ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧

  ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧

—ಡಾ| ಕೃಷ್ಣಮೂರ್ತಿಶಾಸ್ತ್ರೀ, ದಂಬೆ, ಪುಣಚ, ಬಂಟ್ವಾಳ ತಾ|, ದ.ಕ.ಜಿಲ್ಲೆ.—574243

ಮೊ.9972716812

E-mail id— krishnamoorthydr77@gmail.com


ಪೀಠಿಕೆ

ಶ್ರೀಮದ್ಭಾಗವತವು ಸಾಕ್ಷಾತ್ ಭಗವಂತನ ಸ್ವರೂಪ. “ಭಗವತಃ ಭಗವತ್ಯಾಃ ವಾ ಇದಮ್”— ಭಗವಂತನ / ಭಗವತಿಯ ಚರಿತ್ರೆ / ಲೀಲೆಗಳ ಸಂಗ್ರಹವೇ ಭಾಗವತ. ಇದು ವೇದವ್ಯಾಸಕೃತವಾದ, ೧೨ ಸ್ಕನ್ಧಗಳೂ, ಅವುಗಳಲ್ಲಿ ೩೩೨ ಅಧ್ಯಾಯಗಳೂ, ಅವುಗಳೊಳಗೆ ಒಟ್ಟು ೧೮,೦೦೦ ಶ್ಲೋಕಗಳೂ ಇರುವ, ಪ್ರಧಾನವಾಗಿ ಭಗವಂತನ ಮಹಾತ್ಮೆಯನ್ನು  ವರ್ಣಿಸುವ ಉದ್ಗ್ರಂಥವಾಗಿದೆ. “ಯತ್ರಾಧಿಕೃತ್ಯ ಗಾಯತ್ರೀಂ ವರ್ಣ್ಯತೇ ಧರ್ಮವಿಸ್ತರಃ | ವೃತ್ರಾಸುರವಧೋಪೇತಂ ತದ್ಭಾಗವತಮಿಷ್ಯತೇ ||”— (ಮತ್ಸ್ಯಪುರಾಣೇ) ಎಲ್ಲಿ / ಯಾವುದರಲ್ಲಿ, ಗಾಯತ್ರೀಮಂತ್ರಾರ್ಥವನ್ನು ಮುಂದಿಟ್ಟು, ಧರ್ಮದ ವಿಸ್ತಾರವು ವರ್ಣಿಸಲ್ಪಡುವುದೋ, ಯಾವುದು ವೃತ್ರಾಸುರನ ವಧೆಯ ಕಥೆಯನ್ನು ಹೊಂದಿರುವುದೋ, ಅದು ಭಾಗವತವೆನಿಸಿದೆ ಎಂದಿದೆ ಮತ್ಸ್ಯಪುರಾಣ. ಇನ್ನೊಂದೆಡೆಯಲ್ಲಿ ಹಯಗ್ರೀವಬ್ರಹ್ಮವಿದ್ಯೆಯೆಂದು ಭಾಗವತವು ಕರೆಯಲ್ಪಟ್ಟಿದೆ.  ಇದು ಪುರಾಣವಾದರೂ, ಸಾಹಿತ್ಯದ ಪರಮಾವಧಿ ಗ್ರಂಥವಾಗಿ “ವಿದ್ಯಾ ಭಾಗವತಾವಧಿ:” ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ. “ವಿದ್ಯಾವತಾಂ ಭಾಗವತೇ ಪರೀಕ್ಷಾ” ಎಂಬ ಮಾತು ವಿಶ್ರುತವಾಗಿದೆ. “ಸ್ವಾದು ಸ್ವಾದು ಪದೇ ಪದೇ” ಎಂಬುದು ಜ್ಞಾನಿಗಳ ಭಾಗವತಪ್ರಶಂಸೆ. ಇದು ವೇದವ್ಯಾಸರ ಸಮಾಧಿಭಾಷೆ ಎಂದು ಶ್ರೀ ವಲ್ಲಭಾಚಾರ್ಯರು ಘೋಷಿಸಿದ್ದಾರೆ. 

(ಪುರಾಣಾದಿ ಕಥನದಲ್ಲಿ ೩ ರೀತಿಯ ಭಾವಪ್ರಸ್ತುತಿ / ಭಾಷಾಪ್ರಯೋಗವಿದೆ— ಸಮಾಧಿಭಾಷೆ, ಗೂಢಭಾಷೆ ಮತ್ತು ದರ್ಶನಭಾಷೆ. ಸಮಾಧಿ ಭಾಷೆಯೆಂದರೆ ಅನುಭವಾಮೃತ, ಸ್ವತಃ ತಪೋಧ್ಯಾನಸಮಾಧಿಗಳಿಂದಲೋ, ಅನುಭವದಿಂದಲೋ ಕಂಡುಕೊಂಡ ಸತ್ಯದ ಉದ್ಗಾರ, ಪ್ರತ್ಯಕ್ಷಾನುಭೂತ ಸತ್ಯದ ನೇರವಾದ ವಾಕ್ಯಗಳು. ಕಂಡಂತೆ ಹೇಳಿದ್ದು. ಅನುಭವಿಸಿದ್ದನ್ನೇ ಹೇಳಿದ್ದು. ಆದ್ದರಿಂದ ಇದು ಆ ಮಟ್ಟದ ಮನಃಸ್ಥಿತಿಯವರಿಗೆ ಮಾತ್ರ ಅರ್ಥವಾದೀತು, ಇತರರಿಗೆ ದುರವಬೋಧ್ಯ, ಅರ್ಥವಾಗಲು ಕಷ್ಟ.  ಗುಹ್ಯ / ಗೂಢ ಭಾಷೆಯೆಂದರೆ, ರಹಸ್ಯಾರ್ಥವುಳ್ಳ, ನೇರವಾಗಿ ಮೇಲ್ನೋಟಕ್ಕೆ ತಿಳಿದುಬರದಂತಹ ಭಾಷೆ. ಇದು ವೈಚಾರಿಕ, ತಾರ್ಕಿಕವಾಗಿ ಸಿದ್ಧವಾದ ವಿಚಾರಗಳನ್ನು ನೇರವಾಗಿ ಹೇಳದೇ, ಸುತ್ತುಬಳಸಿ, ಪರೋಕ್ಷವಾಗಿ ಹೇಳುವಿಕೆ. ಇನ್ನು ದರ್ಶನಭಾಷೆಯೆಂದರೆ ಕಂಡದ್ದನ್ನು ಕಂಡಂತೆಯೇ, ತಿಳಿದದ್ದನ್ನು ತಿಳಿದಂತೆಯೇ ನೇರವಾಗಿ, ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಹೇಳುವಿಕೆ. ಇದು ಅರ್ಥವಾಗಲು ಸುಲಭ.) 

   ಇಷ್ಟಲ್ಲದೆ, ಲೌಕಿಕವಾಗಿ-

(1)ಇದರಲ್ಲಿ ಬರುವ ನಾರಾಯಣ ಕವಚವು ಸಕಲ ವಿಘ್ನಹರ, ವಿಜಯ-ಆರೋಗ್ಯ-ಐಶ್ವರ್ಯಪ್ರದ; 

(2)ಗೋಪಿಕಾ ಕನ್ಯೆಯರೂ, ರುಕ್ಮಿಣೀ ದೇವಿಯೂ, ಕಾತ್ಯಾಯಿನಿ ದೇವಿಯನ್ನು ಕುರಿತು ಮಾಡಿದ ಪ್ರಾರ್ಥನೆ ಮತ್ತು ರುಕ್ಮಿಣೀ ದೇವಿಯು ಶ್ರೀಕೃಷ್ಣನಿಗೆ ಕಳುಹಿಸಿದ ಸಂದೇಶ- ಇವು ಕನ್ಯೆಯರಿಗೆ ಶೀಘ್ರ ವಿವಾಹಪ್ರಾಪ್ತಿಕಾರಕ; 

(3)ಪುಂಸವನ ವ್ರತದಿಂದ ಉತ್ತಮ ಸಂತಾನ ಪ್ರಾಪ್ತಿ ಮತ್ತು ಸಮಸ್ತ ಕಾಮನೆಗಳ ಪೂರ್ತಿ;

(4)ಗಜೇಂದ್ರಸ್ತವನದಿಂದ ಋಣಮುಕ್ತಿ, ಶತ್ರುಮುಕ್ತಿ ಹಾಗೂ ದೌರ್ಭಾಗ್ಯ ಪರಿಹಾರ;

(5)ಪಯೋವ್ರತದಿಂದ ಇಷ್ಟಸಂತಾನಪ್ರಾಪ್ತಿ; 

ಮತ್ತು

(6)ಭಾಗವತ ಸಪ್ತಾಹ ಶ್ರವಣ-ಪಾರಾಯಣಗಳ ಫಲವಾಗಿ ಪ್ರೇತತ್ವ ನಿವೃತ್ತಿ

          ಇತ್ಯಾದಿ ಫಲಗಳು ಭಾಗವತದಲ್ಲೇ ಉಕ್ತವಾಗಿವೆ. ಆದರೆ ಪ್ರಧಾನ ಪ್ರಯೋಜನ ಭಕ್ತಿ-ಜ್ಞಾನ-ವೈರಾಗ್ಯಗಳು. ಮುಕ್ತಿಯು ಭಕ್ತಿಯ ದಾಸಿಯಾಗಿ ತಾನಾಗಿಯೇ ಬರುವಳೆಂದು ಇದು ಸಾರಿದೆ.

ವಿಶೇಷ ವಿಚಾರ

(೧) ಮಹಾಪುರಾಣಗಳು-


ಮ-ದ್ವಯಂ ಭ-ದ್ವಯಂ ಚೈವ ಬ್ರ-ತ್ರಯಂ ವ-ಚತುಷ್ಟಯಮ್ |

ಅ-ನಾ-ಪ-ಲಿಂ-ಗ-ಕೂ-ಸ್ಕಾ-ನಿ ಪುರಾಣಾನಿ ಪ್ರಚಕ್ಷತೇ ||

ಮತ್ಸ್ಯ-ಮಾರ್ಕಂಡೇಯ, ಭವಿಷ್ಯ-ಭಾಗವತ, ಬ್ರಹ್ಮ-ಬ್ರಹ್ಮವೈವರ್ತ-ಬ್ರಹ್ಮಾಂಡ, ವರಾಹ-ವಾಮನ-ವಾಯು-ವಿಷ್ಣು, ಅಗ್ನಿ-ನಾರದ-ಪದ್ಮ-ಲಿಂಗ-ಗರುಡ-ಕೂರ್ಮ-ಸ್ಕಾಂದ - ಇವು ಹದಿನೆಂಟು ಮಹಾಪುರಾಣಗಳೆಂದು ಹೇಳಲ್ಪಡುತ್ತವೆ.


(೨) ಉಪಪುರಾಣಗಳು-


ಆದಿ, ನರಸಿಂಹ, ಕುಮಾರಕೃತ ಸ್ಕಂದ, ಶಿವಧರ್ಮ, ದುರ್ವಾಸ, ನಾರದ, ಕಪಿಲ, ವಿಷ್ಣುಧರ್ಮ, ಔಷನಸ, ಬ್ರಹ್ಮಾಂಡ, ಕಾಲಿಕಾ, ವರುಣ, ಮಾಹೇಶ್ವರ, ಸಾಂಬ, ಸೌರ, ಪರಾಶರ, ಮಾರೀಚ ಹಾಗೂ ಭಾಸ್ಕರ -ಒಟ್ಟು 18.


(೩) ಔಪಪುರಾಣಗಳು-


ಸನತ್ಕುಮಾರ, ಬೃಹನ್ನಾರದೀಯ, ಆದಿತ್ಯ, ಸೂರ್ಯ, ನಂದಿಕೇಶ್ವರ, ಕೂರ್ಮ, ಭಾಗವತ, ವಸಿಷ್ಠ, ಭಾರ್ಗವ, ಮುದ್ಗಲ, ಕಲ್ಕಿ, ದೇವೀ, ಮಹಾಭಾಗವತ, ಬೃಹದ್ಧರ್ಮ, ಪರಾನಂದ, ವಹ್ನಿ, ಪಶುಪತಿ ಮತ್ತು ಹರಿವಂಶ - ಇವೂ ೧೮.


ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತ: |

ರಾತ್ರೌ ಚೋರಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್ ||

ಬೆಳಗ್ಗೆ ಮಹಾಭಾರತ, ಮಧ್ಯಾಹ್ನ ರಾಮಾಯಣ ಹಾಗೂ ರಾತ್ರಿ ಶ್ರೀಮದ್ಭಾಗವತಾಮೃತಗಳ ರಸಾಸ್ವಾದನೆಯಿಂದ ಬುದ್ಧಿವಂತರು ಕಾಲಯಾಪನೆ ಮಾಡುತ್ತಾರೆ.

