭ ಇತಿ ದಶರ್ಚಂ ಸೂಕ್ತಮ್ | ಹಿರಣ್ಯಗರ್ಭಃ ಪ್ರಾಜಾಪತ್ಯ ಋಷಿಃ | ತ್ರಿಷ್ಟುಪ್ ಛನ್ದಃ | ಕಶಬ್ದಾಭಿಧೇಯಃ ಪ್ರಜಾಪತಿಃ, ದೇವತಾ || ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ | ಸ ದಾಧಾರ ಪೃಥ್ವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ || )
ಹಿರಣ್ಯಗರ್ಭಸೂಕ್ತಂ ಹಿ
ದಶರ್ಚಂ ದಶಮೇ ತಥಾ |
ಋಗ್ವೇದೇ ಮಣ್ಡಲೇ ತತ್ರ
ಶತೋತ್ತರೈಕವಿಂಶಕಮ್ || ೧ ||
ಋಗ್ವೇದಸಂಹಿತೆಯಲ್ಲಿ ೧೦ನೆಯ ಮಂಡಲದಲ್ಲಿ ೧೨೧ನೇ ಸೂಕ್ತವೇ ಹಿರಣ್ಯಗರ್ಭಸೂಕ್ತವು. ಇದು ೧೦ ಋಕ್ಕುಗಳಿಂದ ಕೂಡಿರುವುದು.
ಪ್ರಜಾಪತಿಸುತೋ ದ್ರಷ್ಟಾ
ಹಿರಣ್ಯಗರ್ಭನಾಮಕಃ |
ತ್ರಿಷ್ಟುಪ್-ಛನ್ದಃ ಕಶಬ್ದಾಖ್ಯಃ
ಪ್ರಜಾಪತಿಶ್ಚ ದೇವತಾ || ೨ ||
ಇದರ ದ್ರಷ್ಟಾರನು (ಋಷಿಗಳು ಮಂತ್ರದ್ರಷ್ಟಾರರೇ ಹೊರತು ಕರ್ತಾರರಲ್ಲ, ಮಂತ್ರಗಳನ್ನೂ, ಮಂತ್ರಾರ್ಥಗಳನ್ನೂ ಕಂಡುಕೊಂಡವರೇ ಋಷಿಗಳು. “ಋಷಿರ್ದರ್ಶನಾತ್”) ಪ್ರಜಾಪತಿಯ ಮಗನಾಗಿ ಪ್ರಾಜಾಪತ್ಯನೆನಿಸಿದ ಹಿರಣ್ಯಗರ್ಭನೆಂಬವನು. ಈ ಸೂಕ್ತವು ೧೧ ಅಕ್ಷರಗಳ ೪ ಪಾದಗಳುಳ್ಳ ತ್ರಿಷ್ಟುಪ್ ಛಂದಸ್ಸಿನಲ್ಲಿದೆ. (ವೈದಿಕ ಛಂದಸ್ಸಿನ ವಿವಿಧ ಲೌಕಿಕ ಆವೃತ್ತಿಗಳೇ ವೃತ್ತಗಳು. ವೈದಿಕ ತ್ರಿಷ್ಟುಪ್ ಛಂದಸ್ಸಿಗೆ ಲೌಕಿಕ ಉದಾಹರಣೆಗಳು— ಇಂದ್ರವಜ್ರಾ, ಉಪೇಂದ್ರವಜ್ರಾ, ಉಪಜಾತಿ, ಶಾಲಿನೀ, ವಾತೋರ್ಮೀ, ರಥೋದ್ಧತಾ…) “ಕಃ” ಎಂಬ ಹೆಸರಿನ ಪ್ರಜಾಪತಿಯೇ ಈ ಹಿರಣ್ಯಗರ್ಭಸೂಕ್ತದ ಪ್ರತಿಪಾದ್ಯದೇವತೆ.