ಪುರಾಣನ್ಯಾಯಮೀಮಾಂಸಾ: ಧರ್ಮಶಾಸ್ತ್ರಾಂಗಮಿಶ್ರಿತಾ: |

ವೇದಾ: ಸ್ಥಾನಾನಿ ವಿದ್ಯಾನಾಂ ಧರ್ಮಸ್ಯ ಚ ಚತುರ್ದಶ ||

೧)ಪುರಾಣಸಮೂಹ(ಅಷ್ಟಾದಶಪುರಾಣೋಪಪುರಾಣೌಪಪುರಾಣಗಳು),

೨)ಷಡ್ದರ್ಶನಗಳು(ಕಪಿಲನ ಸಾಂಖ್ಯ, ಪತಂಜಲಿಯ ಯೋಗ, ಗೌತಮನ ನ್ಯಾಯ, ಕಣಾದನ ವೈಶೇಷಿಕ, ಜೈಮಿನಿಯ ಪೂರ್ವಮೀಮಾಂಸಾ, ಬಾದರಾಯಣವ್ಯಾಸನ ಉತ್ತರಮೀಮಾಂಸಾ/ವೇದಾಂತ/ಬ್ರಹ್ಮಸೂತ್ರಗಳು- ಒಟ್ಟು ೬),

೩)ಸ್ಮೃತಿ-ಉಪಸ್ಮೃತಿಗಳು(ಧರ್ಮಶಾಸ್ತ್ರಗಳು),

೪)ವೇದಾಂಗ ಶಿಕ್ಷಾ(ಪಾಣಿನೀಯಶಿಕ್ಷಾ ಮುಂತಾದವು)

೫)ವೇದಾಂಗ ವ್ಯಾಕರಣ(ಪಾಣಿನೀಯ ಅಷ್ಟಾಧ್ಯಾಯೀ ಸೂತ್ರಗಳೇ ಮುಂತಾದವು)

೬)ವೇದಾಂಗ ಛಂದಸ್(ಪಿಂಗಳಾಚಾರ್ಯತಕೃತ),

೭)ವೇದಾಂಗ ನಿರುಕ್ತ(ಯಾಸ್ಕಮುನಿ ವಿರಚಿತ ವೈದಿಕ ಶಬ್ದಕೋಷ),

೮)ವೇದಾಂಗ ಜ್ಯೋತಿಷ,

೯)ವೇದಾಂಗ ಕಲ್ಪ/ಕಲ್ಪಸೂತ್ರಗಳು(ಬೌಧಾಯನ, ಆಶ್ವಲಾಯನಾದಿ ವಿವಿಧ ಸೂತ್ರಪ್ರವರ್ತಕ ಋಷಿಮುನಿಪ್ರಣೀತ ಶ್ರೌತಸೂತ್ರಗಳು, ಧರ್ಮಸೂತ್ರಗಳು, ಗೃಹ್ಯಸೂತ್ರಗಳು ಮತ್ತು ಶುಲ್ಬಸೂತ್ರಗಳು),

೧೦)ಋಗ್ವೇದ(ಛಂದೋಮಯ ಪದ್ಯರೂಪದ ದೇವತಾಸ್ತುತಿಪರ ಋಕ್ಕುಗಳು) ಹಾಗೂ ಇದರ ಉಪವೇದವಾದ ಆಯುರ್ವೇದ,

೧೧)ಯಜುರ್ವೇದ(ಯಜ್ಞಪರವಾದ ಛಂದ:ಪ್ರಧಾನವಲ್ಲದ ನಿಗದ/ಗದ್ಯ/ಯಜುಸ್ಸುಗಳು) ಹಾಗೂ ಇದರ ಉಪವೇದವಾದ ಧನುರ್ವೇದ,

೧೨)ಸಾಮವೇದ(ದೇವತೋಪಾಸನಾಪರ ಸಪ್ತಸ್ವರಮಯ ಗಾಯನರೂಪೀ ಸಾಮನ್ ಗಳು) ಹಾಗೂ ಇದರ ಉಪವೇದವಾದ ಗಾಂಧರ್ವವೇದ(ಸಂಗೀತಶಾಸ್ತ್ರದ ಮೂಲ),

೧೩)ಅಥರ್ವವೇದ(ಲೌಕಿಕವಿಜ್ಞಾನ,ವಾಸ್ತು,ಔಷಧಿ,ಚಿಕಿತ್ಸೆ,ಮಂತ್ರವಾದ,ತಾಂತ್ರಿಕವಿಚಾರಪ್ರಧಾನ ಮಂತ್ರಗಳು) ಹಾಗೂ ಇದರ ಉಪವೇದವಾದ ಸ್ಥಾಪತ್ಯವೇದ/ವಾಸ್ತುಶಾಸ್ತ್ರ,

೧೪)ಪಂಚಮವೇದವೆನಿಸಿರುವ ವ್ಯಾಸಮಹಾಭಾರತ, ವಾಲ್ಮೀಕಿರಾಮಾಯಣಾದಿ ಇತಿಹಾಸಗಳು ಹಾಗೂ ನಾರದಪಾಂಚರಾತ್ರಾದಿ ಆಗಮಶಾಸ್ತ್ರಗಳು.

     ಇವು ೧೪, ಧರ್ಮದ ಮತ್ತು ವಿದ್ಯೆಗಳ ಮೂಲಸ್ಥಾನಗಳು ಎಂಬುದು, ಇಡಿಯ ಶುಕ್ಲಯಜುರ್ವೇದದ ದ್ರಷ್ಟಾರರಾದ, ಸ್ಮೃತಿಕಾರರೂ ಆಗಿರುವ ಬ್ರಹ್ಮಜ್ಞಾನಿ ಯಾಜ್ಞವಲ್ಕ್ಯರ ಅಭಿಮತ. 

ಕೃಷ್ಣಂ ನಾರಾಯಣಂ ವಂದೇ ಕೃಷ್ಣಂ ವಂದೇ ವ್ರಜಪ್ರಿಯಮ್ |

ಕೃಷ್ಣಂ ದ್ವೈಪಾಯನಂ ವಂದೇ ಕೃಷ್ಣಂ ವಂದೇ ಪೃಥಾ ಸುತಮ್ ||೧||

ಸಚ್ಚಿದಾನಂದರೂಪಾಯ ವಿಶ್ವೋತ್ಪತ್ತ್ಯಾದಿಹೇತವೇ |

ತಾಪತ್ರಯವಿನಾಶಾಯ ಶ್ರೀಕೃಷ್ಣಾಯ ವಯಂ ನುಮ: ||೨||

(ವಸಂತತಿಲಕಾವೃತ್ತಮ್*)

ಯಂ ಪ್ರವ್ರಜಂತಮನುಪೇತಮಪೇತಕೃತ್ಯಂ

ದ್ವೈಪಾಯನೋ ವಿರಹಕಾತರ ಆಜುಹಾವ |

ಪುತ್ರೇತಿ ತನ್ಮಯತಯಾ ತರವೋऽಭಿನೇದು-

-ಸ್ತಂ ಸರ್ವಭೂತಹೃದಯಂ ಮುನಿಮಾನತೋऽಸ್ಮಿ ||೩||


( *ಲಕ್ಷಣ - “ಉಕ್ತಾ ವಸಂತತಿಲಕಾ ತಭಜಾಜಗೌಗ:”)

ವೇದಾರ್ಥಾದಧಿಕಂ ಮನ್ಯೇ ಪುರಾಣಾರ್ಥಂ ವರಾನನೇ |

ವೇದಾ: ಪ್ರತಿಷ್ಠಿತಾಸ್ಸರ್ವೇ ಪುರಾಣೇ ನಾತ್ರ ಸಂಶಯ: ||

(ನಾರದೀಯ ಪುರಾಣ ೨-೨೪-೧೭)

ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ |

ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ ||

(ಮ.ಭಾ.೧,೧,೨೩೭ & ವಾ.ಪು.೧-೨೦೧)

೧) “ಪುರಾಣಂ ಪುರಾವೃತ್ತಮ್”(ನೀಲಕಂಠೀಯಮ್)- ಪುರಾಣವು ಹಿಂದಿನ ಸಮಾಚಾರ.

೨) “ಯಸ್ಮಾತ್ ಪುರಾ ಹಿ ಉನಕ್ತಿ ಇದಂ ಪುರಾಣಂ ತೇನ ಸಂಸ್ಮೃತಮ್”(ಬ್ರಹ್ಮಾಂಡಪುರಾಣ)- ಸರ್ವಪ್ರಥಮವಾಗಿ ಜ್ಞಾನಪ್ರಕಾಶವನ್ನುಂಟುಮಾಡಿದ ಸಾಹಿತ್ಯ.

೩) “ಪುರಾ ನವಂ ಭವತಿ” (ನಿರುಕ್ತಿ)- ಹಳೆಯದೂ ಹೌದು, ಹೊಸದೂ ಹೌದು. ಪುರಾತನವೂ, ಸನಾತನವೂ, ವಿನೂತನವೂ, ಚಿರನೂತನವೂ -ಇವೆರಡೂ ಹೌದು.

೪) “ಋಚ: ಸಾಮಾನಿ ಛಂದಾಂಸಿ ಪುರಾಣಂ ಯಜುಷಾ ಸಹ” (ಅಥರ್ವವೇದ)- ಋಗ್ವೇದ/ಋಕ್ಕುಗಳು, ಸಾಮವೇದ/ಸಾಮಮಂತ್ರಗಳು, ಅಥರ್ವವೇದ/ಅಥರ್ವಣ ಮಂತ್ರಗಳು/ಛಂದಸ್ಸುಗಳು, ಪುರಾಣಗಳು- ಇವೆಲ್ಲವೂ ಯಜುಸ್ಸುಗಳೊಂದಿಗೆ/ಯಜುರ್ವೇದದೊಂದಿಗೇ ಉದ್ಭವಿಸಿದವು ಎಂಬುದರಿಂದ ಪುರಾಣಗಳ ಪ್ರಾಚೀನತೆಯ ಅರಿವಾಗುತ್ತದೆ.

೫) “ಸೋऽಯಮಿತಿ ಕಿಂಚಿತ್ ಪುರಾಣಮಾಚಕ್ಷೀತ” (ಶತಪಥ ಬ್ರಾಹ್ಮಣ)- ಅವನೇ/ಪರಬ್ರಹ್ಮನೇ, ಇವನೆಂದು/ಜೀವಾತ್ಮನೆಂದು ಸ್ವಲ್ಪ ಪುರಾಣಾದಿಗಳನ್ನು ಪರಿಶೀಲಿಸಿಯೂ ಅರಿಯಬೇಕು ಎಂಬುದರಿಂದ ಪುರಾಣಗಳ ಉಪಾಧೇಯತ್ವ/ಪುರಾಣಪ್ರಮಾಣದ ಮಹತ್ವವು ತಿಳಿಯುವುದು.

೬) “ಇತಿಹಾಸಪುರಾಣಂ ಪಂಚಮಂ ವೇದಾನಾಂ ವೇದಮ್” (ಛಾಂದೋಗ್ಯ ಉಪನಿಷತ್)- ವೇದವಿಸ್ತಾರಕಗಳಾದ, ಸೃಷ್ಟಿಪ್ರಕ್ರಿಯೆಗಳಿಂದ ಕೂಡಿದ ವೃತ್ತಾಂತ/ಇತಿವೃತ್ತಗಳಾದ ಇತಿಹಾಸಪುರಾಣಾದಿಗಳು ಐದನೆಯ ವೇದಸ್ವರೂಪವೇ ಆಗಿವೆ.

೭) “ಪುರಾಣಂ ಪಂಚಮೋ ವೇದ ಇತಿ ಬ್ರಹ್ಮಾನುಶಾಸನಮ್” (ಛಾಂದೋಗ್ಯೋಪನಿಷದ್)- ಪುರಾಣವು ಪಂಚಮವೇದವೆಂಬುದು ಬ್ರಹ್ಮನ ಆದೇಶ/ಆಜ್ಞೆಯಾಗಿದೆ.

        “ಅಷ್ಟಾದಶಪುರಾಣಾನಾಂ ಕರ್ತಾ ಸತ್ಯವತೀಸುತ:”- ಸುಮಾರು ೪ ಲಕ್ಷಶ್ಲೋಕನಿಬದ್ಧವಾದ ೧೮ ಸನಾತನಗಳಾದ ಪುರಾಣಗಳ ಸಂಸ್ಕರ್ತಾ ಸತ್ಯವತೀಪುತ್ರ ವೇದವ್ಯಾಸರೇ ಆಗಿದ್ದಾರೆ. ಮಹಾಭಾರತದ ಸುಮಾರು ೧ ಲಕ್ಷದಷ್ಟು ಶ್ಲೋಕಗಳೂ ಸೇರಿ ವ್ಯಾಸಕೃತಿಗಳ ಶ್ಲೋಕಸಂಖ್ಯೆಯು ಸುಮಾರು ೫ ಲಕ್ಷಗಳಾಗುತ್ತವೆ.

ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವನ್ತರಾಣಿ ಚ |

ಸರ್ವೇಷ್ವೇತೇಷು ಕಥ್ಯನ್ತೇ ವಂಶಾನುಚರಿತಂ ಚ ಯತ್ ||

(ವಿಷ್ಣುಪುರಾಣ)

ವಂಶಾನುಚರಿತಂ ಚೇತಿ ಪುರಾಣಂ ಪಞ್ಚಲಕ್ಷಣಮ್ ||

(ಅಮರಕೋಶ)

   ಪುರಾಣವೆಂಬುದು ಮೂಲಸೃಷ್ಟಿ, ಪ್ರತಿಸೃಷ್ಟಿ, ವಿವಿಧ ದೇವ-ಋಷಿ-ರಾಜವಂಶಗಳ ಪ್ರಾಚೀನ ಚರಿತ್ರೆ, ವಿವಿಧ ಮನ್ವನ್ತರಾದಿಗಳ ವಿಷಯಗಳು, ಪೌರಾಣಿಕಕಾಲದಿಂದೀಚೆಗಿನ ಪ್ರಸ್ತುತ ಕಾಲಘಟ್ಟದ ಇತಿಹಾಸಕಾಲದ ವರೆಗಿನ ರಾಜವಂಶಗಳ ಚರಿತ್ರೆಯ ಅನುಸರಣೆ— ಈ ಐದು ಅಂಶಗಳನ್ನೊಳಗೊಂಡಿದೆ.

     ಭಾಗವತದ ಇನ್ನೊಂದು ವಿಶೇಷವೆಂದರೆ ಇದರಲ್ಲಿ ನಾರಾಯಣನನ್ನು ಪರಬ್ರಹ್ಮಸ್ವರೂಪನೆಂದು ಸ್ತುತಿಸಿದರೂ, ಬ್ರಹ್ಮ-ರುದ್ರಾದಿಗಳನ್ನೆಲ್ಲೂ ನಿಂದಿಸಿಲ್ಲ. ಅಲ್ಲದೆ, ಸಾತ್ತ್ವಿಕಗುಣಮಯನಾದ ಶ್ರೀಹರಿಯ ಚರಿತ್ರೆಯೇ ಇದರ ಪ್ರಧಾನವಸ್ತು. ಈ ಎರಡು ಕಾರಣಗಳಿಂದ, ಭಾಗವತವು ಸಾತ್ತ್ವಿಕಪುರಾಣಗಳ ಸಾಲಿಗೆ ಸೇರುತ್ತದೆ. ಈಗ ಭಾಗವತವನ್ನು ಪ್ರವೇಶಿಸಿ ಪುನೀತರಾಗೋಣ, ಮುಕ್ತರಾಗೋಣ.


ಅಧ್ಯಾಯಾನುಕ್ರಮಣಿಕೆ


ಮೊದಲಿಗೆ, ನಾರದೀಯಪುರಾಣದಲ್ಲಿ (ಅಧ್ಯಾಯ ೪) ಬರುವ ಸ್ಕನ್ಧಶಃ ಭಾಗವತಪ್ರತಿಪಾದ್ಯವಿಷಯಗಳ ಸುಂದರಪ್ರಸ್ತುತಿಯನ್ನು ನೋಡೋಣ.

ತತ್ರ ತು ಪ್ರಥಮೇ ಸ್ಕನ್ಧೇ ಸೂತರ್ಷೀಣಾಂ ಸಮಾಗಮಃ |

ವ್ಯಾಸಸ್ಯ ಚರಿತಂ ಪುಣ್ಯಂ ಪಾಣ್ಡವಾನಾಂ ತಥೈವ ಚ |

ಪಾರೀಕ್ಷಿತಮುಪಾಖ್ಯಾನಮಿತೀದಂ ಸಮುದಾಹೃತಮ್ ||

ಭಾಗವತದ ಪ್ರಥಮಸ್ಕಂಧದಲ್ಲಿ ಸೂತಮುನಿ ಹಾಗೂ ಶೌನಕಾದಿ ಮಹರ್ಷಿಗಳ ಸಮಾಗಮ / ಭೇಟಿ, ವ್ಯಾಸರ ಚರಿತೆ, ಪಾಂಡವರ ಚರಿತ್ರೆ, ಪರೀಕ್ಷಿತಪುತ್ರನಾದ ಜನಮೇಜಯನ ಉಪಾಖ್ಯಾನ (ಉಪ-ಆಖ್ಯಾನ) / ಉಪಕಥೆ— ಇವೆಯೆಂಬುದಾಗಿ ಹೇಳಲಾಗಿದೆ.

ಪರೀಕ್ಷಿಚ್ಛುಕಸಂವಾದೇ ಸೃತಿದ್ವಯನಿರೂಪಣಮ್ |

ಬ್ರಹ್ಮನಾರದಸಂವಾದೇऽವತಾರಚರಿತಾಮೃತಮ್ ||

ಪುರಾಣಲಕ್ಷಣಂ ಚೈವ ಸೃಷ್ಟಿಕಾರಣಸಂಭವಃ |

ದ್ವಿತೀಯೋऽಯಂ ಸಮುದಿತಃ ಸ್ಕನ್ಧೋ ವ್ಯಾಸೇನ ಧೀಮತಾ ||

ಪರೀಕ್ಷಿದ್ರಾಜ-ಶುಕಮುನಿಗಳ ಸಂವಾದ / ಸಂಭಾಷಣೆಯಲ್ಲಿ (ಪರೀಕ್ಷಿತ್-ಶುಕಸಂವಾದೇ), ಕ್ರಮಮುಕ್ತಿ-ಸದ್ಯೋಮುಕ್ತಿಗಳೆಂಬ ಮುಕ್ತಿಯ ಸೃತಿ / ಪಥವೆರಡರ ನಿರೂಪಣೆ (ಸೃತಿ-ದ್ವಯ-ನಿರೂಪಣಮ್), ಬ್ರಹ್ಮದೇವ-ನಾರದದೇವರ್ಷಿಗಳ ಸಂವಾದದಲ್ಲಿ (ಬ್ರಹ್ಮ-ನಾರದ-ಸಂವಾದೇ), ಭಗವದವತಾರಗಳ ಅಮೃತಮಯ ಚರಿತೆ (ಅವತಾರ-ಚರಿತಾಮೃತಮ್), ಪುರಾಣದ ಲಕ್ಷಣ (ಪುರಾಣ-ಲಕ್ಷಣಂ), ಹಾಗೂ (ಚ ಏವ), ಸೃಷ್ಟಿಗೆ ಕಾರಣನಾದವನ / ಬ್ರಹ್ಮನ ಜನನ ಮತ್ತಿತರ ಸೃಷ್ಟಿಪ್ರಕ್ರಿಯೆಗಳು (ಸೃಷ್ಟಿ-ಕಾರಣ-ಸಂಭವಃ)— ಭಾಗವತದ ಈ ೨ನೇ ಸ್ಕಂಧವು (ಅಯಂ ದ್ವಿತೀಯಃ ಸ್ಕನ್ಧಃ), ಧೀಮಂತನಾದ ವ್ಯಾಸನಿಂದ (ಧೀಮತಾ ವ್ಯಾಸೇನ), ಈ ವಿಷಯಗಳ ಸಹಿತವಾಗಿ ಸುಂದರವಾಗಿ ಮೂಡಿಬಂತು (ಸಮ್ ಉದಿತಃ).

ಚರಿತಂ ವಿದುರಸ್ಯಾಥ ಮೈತ್ರೇಯೇಣಾಸ್ಯ ಸಙ್ಗಮಃ |

ಸೃಷ್ಟಿಪ್ರಕರಣಂ ಪಶ್ಚಾದ್ ಬ್ರಹ್ಮಣಃ ಪರಮಾತ್ಮನಃ |

ಕಾಪಿಲಂ ಸಾಙ್ಖ್ಯಮಪ್ಯತ್ರ ತೃತೀಯೋऽಯಮುದಾಹೃತಃ ||

ವಿದುರನ ಚರಿತೆ, ಅನಂತರ ಮೈತ್ರೇಯನೊಂದಿಗೆ ಇವನ ಸಮಾಗಮ, ಬಳಿಕ ಪರಮಾತ್ಮ ಬ್ರಹ್ಮನ ಸೃಷ್ಟಿಪ್ರಕ್ರಿಯೆ, ಹಾಗೆಯೇ ಇಲ್ಲಿ ಭಗವದವತಾರವಾದ ಕಪಿಲಮುನಿಯ ಸಾಂಖ್ಯಯೋಗ— ಭಾಗವತದ ಮೂರನೆಯ ಅಧ್ಯಾಯದಲ್ಲಿ ಇವು ಹೇಳಲ್ಪಟ್ಟಿವೆ.

ಸತ್ಯಾಶ್ಚರಿತಮಾದೌ ತು ಧ್ರುವಸ್ಯ ಚರಿತಂ ತತಃ |

ಪೃಥೋಃ ಪುಣ್ಯಸಮಾಖ್ಯಾನಂ ತತಃ ಪ್ರಾಚೀನಬರ್ಹಿಷಃ |

ಇತ್ಯೇಷಸ್ತುರ್ಯೋ ಗದಿತೋ ವಿಸರ್ಗೇ ಸ್ಕನ್ಧ ಉತ್ತಮಃ ||

ದಕ್ಷಪುತ್ರಿಯಾಗಿ ದಾಕ್ಷಾಯಣೀ ಎನಿಸಿದ ಶಿವನ ಪತ್ನಿಯಾದ ಸತೀದೇವಿಯ ಚರಿತೆಯು ಮೊದಲಿಗೂ, ತರುವಾಯ ಭಕ್ತಬಾಲಕನಾದ ಧ್ರುವನ ಚರಿತ್ರೆಯೂ, ಬಳಿಕ ಪೃಥುಮಹಾರಾಜನ ಹಾಗೂ ರಾಜರ್ಷಿಯಾದ ಪ್ರಾಚೀನಬರ್ಹಿಯ ಪುಣ್ಯಕಥೆ— ಹೀಗೆ ತ್ಯಾಗಪ್ರಧಾನವಾದ (ವಿಸರ್ಗೇ ಉತ್ತಮಃ) ಇದು ಭಾಗವತದ ನಾಲ್ಕನೆಯ ಸ್ಕಂಧವೆನಿಸಿದೆ.

ಪ್ರಿಯವ್ರತಸ್ಯ ಚರಿತಂ ತದ್ವಂಶ್ಯಾನಾಂ ಚ ಪುಣ್ಯದಮ್ |

ಬ್ರಹ್ಮಾಣ್ಡಾನ್ತರ್ಗತಾನಾಞ್ಚ ಲೋಕಾನಾಂ ವರ್ಣನನ್ತಥಾ |

ನರಕಸ್ಥಿತಿರಿತ್ಯೇಷಃ ಸಂಸ್ಥಾನೇ ಪಞ್ಚಮೋ ಮತಃ ||

ಪ್ರಿಯವ್ರತ ಮಹಾರಾಜನ ಹಾಗೂ ಆತನ ವಂಶದವರ ಪುಣ್ಯಪ್ರದವಾದ ಚರಿತ್ರೆ, ಹಾಗೆಯೇ ಬ್ರಹ್ಮಾಂಡದೊಳಗಿರುವ ಲೋಕಗಳ ವರ್ಣನೆ ಮತ್ತು ವಿವಿಧ ನರಕಗಳ ಸ್ಥಿತಿ— ಇವು ಇರುವ ಭಾಗವು ಭಾಗವತದ ಪಂಚಮ / ಐದನೆಯ ಸ್ಕಂಧವೆನ್ನುವರು.

ಅಜಾಮಿಳಸ್ಯ ಚರಿತಂ ದಕ್ಷಸೃಷ್ಟಿನಿರೂಪಣಮ್ |

ವೃತ್ರಾಖ್ಯಾನಂ ತತಃ ಪಶ್ಚಾನ್ಮರುತಾಂ ಜನ್ಮ ಪುಣ್ಯದಮ್ |

ಷಷ್ಠೇऽಯಮುದಿತಃ ಸ್ಕನ್ಧೋ ವ್ಯಾಸೇನ ಪರಿಪೋಷಣೇ ||

ಅಜಾಮಿಳನ ಚರಿತೆ, ದಕ್ಷನ ಸೃಷ್ಟಿಯ ನಿರೂಪಣೆ, ವೃತ್ರಾಸುರನ ಕಥೆ, ಮರುತ್ತುಗಳ ಪುಣ್ಯಪ್ರದವಾದ ಜನ್ಮದ ಚರಿತೆ— ಇವಿಷ್ಟು ವಿಷಯಗಳಿಂದ ಪರಿಪುಷ್ಟವಾದ ಭಾಗವತದ ಈ ೬ನೆಯ ಸ್ಕಂಧವು ವ್ಯಾಸರಿಂದ ಉದಯಿಸಿತು.

ಪ್ರಹ್ಲಾದಚರಿತಂ ಪುಣ್ಯಂ ವರ್ಣಾಶ್ರಮನಿರೂಪಣಮ್ |

ಸಪ್ತಮೀ ಗದಿತೋ ವತ್ಸ ವಾಸನಾಕರ್ಮಕೀರ್ತನೇ ||

ದೈತ್ಯಕುಲದಲ್ಲಿ ಜನಿಸಿದ ಪ್ರಹ್ಲಾದನ ಪುಣ್ಯಚರಿತೆ, ಚಾತುರ್ವರ್ಣಾಶ್ರಮಧರ್ಮದ ನಿರೂಪಣೆ, ವಿಷಯವಾಸನೆಗಳ- ಕರ್ಮವಿಚಾರಗಳ ವಿವರಣೆ— ಹೇ ವತ್ಸನೆ! ಇದು ಭಾಗವತದ ಏಳನೆಯ ಸ್ಕಂಧವೆಂದು ನಿಗದಿತವಾಗಿದೆ.