ಹಿರಣ್ಯಗರ್ಭ ಇತ್ಯಾಖ್ಯೋ
ಹಿರಣ್ಯಾಣ್ಡಃ ಪ್ರಜಾಪತಿಃ |
ಸಮಷ್ಟಿಸೂಕ್ಷ್ಮದೇಹೋ ವಾ
ಸೂತ್ರಾತ್ಮಾಣ್ಡಾನ್ತಸಂಸ್ಥಿತಃ || ೩ ||
ಹಿರಣ್ಯಗರ್ಭ ಎಂಬ ಹೆಸರಿನವನಾದ, ತನ್ನ ಗರ್ಭದಲ್ಲಿ / ತನ್ನೊಳಗೆ ಚಿನ್ನದಂತಹ / ಹೊಂಬಣ್ಣದ ಅಂಡ / ತತ್ತಿ / ಮೊಟ್ಟೆ / ಬ್ರಹ್ಮಾಂಡವನ್ನು ಹೊತ್ತಿರುವ, ಎಲ್ಲರ ವ್ಯಷ್ಟಿ (ಪ್ರತ್ಯೇಕ) ಸೂಕ್ಷ್ಮಶರೀರಗಳ ಸಮಷ್ಟಿ (ಐಕ್ಯ) ಸ್ವರೂಪನೂ (ಜೀವನಿಗೆ ೩ ಬಗೆಯ ಶರೀರಗಳು—ಸ್ಥೂಲ, ಸೂಕ್ಷ್ಮ, ಕಾರಣ), ಸೂತ್ರಾತ್ಮನೂ (ಎಲ್ಲ ಜೀವರ ಸೂಕ್ಷ್ಮದೇಹಗಳನ್ನು ಸೂತ್ರ / ಹಗ್ಗದಲ್ಲಿ ಪೋಣಿಸಿಕೊಂಡಂತಿರುವವನೂ), ಅಥವಾ, ಚಿನ್ನದ ಬಣ್ಣದ ಅಂಡದೊಳಗಿರುವವನೂ ಆದ, ಪ್ರಜಾಪತಿಯು (ಪ್ರಜೆಗಳ ಒಡೆಯನು),
ಆದಾವಗ್ರೇ(ಆದೌ+ಅಗ್ರೇ) ಸಮಾರಮ್ಭೇ
ಸೃಷ್ಟೇಃ ಪ್ರಾಕ್ ಸಮವರ್ತತ |
ಮಾಯಾಧ್ಯಕ್ಷಾತ್ ಸಿಸೃಕ್ಷೋಶ್ಚ
ಸಕಾಶಾತ್ ಸಮಜಾಯತ || ೪ ||
ಸೃಷ್ಟಿಗೂ ಪೂರ್ವದಲ್ಲಿ / ಸೃಷ್ಟಿಯ ಆರಂಭದಲ್ಲಿ / ಮೊದಲಿಗೆ / ಆದಿಯಲ್ಲಿ ಇದ್ದನು (ಸಮ್ + ಅವರ್ತತ). ಅಂದರೆ, ಆ ಹಿರಣ್ಯಗರ್ಭನೆಂಬ ಪ್ರಜಾಪತಿಬ್ರಹ್ಮನು, ಸೃಜಿಸಲು ಬಯಸಿ ಸಿಸೃಕ್ಷುವೆನಿಸಿದ (“ಏಕೋऽಹಂ ಬಹು ಸ್ಯಾಂ ಪ್ರಜಾಯೇಯೇತಿ”—ಉಪನಿಷತ್) ಮಾಯೆಯ ಒಡೆಯನಾಗಿ ಮಾಯಿನ್ (ಮಾಯೀ) ಎನಿಸಿದ (“ಮಾಯಾಂ ತು ಪ್ರಕೃತಿಂ ವಿದ್ಧಿ, ಮಾಯಿನಂ ತು ಮಹೇಶ್ವರಮ್”—ಉಪನಿಷತ್, “ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ”— ಗೀತೆ)ಪರಬ್ರಹ್ಮಪರಮಾತ್ಮನಿಂದ ಉಂಟಾದನು.