ಗಜೇನ್ದ್ರಮೋಕ್ಷಣಾಖ್ಯಾನಂ ಮನ್ವನ್ತರನಿರೂಪಣಮ್ |

ಸಮುದ್ರಮಥನಂ ಚೈವ ಬಲಿವೈಭವಬನ್ಧನಮ್ |

ಮತ್ಸ್ಯಾವತಾರಚರಿತಮಷ್ಟಮೋऽಯಂ ಪ್ರಕೀರ್ತಿತಃ ||

ಗಜೇಂದ್ರಮೋಕ್ಷದ ಆಖ್ಯಾನ, ವಿವಿಧ ಮನ್ವಂತರಗಳೆಂಬ ವಿಶಾಲವಾದ ಕಾಲಗಣನೆಯ ನಿರೂಪಣೆ, ಸಮುದ್ರಮಥನ, ದೈತ್ಯರಾಜ ಮಹಾಬಲಿಯನ್ನು ಶ್ರೀಹರಿಯ ವಾಮನ-ತ್ರಿವಿಕ್ರಮಮೂರ್ತಿಯು ಬಂಧಿಸುವಿಕೆ, ಮತ್ಸ್ಯಾವತಾರಚರಿತೆ— ಇದು ಭಾಗವತದ ೮ನೆಯ ಸ್ಕಂಧವೆಂದು ಹೇಳಲ್ಪಟ್ಟಿದೆ.

ಸೂರ್ಯವಂಶಸಮಾಖ್ಯಾನಂ ಸೋಮವಂಶನಿರೂಪಣಮ್ |

ವಂಶ್ಯಾನುಚರಿತೋ ಪ್ರೋಕ್ತೋ ನವಮೋऽಯಂ ಮಹಾಮತೇ ||

ಸೂರ್ಯವಂಶದ ರಾಜ-ಮಹಾರಾಜರ ಚರಿತೆ, ಚಂದ್ರವಂಶದ ಅರಸುಗಳ ನಿರೂಪಣೆ, ಅವರ ವಂಶೀಯರ ಮುಂದುಮುಂದಿನ ತಲೆಮಾರಿನ ಚರಿತ್ರೆಯು ಹೇಳಲ್ಪಟ್ಟಿದೆ ಈ ಭಾಗವತದ ೯ನೇ ಅಧ್ಯಾಯದಲ್ಲಿ, ಎಲೈ ಮಹಾಮತಿಯೇ!

ಕೃಷ್ಣಸ್ಯ ಬಾಲಚರಿತಂ ಕೌಮಾರಂ ಚ ವ್ರಜಸ್ಥಿತಿಃ |

ಕೈಶೋರಂ ಮಥುರಾಸ್ಥಾನಂ ಯೌವನಂ ದ್ವಾರಕಾಸ್ಥಿತಿಃ |

ಭೂಭಾರಹರಣಂ ಚಾತ್ರ ನಿರೋಧೇ ದಶಮಂ ಸ್ಮೃತಃ ||

ಕೃಷ್ಣನ ಬಾಲಚರಿತೆ, ಕೌಮಾರಲೀಲೆ, ನಂದಗೋಕುಲದಲ್ಲಿ ವಾಸ, ಮಥುರಾಪಟ್ಟಣದಲ್ಲಿ ಕಿಶೋರಾವಸ್ಥೆ, ದ್ವಾರಕೆಯಲ್ಲಿ ಯೌವನ, ಇಲ್ಲಿ / ಈ ಎಲ್ಲಾ ಅವಸ್ಥೆಗಳಲ್ಲೂ ಅನೇಕ ಅಸುರರ ತಡೆ-ಸಂಹಾರಾದಿಗಳಿಂದ ಭೂಭಾರವನ್ನು ತಗ್ಗಿಸಿದ್ದು -- ಇದು ಭಾಗವತದ ದಶಮ / ಹತ್ತನೆಯ ಸ್ಕಂಧದ ಕಥಾವಸ್ತು ಎಂಬುದಾಗಿ ಹೇಳಿದೆ.

ನಾರದೇನ ತು ಸಂವಾದೋ ವಸುದೇವಸ್ಯ ಕೀರ್ತಿತಃ | 

ಯದೋಶ್ಚ ದತ್ತಾತ್ರೇಯೇಣ ಶ್ರೀಕೃಷ್ಣೇನೋದ್ಧವಸ್ಯ ಚ |

ಯಾದವಾನಾಂ ಮಿಥೋऽನ್ತಶ್ಚ ಮುಕ್ತಾವೇಕಾದಶಃ ಸ್ಮೃತಃ ||

ನಾರದನೊಂದಿಗೆ ವಸುದೇವನ ಸಂವಾದ, ದತ್ತಾತ್ರೇಯನೊಂದಿಗೆ ಯದುಮಹಾರಾಜನ ಸಂವಾದ, ಶ್ರೀಕೃಷ್ಣನೊಂದಿಗೆ ಉದ್ಧವನ ಸಂವಾದ, ಯಾದವರ ಪರಸ್ಪರ ಕಲಹದಿಂದ ಸರ್ವನಾಶ / ವಂಶದ ಅಂತ್ಯ -- ಹೀಗೆ ಮುಕ್ತಿಬೋಧನಾಪ್ರಧಾನವಾದುದು ಭಾಗವತದ ೧೧ನೆಯ ಸ್ಕಂಧವೆಂದು ಕೀರ್ತಿತವಾಗಿದೆ / ಪ್ರಸಿದ್ಧವಾಗಿದೆ.


ಭವಿಷ್ಯ-ಕಲಿ-ನಿರ್ದೇಶೋ ಮೋಕ್ಷೋ ರಾಜ್ಞಃ ಪರೀಕ್ಷಿತಃ |

ವೇದಶಾಖಾಪ್ರಣಯನಂ ಮಾರ್ಕಣ್ಡೇಯತಪಃ ಸ್ಮೃತಮ್ |

ಸೌರೀವಿಭೂತಿರುದಿತಾ ಸಾತ್ತ್ವತೀ ಚ ತತಃ ಪರಮ್ |

ಪುರಾಣಸಂಖ್ಯಾಕಥನಮಾಶ್ರಯೇ ದ್ವಾದಶೋ ಹ್ಯಯಮ್ |

ಇತ್ಯೇವಂ ಕಥಿತಂ ವತ್ಸ! ಶ್ರೀಮದ್ಭಾಗವತಂ ತವ ||


ವ್ಯಾಸರು ಭಾಗವತ ಬರೆದ ಕಾಲದ ತರುವಾಯ ಭವಿಷ್ಯದಲ್ಲಿ ದ್ವಾಪರಾಂತ್ಯದಲ್ಲಿ ಕಲಿಯುಗದ ಯುಗಪುರುಷನಾದ ಕಲಿಯ ಪ್ರವೇಶ, ಪರೀಕ್ಷಿತನಿಂದ ಅವನಿಗೆ ನೀಡಲ್ಪಟ್ಟ ನಿರ್ದೇಶನ / ಆದೇಶ, ರಾಜಾ ಪರೀಕ್ಷಿತನ ಮೋಕ್ಷ, ವೇದಗಳು ಹಾಗೂ ವಿವಿಧ ಋಷಿಪ್ರಣೀತವಾದ ಅವುಗಳ ವಿವಿಧ ಶಾಖೆಗಳು, ಮಾರ್ಕಂಡೇಯನ ತಪಸ್ಸು, ಸೂರ್ಯಾದಿ ದ್ವಾದಶಾದಿತ್ಯರ ವಿಭೂತಿ / ಮಹಿಮೆಯ ವರ್ಣನೆ— ಇವು ಸ್ಮರಿಸಲ್ಪಟ್ಟಿವೆ. ಅದರ ನಂತರ, ಸಾತ್ತ್ವತೀ / ಯದುವಂಶದ ಚರಿತ್ರೆಯು ಹೇಳಲ್ಪಟ್ಟಿದೆ. ಪುರಾಣಗಳ ಸಂಖ್ಯೆ, ಶ್ಲೋಕಸಂಖ್ಯೆಗಳ ಕುರಿತು ಕೊನೆಗೆ ಹೇಳಿರುವ ಭಾಗವತದ ಈ ಅಂತಿಮ ಭಾಗವಾದ ೧೨ನೆಯ ಸ್ಕಂಧವನ್ನು ಆಶ್ರಯಿಸುತ್ತೇನೆ. ಮಗನೆ! ಈ ರೀತಿಯಾಗಿ ಶ್ರೀಮದ್ಭಾಗವತಮಹಾಪುರಾಣವು ಹೇಳಲ್ಪಟ್ಟಿದೆ. (ಎಂಬುದಾಗಿ ನಾರದೀಯಪುರಾಣವು ಹೇಳಿದೆ.)


ಫಲಶ್ರುತಿ


ಇನ್ನು ಫಲಶ್ರುತಿಯನ್ನು ನಾರದೀಯಪುರಾಣವು ಹೀಗೆ ಹೇಳಿದೆ—


ವಕ್ತುಃ ಶ್ರೋತುಶ್ಚೋಪದೇಷ್ಟುರನುಮೋದಿತುರೇವ ಚ |

ಸಾಹಾಯ್ಯಕರ್ತುರ್ಗದಿತಂ ಭಕ್ತಿಭುಕ್ತಿವಿಮುಕ್ತಿದಮ್ ||

ಯೋऽಪ್ಯನುಕ್ರಮಣೀಮೇತಾಂ ಶ್ರಾವಯೇಚ್ಛ್ರುಣುಯಾತ್ತಥಾ |

ಸ ಪುರಾಣಶ್ರವಣಜಂ ಪ್ರಾಪ್ನೋತಿ ಫಲಮುತ್ತಮಮ್ ||


ಶ್ರೀಮದ್ಭಾಗವತವನ್ನು ಹೇಳುವವನಿಗೆ, ಕೇಳುವವನಿಗೆ, ಉಪದೇಶಿಸುವವನಿಗೆ, ಅನುಮೋದಿಸಿ ಒಪ್ಪಿಕೊಳ್ಳುವವನಿಗೆ, ಪಾರಾಯಣಕ್ಕೆ ಸಹಕರಿಸಿದವನಿಗೆ— ಇವರೆಲ್ಲರಿಗೂ ಭಕ್ತಿ / ದೈವೀಪ್ರೇಮ - ಧರ್ಮಯುಕ್ತವಾದ ಭುಕ್ತಿ / ಭೋಗ / ಲೌಕಿಕಸುಖ - ವಿಶೇಷವಾದ ಆತ್ಯಂತಿಕ ಮುಕ್ತಿಗಳನ್ನು ಉಂಟುಮಾಡುತ್ತದೆ ಈ ಪುರಾಣ.

ಯಾರು ಈ ಪುರಾಣದ ಅಧ್ಯಾಯಶಃ ಕಥಾನುಕ್ರಮಣಿಕೆಯನ್ನು ಕೇಳಿಸುತ್ತಾರೋ ಹಾಗೂ ಕೇಳುತ್ತಾರೋ, ಅವರೂ ಇಡಿಯ ಪುರಾಣವನ್ನು ಹೇಳಿದ / ಕೇಳಿದ ಉತ್ತಮವಾದ ಫಲವನ್ನೇ ಪ್ರಾಪ್ತಿಮಾಡಿಕೊಳ್ಳುತ್ತಾರೆ.


ಭಗವದ್ಭಕ್ತರೂಪೀ ಭಾಗವತೋತ್ತಮರ ಲಕ್ಷಣ


(ಭಾಗವತಪುರಾಣ ಸ್ಕಂಧ ೧೧ರಲ್ಲಿರುವಂತೆ)

ಸರ್ವಭೂತೇಷು ಯಃ ಪಶ್ಯೇದ್-ಭಗವದ್-ಭಾವಮಾತ್ಮನಃ |

ಭೂತಾನಿ ಭಗವತ್ಯಾತ್ಮನ್ಯೇಷ ಭಾಗವತೋತ್ತಮಃ ||


ಅನ್ವಯಃ—  ಯಃ ಸರ್ವಭೂತೇಷು ಆತ್ಮನಃ ಭಗವದ್ಭಾವಮ್ (ಚ), ಆತ್ಮನಿ ಭಗವತಿ (ಚ) ಭೂತಾನಿ (ಚ) ಪಶ್ಯೇತ್, ಏಷಃ ಭಾಗವತೋತ್ತಮಃ (ಇತಿ ಕಥ್ಯತೇ) |

ತಾತ್ಪರ್ಯ— ಯಾವನು ಎಲ್ಲಾ ಚರಾಚರಗಳಲ್ಲೂ ತನ್ನನ್ನೂ, ಭಗವಂತನನ್ನೂ, ಅಂತೆಯೇ ತನ್ನಲ್ಲೂ, ಭಗವಂತನಲ್ಲೂ ಸಕಲ ಚರಾಚರಗಳನ್ನೂ ಕಾಣುವನೋ, ಅಂಥವನು ಭಗವಂತನಿಗೆ ಅತಿ ಹತ್ತಿರದವನಾದ ಭಾಗವತೋತ್ತಮ(ನೆಂದು ಕರೆಯಲ್ಪಟ್ಟಿದ್ದಾನೆ).


ನ ಯಸ್ಯಾಸ್ತ್ಯಪರ ಇತಿ ವಿತ್ತೇಷ್ವಾತ್ಮನಿ ವಾ ಭಿದಾ |

ಸರ್ವಭೂತಸಮಃ ಶಾನ್ತಃ ಸ ವೈ ಭಾಗವತೋತ್ತಮಃ ||


ಅನ್ವಯಃ— ಯಸ್ಯ ವಿತ್ತೇಷು ಅಪರೇ ಆತ್ಮನಿ ವಾ ಇತಿ ಭಿದಾ ನ ಅಸ್ತಿ, ಸರ್ವಭೂತಸಮಃ ಶಾನ್ತಃ ವೈ ಸಃ ಭಾಗವತೋತ್ತಮಃ |

ತಾತ್ಪರ್ಯ— ಯಾವನಿಗೆ ಸಂಪತ್ತಿನ ವಿನಿಯೋಗಾದಿ ವಿಷಯಗಳಲ್ಲಿ ಬೇರೆಯವರು, ತನ್ನವರು ಎಂಬ ಭೇದವಿಲ್ಲವೋ, ಅಂತಹ ಸರ್ವ ಚರಾಚರಗಳಲ್ಲೂ ಸಮಾನ ಭಾವವಿರುವ, ಮನೋನಿಯಂತ್ರಣ ಸಾಮರ್ಥ್ಯದಿಂದಾಗಿ ಶಾಂತಮನಃಸ್ಥಿತಿಯವನಾದವನೇ ಭಾಗವತೋತ್ತಮನು, ಉತ್ತಮ ಭಗವದ್ಭಕ್ತನು, ಭಗವಂತನಿಗೆ ಅತಿ ಸನಿಹದವನು.


ಜ್ಞಾತ್ವಾ ಜ್ಞಾತ್ವಾऽಥ ಯೇ ವೈ ಮಾಂ ಯಾವಾನ್ ಯಶ್ಚಾಸ್ಮಿ ಯಾದೃಶಃ |

ಭಜನ್ತ್ಯನನ್ಯಭಾವೇನ ತೇ ವೈ ಭಾಗವತಾ ಮತಾಃ ||


ನನ್ನನ್ನು (ಭಗವಂತನನ್ನು) ಯಾರು ಎಂಥವನು, ಹೇಗಿರುವನು, ಎಷ್ಟರವನು, ಯಾವನು— ಹೀಗೆ ಅವನ ಸ್ವರೂಪ,ಗುಣ,ಲೀಲಾದಿಗಳನ್ನು ಓದಿಯೋ, ಕೇಳಿಯೋ, ಮನನಾದಿಗಳಿಂದಲೋ, ಉಪಾಸನೆ, ಭಜನೆಗಳಿಂದಲೋ— ಹೀಗೆ ನಾನಾರೀತಿಗಳಿಂದ ಬೇರೇನನ್ನೂ ಯೋಚಿಸದೆ ಅನನ್ಯಭಾವದಿಂದ (ಅನ್-ಅನ್ಯ) ತನ್ನೊಳಗೇ ಅವನನ್ನೂ ಕಾಣುವರೋ, ಅಂಥವರು ಪರಮ ಭಾಗವತೋತ್ತಮರೇ ಸರಿ.


ನ ಕಾಮಕರ್ಮಬೀಜಾನಾಂ ಯಸ್ಯ ಚೇತಸಿ ಸಂಭವಃ |

ವಾಸುದೇವೈಕನಿಲಯಃ ಸ ವೈ ಭಾಗವತೋತ್ತಮಃ ||


ಯಾವನ ಮನದಲ್ಲಿ ವಾಸುದೇವನೊಬ್ಬನೇ ಮನೆ ಮಾಡಿರುವನೋ, ಇದರಿಂದಾಗಿ ಯಾವನ ಮನದಲ್ಲಿ ಕಾಮ / ಬಯಕೆ ಹಾಗೂ ಫಲದಾಸೆಯಿರುವ ಕರ್ಮಗಳ ಬೀಜಗಳೇ ಉಂಟಾಗಲಾರವೋ, ಅಂಥವನು ಭಗವಂತನಿಗೆ ಪ್ರಿಯತಮನಾಗಿ, ಭಾಗವತರಲ್ಲಿ / ಭಗವದ್ಭಕ್ತರಲ್ಲಿ ಉತ್ತಮ / ಶ್ರೇಷ್ಠನೆನಿಸುವನು.


(ಹರಿಯೋಗೇಶ್ವರೋತ್ತರದಲ್ಲಿರುವಂತೆ)

ಗೃಹೀತ್ವಾऽಪೀಂದ್ರಿಯೈರರ್ಥಾನ್ ಯೋ ನ ದ್ವೇಷ್ಟಿ ನ ಕಾಂಕ್ಷತಿ |

ವಿಷ್ಣೋರ್ಮಾಯಾಮಿದಂ ಪಶ್ಯನ್ ಸ ವೈ ಭಾಗವತೋತ್ತಮಃ ||


ಕಣ್ಣು ಮುಂತಾದ ಇಂದ್ರಿಯಗಳಿಂದ ದೃಶ್ಯ ಮೊದಲಾದ ಇಂದ್ರಿಯಾರ್ಥ ವಿಷಯಗಳನ್ನು ಸ್ವೀಕರಿಸಿಯೂ ಯಾವನು ಅವು ಕೇವಲ ಮಹಾವಿಷ್ಣುವಿನ ಮಾಯಾವಿಲಾಸವೆಂಬುದಾಗಿ ಕಾಣುತ್ತಾ, ಅವನ್ನು ದ್ವೇಷಿಸುವುದೂ ಇಲ್ಲ, ಬಯಸುವುದೂ ಇಲ್ಲವೋ, ಅಂಥವನೇ ಭಾಗವತೋತ್ತಮನು.


ವಿಸೃಜತಿ ಹೃದಯಂ ನ ಯಸ್ಯ ಸಾಕ್ಷಾತ್

ಹರಿರವಶಾಭಿಹಿತೋऽಪ್ಯರ್ಥೌಘನಾಶಃ |

ಪ್ರಣಯರಸನಯಾ ಧೃತಾಙ್ಘ್ರಿಪದ್ಮಃ

ಸ ಭವತಿ ಭಾಗವತಪ್ರಧಾನ ಉಕ್ತಃ ||


ಅರ್ಥ / ಸಂಪತ್ತಿನ / ಬಯಕೆಯ ಓಘ / ಸಮೂಹವೇ ನಾಶಹೊಂದಿದರೂ, ಯಾವನ ಹೃದಯ / ಮನಸ್ಸು ಯತ್ನವಿಲ್ಲದೆಯೇ ಶ್ರೀಹರಿಯಲ್ಲೇ ನೆಟ್ಟು, ಆತನ ಬಗ್ಗೆ ಪ್ರೇಮಪೂರಿತವಾದ ನಾಲಿಗೆಯಿಂದ ಶ್ರೀಮನ್ನಾರಾಯಣನ ಚರಣಕಮಲದ ಮಕರಂದವನ್ನು ಬಿಡದೆ ಯಾವನು ಆಸ್ವಾದಿಸುವನೋ ಆತನೇ ಭಾಗವತರಲ್ಲಿ ಪ್ರಧಾನನು ಎನ್ನಲಾಗಿದೆ.


(ಬೃಹನ್ನಾರದೀಯಪುರಾಣದಲ್ಲಿರುವಂತೆ)

ಶಿವೇ ಚ ಪರಮೇಶಾನೇ ವಿಷ್ಣೌ ಚ ಪರಮಾತ್ಮನಿ |

ಸಮಬುದ್ಧ್ಯಾ ಪ್ರವರ್ತನ್ತೇ ತೇ ವೈ ಭಾಗವತೋತ್ತಮಾಃ ||


ಪರಮೇಶ್ವರನಾದ ಶಿವನಲ್ಲಿ ಹಾಗೂ ಪರಮಾತ್ಮನಾದ ವಿಷ್ಣುವಿನಲ್ಲಿ ಸಮಬುದ್ಧಿಯಿಂದ ಭೇದವಿಲ್ಲದೆ, “ಏಕಂ ಸದ್ ವಿಪ್ರಾ ಬಹುಧಾ ವದನ್ತಿ”, “ದೇವನೊಬ್ಬ ನಾಮ ಹಲವು”— ಎಂಬಂತೆ ಅವರಿಬ್ಬರೂ ಒಂದೇ ಪರಮಶಕ್ತಿಯ ೨ ವಿಭಿನ್ನ ನಾಮರೂಪಗಳೆಂದು ತಿಳಿದು  ವ್ಯವಹರಿಸುವವರೇ ಭಾಗವತೋತ್ತಮರು.


ತುಲಸೀಕಾನನಂ ದೃಷ್ಟ್ವಾ ಯೇ ನಮಸ್ಕುರ್ವತೇ ನರಾಃ |

ತತ್ಕಾಷ್ಠಾಙ್ಕಿತಕರ್ಣಾಃ-ಯೇ ತೇ ವೈ ಭಾಗವತೋತ್ತಮಾಃ ||


ತುಲಸೀವನವನ್ನು ನೋಡಿ ಯಾವ ನರರು / ಮಾನವರು ಪೂಜ್ಯಭಾವದಿಂದ ನಮಸ್ಕರಿಸುವರೋ ಅವರು ಹಾಗೂ ತುಳಸಿಯ ಕಾಂಡ / ಕಡ್ಡಿಯಿಂದ ಕಿವಿಚುಚ್ಚಿಸಿಕೊಂಡವರು / ತುಳಸಿಯನ್ನು ಕಿವಿಯಲ್ಲಿ ಧರಿಸಿದವರು ಭಾಗವತೋತ್ತಮರು.


ತುಲಸೀಗನ್ಧಮಾಘ್ರಾಯ ಸನ್ತೋಷಂ ಕುರ್ವತೇ ತು ಯೇ |

ತನ್ಮೂಲಮೃದ್ಧೃತಾ ಯೈಶ್ಚ ತೇ ವೈ ಭಾಗವತೋತ್ತಮಾಃ ||


ತುಳಸಿಯ ಪರಿಮಳವನ್ನು ಆಘ್ರಾಣಿಸಿ ಯಾರು ಸಂತೋಷವನ್ನು ಹೊಂದುತ್ತಾರೋ ಹಾಗೂ ತುಳಸಿಯ ಬುಡದ ಮಣ್ಣು ಯಾರಿಂದ ಧರಿಸಲ್ಪಟ್ಟಿದೆಯೋ ಅಂಥವರೇ ಭಾಗವತೋತ್ತಮರು.


ಮನ್ಮಾನಸಾಶ್ಚ ಸದ್ಭಕ್ತಾ ಮದ್ಭಕ್ತಜನಲೋಲುಪಾಃ |

ಮನ್ನಾಮಶ್ರವಣಾಸಕ್ತಾಸ್ತೇ ವೈ ಭಾಗವತೋತ್ತಮಾಃ ||


ನನ್ನನ್ನೇ  ಮನಸ್ಸಿನಲ್ಲಿ ಧ್ಯಾನಿಸುವವರು, ನನ್ನ ಒಳ್ಳೆಯ ಭಕ್ತರು, ನನ್ನ ಭಕ್ತಜನರನ್ನು ಅತಿಯಾಗಿ ಆದರಿಸುವವರು, ನನ್ನ ನಾಮಗಳನ್ನು ಕೇಳಲು ಆಸಕ್ತರಾದವರು— ಇವರೇ ನಿಶ್ಚಯವಾಗಿಯೂ ಭಾಗವತೋತ್ತಮರು ಎಂದಿರುವನು ಪರಮಾತ್ಮನು.


ಯೇऽಭಿನನ್ದನ್ತಿ ನಾಮಾನಿ ಹರೇಃ ಶೃಣ್ವನ್ತಿ ಹರ್ಷಿತಾಃ |

ರೋಮಾಂಚಿತಶರೀರಾಶ್ಚ ತೇ ವೈ ಭಾಗವತೋತ್ತಮಾಃ ||


ಶ್ರೀಹರಿಯ ನಾಮಗಳನ್ನು ಕೇಳಿ ಹರ್ಷದಿಂದ ಯಾರು ಪುಳಕಿತರೂ, ರೋಮಾಂಚಿತಶರೀರಿಗಳೂ ಆಗುವರೋ ಅಂಥವರೇ ಖಂಡಿತವಾಗಿಯೂ ಭಾಗವತರಲ್ಲಿ ಉತ್ತಮರು.


ಅನ್ಯೇಷಾಮುದಯಂ ದೃಷ್ಟ್ವಾ ಯೇऽಭಿನನ್ದನ್ತಿ ಮಾನವಾಃ |

ಹರಿನಾಮಪರಾ ಯೇ ಚ ತೇ ವೈ ಭಾಗವತೋತ್ತಮಾಃ ||


ಇತರರ ಉದ್ಧಾರ / ಅಭಿವೃದ್ಧಿಯನ್ನು ನೋಡಿ ಯಾವ ಮನುಷ್ಯರು ಅಸೂಯೆಪಡದೆ ಸಂತೋಷಗೊಂಡು ಅವರನ್ನು ಅಭಿನಂದಿಸುತ್ತಾರೋ ಹಾಗೂ ಯಾರು ಸದಾ ಹರಿನಾಮಸ್ಮರಣೆಯಲ್ಲೇ ತೊಡಗಿರುವರೋ ಅಂಥವರು ಯಥಾರ್ಥವಾಗಿಯೂ ಭಾಗವತೋತ್ತಮರೇ ಸರಿ. 