ಜಾತಃ ಸ ಜಾತಮಾತ್ರೋऽಪಿ
ಹ್ಯೇಕ (ಹಿ+ಏಕ) ಏವಾದ್ವಿತೀಯಕಃ |
ಭೂತಸ್ಯ ಸ್ವೇನ ಸೃಷ್ಟಸ್ಯ
ಸರ್ವಸ್ಯ ಜಗತಃ ಪತಿಃ || ೫ ||
ಬ್ರಹ್ಮಾಣ್ಡಸ್ಯೇಶ್ವರೋऽಪ್ಯಾಸೀತ್, (ಅಪಿ + ಆಸೀತ್)
ನಿರ್ವಿಕಾರೀ ವಿಕಾರಿವತ್ |
ಹುಟ್ಟಿನಿಂದಲೇ ನಿಶ್ಚಯವಾಗಿಯೂ ಎರಡಿಲ್ಲದೆ ಅ-ದ್ವಿತೀಯನೆನಿಸಿದ ಈ ಹಿರಣ್ಯಗರ್ಭನು, ತನ್ನಿಂದಲೇ ಸೃಜಿಸಲ್ಪಟ್ಟ ಈ ಸಮಸ್ತ ಜಗತ್ತಿನ / ಬ್ರಹ್ಮಾಂಡದ ಏಕಮೇವಾದ್ವಿತೀಯನಾದ ಒಡೆಯನಾಗಿದ್ದನು. ತಾನು ಮೂಲಸ್ವರೂಪದಲ್ಲಿ ನಿರ್ವಿಕಾರ-ನಿರಾಕಾರನಾದರೂ ಆಕಾರ-ವಿಕಾರಹೊಂದಿದವನಂತೆ ಹಿರಣ್ಯಗರ್ಭನಾಗಿ ತೋರಿಕೊಂಡನು.
ಪೃಥಿವೀ ಪೃಥು ವಿಸ್ತಾರೇ
ಧರೇಯಮನ್ತರಿಕ್ಷಕಃ || ೬ ||
ಸ ಬ್ರಹ್ಮಾ ಪೃಥಿವೀಮ್ ಉತ
ಹ್ಯನ್ತರಿಕ್ಷಂ ದಿವಂ ತಥಾ |
ದ್ಯಾಂ ಭೂಮಿಮ್ ಇಮಾಂ ಲೋಕಂ
ದಾಧಾರ ಧೃತವಾನ್ ಸದಾ || ೭ ||
ಪೃಥಿವೀ ಎಂದರೆ “ಪೃಥು ವಿಸ್ತಾರೇ” ಎಂಬ ಧಾತುಜನ್ಯವಾದುದು. ವಿಸ್ತಾರವಾದ ಈ ಧರೆ ಅಥವಾ ಭೂಮಿಯೆಂದು ಒಂದರ್ಥ. ಅಂತರಿಕ್ಷಕ್ಕೂ ವಿಸ್ತಾರತೆಯಿಂದಾಗಿ ಪೃಥಿವೀ ಎಂಬ ಹೆಸರಿದೆ. “ದ್ಯಾಂ” ಎಂದರೆ ದೇವಲೋಕ / ಸ್ವರ್ಗವನ್ನು. “ಇಮಾಂ” ಎಂದರೆ ಕಣ್ಣಮುಂದೆ ಕಾಣುವ ಈ ಭೂಲೋಕವನ್ನು. ಆ ಬ್ರಹ್ಮನು ಯಾವಾಗಲೂ ಭೂಮಿ, ಅಂತರಿಕ್ಷ ಹಾಗೂ ಸ್ವರ್ಗಗಳೆಂಬ ಈ ಮೂರೂ ಲೋಕಗಳನ್ನು ಆಧರಿಸಿದ್ದಾನೆಂದರ್ಥ.
Comments
Post a Comment