(ಸ್ಕಾನ್ದಪುರಾಣದಲ್ಲಿರುವಂತೆ)

ಯೇಷಾಂ ಭಾಗವತಂ ಶಾಸ್ತ್ರಂ ಸದಾ ತಿಷ್ಠತಿ ಸನ್ನಿಧೌ |

ಪೂಜಯನ್ತಿ ಚ ಯೇ ನಿತ್ಯಂ ತೇ ಸ್ಯುಃ ಭಾಗವತಾಃ ನರಾಃ ||


ಯಾರ ಬಳಿಯಲ್ಲೇ ಸದಾ ಭಾಗವತದ ಉದ್ಗ್ರಂಥವು ಇರುವುದೋ, ಅಂತೆಯೇ, ಯಾರು ನಿತ್ಯವೂ ಅದನ್ನು ಅಧ್ಯಯನ, ಅಧ್ಯಾಪನ, ಪಾರಾಯಣಾದಿಗಳ ಪುರಸ್ಸರವಾಗಿ ಪೂಜೆ ಮಾಡುತ್ತಾರೋ, ಅಂಥ ನರರು ಭಾಗವತರೆನಿಸುವರು.


ಮತ್ಕಥಾಂ ಕುರುತೇ ಯಸ್ತು ಮತ್ಕಥಾಸು ಶೃಣೋತಿ ಚ |

ಹೃಷ್ಯತೇ ಮತ್ಕಥಾಯಾಂ ಚ ಸ ವೈ ಭಾಗವತೋತ್ತಮಃ ||


ಯಾವನು ನನ್ನ ಕಥೆ / ಚರಿತ್ರೆ / ಲೀಲೆಯನ್ನು ಪಾರಾಯಣ-ನಾಟಕ-ಯಕ್ಷಗಾನ-ರೂಪಕಾದಿಗಳ ಮೂಲಕ ಮಾಡಿ ಕೇಳಿಸುತ್ತಾನೋ, ತೋರಿಸುತ್ತಾನೋ, ನನ್ನ ಲೀಲಾಮಯ ಸಚ್ಚರಿತೆಗಳನ್ನು ಶ್ರವಣ ಮಾಡುತ್ತಾನೋ, ನನ್ನ ಕಥೆಗಳಿಂದ ಹರ್ಷಗೊಳ್ಳುತ್ತಾನೋ, ಅವನೇ ನಿಜವಾಗಿಯೂ ಪರಮ ಭಾಗವತನು.


ಯೇಷಾಂ ಭಾಗವತಂ ಶಾಸ್ತ್ರಂ ಜೀವಿತಾದಧಿಕಂ ಭವೇತ್ |

ಮಹಾಭಾಗವತಾಃ ಶ್ರೇಷ್ಠಾಃ ವಿಷ್ಣುನಾ ಕಥಿತಾ ನರಾಃ ||


ಯಾರಿಗೆ ಭಾಗವತಶಾಸ್ತ್ರವು (ಭಾಗವತತತ್ತ್ವ ಪ್ರತಿಪಾದಕ ಪುರಾಣಾದಿ ಸಕಲ ಶಾಸ್ತ್ರಗಳು) ತಮ್ಮ ಜೀವನಕ್ಕಿಂತಲೂ ಹೆಚ್ಚಿನದೆಂಬ ಭಾವವಿದೆಯೋ, ಅಂತಹ ಮಾನವರು ಶ್ರೇಷ್ಠರಾದ ಮಹಾಭಾಗವತೋತ್ತಮರೆಂದು ಸ್ವಯಂ ಮಹಾವಿಷ್ಣುವಿನಿಂದಲೇ ಪ್ರಶಂಸಿಸಲ್ಪಟ್ಟಿರುವರು.


ಯೇऽರ್ಚಯನ್ತಿ ಸದಾ ವಿಷ್ಣುಂ ಯಜ್ಞೇಶಂ ವರದಂ ಹರಿಮ್ |

ದೇಹಿನಃ ಪುಣ್ಯಕರ್ಮಾಣಃ ಸದಾ ಭಾಗವತಾ ಹಿ ತೇ ||


ಯಾರು ಸದಾ ಯಜ್ಞೇಶ್ವರನೂ ವರದಾತನೂ ಸರ್ವತ್ರ ವ್ಯಾಪಿಸಿ ವಿಷ್ಣುವೆನಿಸಿದವನೂ, ಸಕಲ ದುರಿತ ಪರಿಹಾರಕನಾಗಿ ಹರಿಯೆನಿಸಿದವನೂ ಆದ ಶ್ರೀಮನ್ನಾರಾಯಣನನ್ನು ಅರ್ಚಿಸುತ್ತಾರೋ, ಪೂಜಿಸುತ್ತಾರೋ, ಅಂತಹ ಪುಣ್ಯಕರ್ಮಿಗಳಾದ ದೇಹಧಾರೀ ಮಾನವರು ಭಾಗವತೋತ್ತಮರೇ ಹೌದು.


ಯಸ್ಯ ಕೃಚ್ಛ್ರಾಗತಸ್ಯಾಪಿ ಕೇಶವೇ ರಮತೇ ಮನಃ |

ನ ವಿಚ್ಯುತಾ ಚ ಭಕ್ತಿರ್ವೈ ಸ ವೈ ಭಾಗವತೋ ನರಃ ||


ಯಾವನಿಗೆ ಕಷ್ಟಗಳು ಬಂದರೂ ಮನಸ್ಸು ಕೇಶವನಲ್ಲೇ ರಮಿಸುವುದೋ, ಯಾರಿಗೆ ಯಾವಾಗಲೂ ಅಚಲವಾದ ಎಂದೆಂದಿಗೂ ಚ್ಯುತ / ಪತನವಾಗದ ಭಕ್ತಿಯಿರುವುದೋ ಅಂತಹ ನರನೇ ಖಂಡಿತವಾಗಿಯೂ ಪರಮ ಭಾಗವತನು.


ಆಪದ್ಗತಸ್ಯ ಯಸ್ಯೇಹ ಭಕ್ತಿರವ್ಯಭಿಚಾರಿಣೀ |

ನಾನ್ಯತ್ರ ರಮತೇ ಚಿತ್ತಂ ಸ ವೈ ಭಾಗವತೋ ನರಃ ||


ಇಲ್ಲಿ, ಇಹಜೀವನದಲ್ಲಿ ಆಪತ್ತುಗಳು ಬಂದಾಗಲೂ ಯಾವನ ಭಗವದ್ಭಕ್ತಿಯು ಕುಗ್ಗದೆ ದೇವನಲ್ಲೇ ಅವ್ಯಭಿಚಾರಿಣಿಯಾಗಿ ನೆಲೆಸಿರುವುದೋ, ಬೇರಾವುದರಲ್ಲೂ ಯಾವನ ಚಿತ್ತವು ಆನಂದ ಹೊಂದದೋ / ರಮಿಸದೋ, ಅಂತಹ ನರನೇ ನಿಶ್ಚಯವಾಗಿಯೂ ಪರಮ ಭಾಗವತನೆನಿಸುವನು. 


(ಲಿಂಗಪುರಾಣದ ಆಧಾರದಲ್ಲಿ)

ಭೋಜನಾಚ್ಛಾದನಂ ಸರ್ವಂ ಯಥಾಶಕ್ತ್ಯಾ ದದಾತಿ ಯಃ |

ವಿಷ್ಣುಭಕ್ತಸ್ಯ ಸತತಂ ಸ ವೈ ಭಾಗವತಃ ಸ್ಮೃತಃ ||


ನಿರಂತರವಾಗಿ ವಿಷ್ಣುಭಕ್ತನಿಗೆ ಯಾವನು ಭೋಜನ, ಹೊದ್ದುಕೊಳ್ಳಲು ಹೊದಿಕೆ ಇತ್ಯಾದಿಗಳನ್ನು ತನ್ನ ಶಕ್ತಿಯಿದ್ದಷ್ಟು / ಯಥಾಶಕ್ತಿಯಿಂದ (“ಶಕ್ತಿಮ್ ಅನತಿಕ್ರಮ್ಯ ಯಥಾಶಕ್ತಿಃ”— ಶಕ್ತಿಯನ್ನು ಅತಿಕ್ರಮಿಸದೆ / ಮೀರದೆ) ದಾನ ಮಾಡುತ್ತಾನೋ / ಕೊಡುತ್ತಾನೋ, ಅವನೇ ಭಾಗವತನೆಂದು ಸ್ಮರಿಸಲ್ಪಟ್ಟಿರುವನು.


ವಿಷ್ಣುಕ್ಷೇತ್ರೇ ಶುಭಾನ್ಯೇವ ಕರೋತಿ ಸ್ನೇಹಸಂಯುತಃ |

ಪ್ರತಿಮಾಂ ಚ ಹರೇರ್ನಿತ್ಯಂ ಪೂಜಯೇತ್ ಪ್ರತ್ಯಗಾತ್ಮವಾನ್ ||


ವಿಷ್ಣುದೇಗುಲವಿರುವ ಪುಣ್ಯಕ್ಷೇತ್ರದಲ್ಲಿ ಬಂದ ಎಲ್ಲ ಭಕ್ತಜನರೊಡನೆ ಸ್ನೇಹಯುಕ್ತನಾಗಿ ಶುಭಕರವಾದ ಕರ್ಮಗಳನ್ನೇ ಯಾವನು ಮಾಡುತ್ತಾನೋ ಮತ್ತು ಇಂದ್ರಿಯ-ಮನಸ್ಸುಗಳನ್ನು ಅಂತರ್ಮುಖವಾಗಿಸಿ ನಿತ್ಯವೂ ಶ್ರೀಹರಿಯ ಪ್ರತಿಮೆಯನ್ನು ಯಾವನು ಪೂಜಿಸುತ್ತಾನೋ,


ವಿಷ್ಣುಭಕ್ತಃ ಸ ವಿಜ್ಞೇಯಃ ಕರ್ಮಣಾ ಮನಸಾ ಗಿರಾ |

ನಾರಾಯಣಪರಾ ನಿತ್ಯಂ ಭೂಪ! ಭಾಗವತೋ ಹಿ ಸಃ ||


ಅಂತಹ ನಿತ್ಯವೂ ನಾರಾಯಣಪರವಾದ ಕರ್ಮ, ಮನಸ್ಸು ಮತ್ತು ಮಾತುಗಳಿಂದ ಕೂಡಿದವನೇ ವಿಷ್ಣುಭಕ್ತನೆಂದು ತಿಳಿಯಬೇಕು. ಅವನೇ ನಿಶ್ಚಯವಾಗಿಯೂ ಭಾಗವತೋತ್ತಮನೇ ಸರಿ.


(ಗರುಡಪುರಾಣದನ್ವಯ)

ಯೇನ ಸರ್ವಾತ್ಮನಾ ವಿಷ್ಣುಭಕ್ತ್ಯಾ ಭಾವೋ ನಿವೇಶಿತಃ |

ವೈಷ್ಣವೇಷು ಕೃತಾತ್ಮತ್ವಾತ್-ಮಹಾಭಾಗವತೀ ಹಿ ಸಃ ||


ಯಾವನಿಂದ ಎಲ್ಲರೀತಿಯಿಂದ ವಿಷ್ಣುಭಕ್ತಿಯಿಂದಲೇ ತನ್ನ ಮನೋಭಾವವು ಸದಾ ನಿವೇಶಿತವಾಗಿರುವುದೋ / ಇಡಲ್ಪಟ್ಟಿರುವುದೋ, ಅಂತಹ ವಿಷ್ಣುಸಂಬಂಧಿ ವಿಚಾರ / ವ್ಯಕ್ತಿಗಳಲ್ಲಿ ತನ್ನ ಆತ್ಮವೇ / ತಾನೇ ಸರ್ವಥಾ ತೊಡಗಿಸಿಕೊಂಡಿರುವುದರಿಂದಾಗಿ ಅಂಥವನೇ ಮಹಾಭಾಗವತನೆನಿಸುವನು.


(ಪದ್ಮಪುರಾಣ ಉತ್ತರಖಂಡ)

ಏಕಾನ್ತೇನ ಸದಾ ವಿಷ್ಣೌ ಯಸ್ಮಾದ್ದೇವೇ ಪರಾಯಣಾಃ |

ತಸ್ಮಾದೇಕಾನ್ತಿನಃ ಪ್ರೋಕ್ತಾಃ ತದ್ಭಾಗವತಚೇತಸಃ ||


ಏಕಾಂತವಾಗಿದ್ದು / ಒಬ್ಬನೇ ಇದ್ದು, ಯಾವಾಗಲೂ ದೇವದೇವನಾದ ವಿಷ್ಣುವಿನಲ್ಲೇ ಪರಾಯಣರಾಗಿರುವವರು / ಆತನಲ್ಲೇ ತಮ್ಮ ಸರ್ವೇಂದ್ರಿಯಗಳನ್ನೂ ಮನಸ್ಸು, ಬುದ್ಧಿಗಳನ್ನೂ ಸರ್ವಾತ್ಮನಾ ತೊಡಗಿಸಿಕೊಂಡಿರುವುದರಿಂದಾಗಿ, ಅಂತಹ ಏಕಾಂತಿಗಳು ಆ ಭಗವಂತನಲ್ಲಿ ಚಿತ್ತ ನೆಟ್ಟವರಾದವರಾಗಿ ಭಾಗವತೋತ್ತಮರೆಂದು ಕರೆಯಲ್ಪಟ್ಟಿರುವರು.





ಓಂ ತತ್ಸತ್


|| ಶ್ರೀಗಣೇಶಾಯ ನಮಃ ||


|| ಓಂ ನಮೋ ಭಗವತೇ ವಾಸುದೇವಾಯ ||

ಶ್ರೀಮದ್ಭಾಗವತ-ಮಹಾಪುರಾಣಮ್

(ಅನ್ವಯಾರ್ಥ-ಭಾವಾರ್ಥ-ಶ್ರೀಧರಸ್ವಾಮಿಕೃತಾ ಭಾವಾರ್ಥದೀಪಿಕಾ-ವಂಶೀಧರಕೃತಃ ಭಾವಾರ್ಥದೀಪಿಕಾಪ್ರಕಾಶಃ-ರಾಧಾರಮಣದಾಸಗೋಸ್ವಾಮಿಕೃತಾ ದೀಪನೀವ್ಯಾಖ್ಯಾ-ಶ್ರೀಮದ್ವೀರರಾಘವವ್ಯಾಖ್ಯಾ-ಶ್ರೀಮದ್ವಿಜಯಧ್ವಜತೀರ್ಥಕೃತಾ ಪದರತ್ನಾವಲೀ-ಶ್ರೀಮಜ್ಜೀವಗೋಸ್ವಾಮಿಕೃತಃ ಕ್ರಮಸಂದರ್ಭಃ-ಶ್ರೀಮದ್ವಿಶ್ವನಾಥಚಕ್ರವರ್ತಿಕೃತಾ ಸಾರಾರ್ಥದರ್ಶಿನೀ-ಶ್ರೀಮಚ್ಛುಕದೇವಕೃತಃ ಸಿದ್ಧಾಂತಪ್ರದೀಪಃ-ಮಧುಸೂದನಸರಸ್ವತೀಕೃತಾ ಭಾಗವತಭಾವಾರ್ಥಪ್ರಕಾಶಿಕಾವ್ಯಾಖ್ಯಾ-ರಾಧಾಮೋಹನತರ್ಕವಾಚಸ್ಪತಿಗೋಸ್ವಾಮಿಭಟ್ಟಾಚಾರ್ಯಕೃತಾ ತತ್ತ್ವಸಾರವ್ಯಾಖ್ಯಾ-ಶ್ರೀಮದ್ವಲ್ಲಭಾಚಾರ್ಯಕೃತಾ ಸುಬೋಧಿನೀವ್ಯಾಖ್ಯಾ-ಶ್ರೀಮದ್ಗೋಸ್ವಾಮಿಶ್ರೀಪುರುಷೋತ್ತಮಚರಣಕೃತಃ ಸುಬೋಧಿನೀಪ್ರಕಾಶಃ-ಗಿರಿಧರಕೃತಾ ಬಾಲಪ್ರಬೋಧಿನೀ—ಇವುಗಳ ಕನ್ನಡಾನುವಾದ ಸಹಿತ ಹಾಗೂ ಭಾರತದರ್ಶನ ಪ್ರಕಾಶನ, ಬನ್ನಂಜೆಯವರ ಸಂಗ್ರಹಭಾಗವತ, ಶ್ರೀಶ್ರೀರಂಗಪ್ರಿಯ ಶ್ರೀಶ್ರೀಗಳ ಶ್ರೀಮದ್ಭಾಗವತ ಕಥಾಮೃತಸಾರ ಹಾಗೂ ನಿತ್ಯಾತ್ಮಶುಕಯೋಗಿಯ ಕನ್ನಡಭಾಗವತಾದಿಗಳಿಂದ)

ಪ್ರಥಮಃ ಸ್ಕನ್ಧಃ

ಒಂದನೆಯ ಅಧ್ಯಾಯ

ಶ್ರೀ ಸೂತಪುರಾಣಿಕರಲ್ಲಿ ಶೌನಕಾದಿಗಳ ಪ್ರಶ್ನೆ

ಮಂಗಲಾಚರಣೆ (ಆದಿಮಂಗಳ)


ಜನ್ಮಾದ್ಯಸ್ಯ ಯತೋऽನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್

ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯನ್ತಿ ಯತ್ಸೂರಯಃ (/ಯಂ ಸೂರಯಃ) |

ತೇಜೋವಾರಿಮೃದಾಂ ಯಥಾ (/ಯತೋ) ವಿನಿಮಯೋ ಯತ್ರ ತ್ರಿಸರ್ಗೋऽಮೃಷಾ (/ತ್ರಿಸರ್ಗೋ ಮೃಷಾ) 

ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ || ೧ ||


ಅನ್ವಯಾರ್ಥ


ಅರ್ಥೇಷು (ಕಾರ್ಯಾಕಾರ್ಯಗಳಲ್ಲಿ), ಅನ್ವಯಾತ್ ಇತರತಃ ಚ (ಅನ್ವಯ-ವ್ಯತಿರೇಕಗಳಿಂದ ಯಾವನಿರುವನೋ), (ಹಾಗಾಗಿಯೇ) ಅಸ್ಯ (ಈ ಜಗತ್ತಿನ), ಜನ್ಮ-ಆದಿ (ಜನ್ಮ-ಸ್ಥಿತಿ-ನಾಶಗಳು), ಯತಃ (ಯಾವನಿಂದಾಗುತ್ತದೋ ಅವನನ್ನು), (ಹಾಗೆಯೇ), ಯಃ (ಯಾವನು), ಅಭಿಜ್ಞಃ (ಸರ್ವಜ್ಞನೂ), ಸ್ವರಾಟ್ (ಸ್ವತಃ ಸಿದ್ಧವಾದ ಜ್ಞಾನವುಳ್ಳವನೂ ಆಗಿರುವನೋ ಅವನನ್ನು), ಯತ್ / ಯಂ (ಯಾವ ಬ್ರಹ್ಮದಲ್ಲಿ / ವೇದದಲ್ಲಿ), ಸೂರಯಃ (ಚತುರ್ಮುಖಬ್ರಹ್ಮಾದಿಜ್ಞಾನಿಗಳೂ), ಮುಹ್ಯಂತಿ (ಮೋಹಗೊಳ್ಳುತ್ತಾರೋ ), ಬ್ರಹ್ಮ (ಅಂತಹ ವೇದವನ್ನು), ಆದಿಕವಯೇ (ಆದಿಕವಿಯಾದ ಸೃಷ್ಟಿಕರ್ತ ಚತುರ್ಮುಖಬ್ರಹ್ಮನಿಗೆ), ಹೃದಾ (ಮನಸ್ಸಿನಿಂದಲೇ, ಯಾವುದೇ ಇತರ ಬಾಹ್ಯೇಂದ್ರಿಯಗಳ ಸಹಾಯವಿಲ್ಲದೆಯೇ ಯಾವನು), ತೇನೇ (ಪ್ರಕಾಶಿಸಿ ವಿಸ್ತರಿಸಿದನೋ ಅಂತಹವನನ್ನು), (ಅಲ್ಲದೆ), ಯತ್ರ (ಯಾವ ಶುದ್ಧ ಭಗವತ್ ಸ್ವರೂಪದಲ್ಲಿ),

ಯಥಾ / ಯತೋ ತೇಜೋ-ವಾರಿ-ಮೃದಾಂ ವಿನಿಮಯಃ (ಹೇಗೆ / ಯಾವನಿಂದಾಗಿ, ಒಂದರಲ್ಲಿ ಮತ್ತೊಂದರ ಆಭಾಸ, ಅಗ್ನಿಯಲ್ಲಿಯೂ ಮರುಮರೀಚಿಕೆಯಲ್ಲಿಯೂ ನೀರೆಂದೂ, ಮಣ್ಣಿನಲ್ಲಿ ಗಾಜೇ ಮುಂತಾದುವುಗಳಲ್ಲಿ ನೀರೆಂಬ ತಿಳುವಳಿಕೆಯೂ,   ತ್ರಿವೃತ್ಕರಣವೂ—ಈ ಅಗ್ನಿ ಜಲ ಪೃಥ್ವಿಗಳ ಸಂಮಿಶ್ರಣದಿಂದಾಗುವ), ತ್ರಿಸರ್ಗಃ (ಪಂಚಭೂತಗಳು, ಇಂದ್ರಿಯಗಳು, ಅಭಿಮಾನಿದೇವತೆಗಳು—ಇವರಿಂದ ಕೂಡಿದ ಮಾಯಾಗುಣವುಳ್ಳ ಸೃಷ್ಟಿಯು), ಅಮೃಷಾ (ಸತ್ಯಸ್ವರೂಪವೇ ಹೌದೋ, ಪೂರ್ಣಮದಃ ಪೂರ್ಣಮಿದಂ ಎಂಬ ದೃಷ್ಟಿಯಲ್ಲಿ), / ಮೃಷಾ (ಕೇವಲ ತೋರಿಕೆಯದ್ದೂ ಮಿಥ್ಯವೂ ಆಗಿರುವುದೋ, ಬ್ರಹ್ಮ ಸತ್ಯಂ ಜಗನ್ಮಿಥ್ಯಾ ದೃಷ್ಟಿಯಲ್ಲಿ); (ಹಾಗೆಯೇ), ಸ್ವೇನ ಧಾಮ್ನಾ (ತನ್ನದಾದ ತೇಜಸ್ಸಿನಿಂದ), ಸದಾ ನಿರಸ್ತಕುಹಕಂ ಸತ್ಯಂ ಪರಂ (ಯಾವಾಗಲೂ ದೋಷವರ್ಜಿತನೂ, ಮಯಾವರ್ಜಿತನೂ ಸತ್ಯನೂ ಪರತತ್ತ್ವನೂ ಆದ ಪರಮೇಶ್ವರನನ್ನು), ಧೀಮಹಿ (ಧ್ಯಾನಿಸೋಣ.) || ೧ ||


ಭಾವಾರ್ಥ


ಈ ವಿಶ್ವದ ಸೃಷ್ಟಿ ಮುಂತಾದವುಗಳಿಗೆಲ್ಲಾ ಯಾವನು ಕಾರಣನೋ (ಅಸ್ಯ ಜನ್ಮಾದಿ ಯತಃ), ಯಾವ ಸರ್ವಜ್ಞನ ಇರುವಿಕೆಯಿಂದಲೇ ಇವೆಲ್ಲಾ ನಡೆಯುವುವೋ (ಅನ್ವಯಾತ್ ಇತರತಃ ಚ ಅರ್ಥೇಷು ಅಭಿಜ್ಞಃ), ಯಾವನು ಆದಿಕವಿಯಾದ ಬ್ರಹ್ಮದೇವನಿಗೂ ಮಾನಸಿಕವಾಗಿ ವೇದವನ್ನು ವಿಸ್ತಾರವಾಗಿ ಉಪದೇಶ ಮಾಡಿದನೋ (ಯಃ, ಆದಿಕವಯೇ ಹೃದಾ ಬ್ರಹ್ಮ ತೇನೇ), ಯಾವನು ತನ್ನ ಮಾಯೆಯಿಂದ ನಿತ್ಯಸೂರಿಗಳನ್ನೂ ಮೋಹಗೊಳಿಸುವನೋ (ಮುಹ್ಯಂತಿ ಯತ್ / ಯಂ ಸೂರಯಃ), ತನ್ನ ತೇಜಸ್ಸಿನಿಂದ ಎಲ್ಲಾ ಮಾಯೆಯನ್ನೂ ತೊಡೆದು ಹಾಕುವನೋ (ಸ್ವೇನ ಧಾಮ್ನಾ ಸದಾ ನಿರಸ್ತಕುಹಕಂ), ಅಂತಬ ಸರ್ವಾತೀತ ಸರ್ವೋತ್ತಮನು ತೇಜಸ್ಸು ಜಲ ಮತ್ತು ಪೃಥ್ವಿ-ಇವುಗಳ ವಿಶಿಷ್ಟವಾದ ಸೇರುವಿಕೆಯಿಂದಾಗಿರುವ ಮುಬ್ಬಗೆಯ ಸೃಷ್ಟಿಗೆ ಆಧಾರವಾಗಿದ್ದರೂ ಅವುಗಳ ವಿಕಾರಕ್ಕೆ ಒಳಗಾಗದ (ತೇಜೋವಾರಿಮೃದಾಂ ಯಥಾ / ಯತೋ ವಿನಿಮಯೋ ಯತ್ರ ತ್ರಿಸರ್ಗೋ ಅಮೃಷಾ), ನಿಷ್ಕಲನಿರಂಜನ ಸ್ವರೂಪಿಯಾದ ಸ್ವಯಂ ಪ್ರಕಾಶನಾಗಿರುವ (ಸ್ವರಾಟ್), ಪರಮಸತ್ಯಸ್ವರೂಪನನ್ನು ಧ್ಯಾನಮಾಡುತ್ತೇವೆ (ಪರಂ ಸತ್ಯಂ ಧೀಮಹಿ).


ಶ್ರೀಧರಸ್ವಾಮಿವಿರಚಿತಾ ಭಾವಾರ್ಥದೀಪಿಕಾ


ಓಂ ನಮೋ ಭಗವತೇ ಪರಮಹಂಸಾಸ್ವಾದಿತಚರಣಕಮಲಚಿನ್ಮಕರಂದಾಯ ಭಕ್ತಜನಮಾನಸನಿವಾಸಾಯ ಶ್ರೀರಾಮಚಂದ್ರಾಯ |


ಪರಮಹಂಸಸ್ವರೂಪೀ ಜೀವನ್ಮುಕ್ತರಿಂದ ಆಸ್ವಾದಿತವಾದ ಬ್ರಹ್ಮಾತ್ಮಜ್ಞಾನವೆಂಬ ಮಕರಂದವುಳ್ಳ ಪಾದಪದ್ಮಯುತನಾದ, ತನ್ನ ನಿಜಭಕ್ತಜನರ ಮನಸ್ಸಿನಲ್ಲಿ ವಾಸವಾಗಿರುವ ಪ್ರಣವವಾಚ್ಯನಾದ ಭಗವಾನ್ ಶ್ರೀರಾಮಚಂದ್ರಸ್ವಾಮಿಗೆ ನಮಸ್ಕಾರವು.


ವಾಗೀಶಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ |

ಯಸ್ಯಾಸ್ತೇ ಹೃದಯೇ ಸಂವಿತ್ ತಂ ನೃಸಿಂಹಮಹಂ ಭಜೇ || ೧ ||


ಸಾಕ್ಷಾತ್ ವಾಗ್ದೇವತೆಯಾದ ಸರಸ್ವತಿಯು ಯಾವನ ಮುಖದಲ್ಲಿರುವಳೋ, ಸಂಪದ್ದೇವತೆಯಾದ ಮಹಾಲಕ್ಷ್ಮಿಯು ಯಾವನ ವಕ್ಷಸ್ಥಳದಲ್ಲಿ (ಎದೆಯಲ್ಲಿ) ವಾಸವಾಗಿರುವಳೋ, ಅಂತೆಯೇ, ಯಾವನ ಹೃದಯದ (ಮನಸ್ಸಿನ)ಲ್ಲಿ ಶುದ್ಧಜ್ಞಾನವು ಸ್ಥಿರವಾಗಿರುವುದೋ, ಅಂತಹ ಪುರುಷ-ಉತ್ತಮನಾದ ನರ-ಸಿಂಹನನ್ನು ನಾನು ಭಜಿಸುತ್ತೇನೆ.


ವಿಶ್ವಸರ್ಗವಿಸರ್ಗಾದಿನವಲಕ್ಷಣಲಕ್ಷಿತಮ್ |

ಶ್ರೀಕೃಷ್ಣಾಖ್ಯಂ ಪರಂ ಧಾಮ ಜಗದ್ಧಾಮ ನಮಾಮಿ ತತ್ || ೨ ||


ವಿಶ್ವದ ಸೃಷ್ಟಿ-ಲಯವೇ ಮೊದಲಾದ [ ಸೃಷ್ಟಿ (ಸರ್ಗ), ಸ್ಥಿತಿ (ಪಾಲನೆ, ನಿಯಮನ), ಲಯ (ಸಂಹಾರ / ವಿಸರ್ಗ ), ಅನುಗ್ರಹ, ತಿರೋಧಾನ (ಮಾಯೆ, ಮರೆಸಿಕೊಳ್ಳುವಿಕೆ), ಜ್ಞಾನ, ಅಜ್ಞಾನ, ಬಂಧ, ಮೋಕ್ಷ ಎಂಬ ] ಒಂಬತ್ತು ಲಕ್ಷಣಗಳಿಂದ ಕೂಡಿದ, (ವೇದಾಂತದಲ್ಲಿ) ತದ್ (ಬ್ರಹ್ಮ) ವಾಚ್ಯವಾದ ಶ್ರೀಕೃಷ್ಣನೆಂಬ ಪರಂಜ್ಯೋತಿಯನ್ನು, ಜಗಜ್ಜ್ಯೋತಿಯನ್ನು ನಮಿಸುತ್ತೇನೆ.


ಮಾಧವೋಮಾಧವಾವೀಶೌ ಸರ್ವಸಿದ್ಧಿವಿಧಾಯಿನೌ |

ವಂದೇ ಪರಸ್ಪರಾತ್ಮಾನೌ ಪರಸ್ಪರನತಿಪ್ರಿಯೌ || ೩ ||


ಮಾ-ಧವ (ಲಕ್ಷೀ-ರಮಣ) ಹಾಗೂ ಉಮಾ-ಧವ (ಪಾರ್ವತೀ-ರಮಣ)ರೀರ್ವರೂ ಜಗದೀಶ್ವರರೂ, ಬಯಸಿದ್ದನ್ನೆಲ್ಲ ಕೊಡುವವರೂ (ಆಗಿರುವರು). ಪರಸ್ಪರರನ್ನು ನಮಿಸುವುದನ್ನು ಇಷ್ಟಪಡುವವರೂ, ಪರಸ್ಪರರ ಆತ್ಮಸ್ವರೂಪರೂ ಆದ (ಈ ಹರಿ-ಹರರನ್ನು) ವಂದಿಸುತ್ತೇನೆ.


ಸಂಪ್ರದಾಯಾನುರೋಧೇನ ಪೌರ್ವಾಪರ್ಯಾನುಸಾರತಃ |

ಶ್ರೀಭಾಗವತಭಾವಾರ್ಥದೀಪಿಕೇಯಂ ಪ್ರತನ್ಯತೇ || ೪ ||


ಹಿಂದಿನಿಂದ ಬಂದ (ಭಾಗವತ) ಸಂಪ್ರದಾಯವು (ತನ್ನದೆಂಬ) ಒತ್ತಾಸೆಯಿಂದ, ಅದನ್ನನುಸರಿಸಿ, ಈ "ಶ್ರೀಭಾಗವತ-ಭಾವಾರ್ಥ-ದೀಪಿಕಾ" (ಕೃತಿಯು) ವಿಸ್ತರಿಸಲ್ಪಡುತ್ತದೆ.


ಕ್ವಾಹಂ ಮಂದಮತಿಃ ಕ್ವೇದಂ ಮಥನಂ ಕ್ಷೀರವಾರಿಧೇಃ |

ಕಿಂ ತತ್ರ ಪರಮಾಣುರ್ವೈ ಯತ್ರ ಮಜ್ಜತಿ ಮಂದರಃ || ೫ ||


ಮಂದಮತಿಯಾದ ನಾನೆಲ್ಲಿ? ಈ ಕ್ಷೀರಸಾಗರಮಥನರೂಪೀ ಭಾಗವತಾಮೃತವೆಲ್ಲಿ? (ಅಜ-ಗಜಾಂತರವೆಂದರ್ಥ) ಜ್ಞಾನಿಸಮೂಹವೆಂಬ ಮಂದರಗಿರಿಯು ಮಜ್ಜನ ಮಾಡುವಲ್ಲಿ ಪರಮಾಣುವಿಗೆ ಸಮನು (ಅಲ್ಪಜ್ಞನು) ನಾನು.


ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |

ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಮ್ || ೬ ||


ಮೂಕನನ್ನು ಮಾತಿನ ಮಲ್ಲನನ್ನಾಗಿಯೂ, ಕುಂಟನನ್ನು ಪರ್ವತಹಾರುವವನನ್ನಾಗಿಯೂ ಯಾವನ ಕೃಪೆಯು ಮಾಡುವುದೋ ಅಂತಹ ಪರಮಾನಂದ (ಬ್ರಹ್ಮಾನಂದ, ಆತ್ಮಾನಂದ) ಸ್ವರೂಪನಾದ ಲಕ್ಷ್ಮೀ-ರಮಣ ಮಾ-ಧವನನ್ನು ನಾನು ವಂದಿಸುತ್ತೇನೆ.


ಶ್ರೀಮದ್ಭಾಗವತಾಭಿಧಃ ಸುರತರುಸ್ತಾರಾಂಕುರಃ ಸಜ್ಜನಿಃ

ಸ್ಕಂಧೈರ್ದ್ವಾದಶಭಿಸ್ತತಃ ಪ್ರವಿಲಸದ್ಭಕ್ತ್ಯಾಲವಾಲೋದಯಃ |

ದ್ವಾತ್ರಿಂಶತ್ತ್ರಿಶತಂ ಚ ಯಸ್ಯ ವಿಲಸಚ್ಛಾಖಾಃ ಸಹಸ್ರಾಣ್ಯಲಂ

ಪರ್ಣಾನ್ಯಷ್ಟದಶೇಷ್ಟದೋऽತಿಸುಲಭೋ ವರ್ವರ್ತಿ ಸರ್ವೋಪರಿ || ೭ ||


ಸಂಸಾರಸಾಗರತಾರಣವೆಂಬ ಚಿಗುರುಳ್ಳ, ಸದ್ವಸ್ತುವಿನಿಂದ ಹುಟ್ಟಿ ಸನ್ಮಯವಾದ, ೧೨ ಸ್ಕಂಧಗಳಿಂದ ಕೂಡಿ ಭಕ್ತಿರಸದಿಂದ ಪರಿಪುಷ್ಟವಾದ, ೩೩೨ ಅಧ್ಯಾಯಗಳೆಂಬ ಶಾಖೆಗಳಿಂದ / ಕೊಂಬೆಗಳಿಂದ ಕೂಡಿ, ೧೮,೦೦೦ ಶ್ಲೋಕಗಳೆಂಬ ಎಲೆಗಳಿಂದ ಕೂಡಿದ, ಅತ್ಯಂತ ಸುಲಭವಾಗಿ ಇಷ್ಟಪ್ರದವಾಗಿರುವ ಶ್ರೀಮದ್ಭಾಗವತವೆಂಬ ದೈವೀವೃಕ್ಷವು ಎಲ್ಲಕ್ಕಿಂತ ಉನ್ನತವಾಗಿ ಬೆಳೆದುನಿಂತಿರುವುದು.


ಬಳಿಕ, ನಾನಾ ಪುರಾಣ ಶಾಸ್ತ್ರ ಪ್ರಬಂಧಗಳಿಂದ ಮನಶ್ಶಾಂತಿಯನ್ನು ಹೊಂದದೆ ಅವುಗಳಲ್ಲಿ ಪರಮಾನಂದವನ್ನು ಹೊಂದದೇ, ಕೊನೆಗೆ ನಾರದರ ಉಪದೇಶದಂತೆ ಶ್ರೀಮದ್ ಭಗವದ್ ಗುಣಾನುವರ್ಣನ ಪ್ರಧಾನವಾದ ಶ್ರೀಮದ್ಭಾಗವತಶಾಸ್ತ್ರವನ್ನು ಪ್ರಾರಂಭಿಸುವ ಇಚ್ಛೆಯುಳ್ಳವರಾದ ವೇದವ್ಯಾಸರು, ಅದಕ್ಕೆ ಬರಬಹುದಾದ ವಿಘ್ನಗಳ ನಿವೃತ್ತಿಯೇ ಮೊದಲಾದ ಉದ್ದೇಶಗಳಿಗೆ, ಅದರಲ್ಲಿ ಪ್ರತಿಪಾದ್ಯವಾದ ಪರದೇವತೆಯ ಅನುಸ್ಮರಣಲಕ್ಷಣವಾದ ಮಂಗಲಾಚರಣೆಯನ್ನು ಮಾಡುತ್ತಾರೆ—"ಜನ್ಮಾದ್ಯಸ್ಯ" ಎಂಬುದಾಗಿ. ಪರಂ ಪರಮೇಶ್ವರನನ್ನು. ಧೀಮಹಿ ಎಂದರೆ, ಧ್ಯಾಯತಿ—ಯ ಲಿಙ್ ಲಕಾರದಲ್ಲಿ ಛಾಂದಸ / ವೈದಿಕ / ಆರ್ಷ ಪ್ರಯೋಗ, ಧ್ಯಾಯೇಮ—ಧ್ಯಾನಿಸೋಣ ಎಂದರ್ಥ. ಬಹುವಚನವು ತಮ್ಮ ಅನೇಕ ಶಿಷ್ಯರೊಡಗೂಡಿ ಎಂಬುದರ ದ್ಯೋತಕ. 


ಅವನನ್ನೇ (ಪರಮೇಶ್ವರನನ್ನೇ) ಸ್ವರೂಪಲಕ್ಷಣ, ತಟಸ್ಥಲಕ್ಷಣ (ಹಾಗೂ ವಿಶೇಷಲಕ್ಷಣ)ಗಳಿಂದ ಬಣ್ಣಿಸಲಾಗಿದೆ. (ಸ್ವರೂಪಲಕ್ಷಣವೆಂದರೆ ವಸ್ತುವಿನ ಸ್ವರೂಪವನ್ನೇ ತಿಳಿಸುವ ಲಕ್ಷಣ. ಉದಾ—ರಾತ್ರಿ ಗಗನದಲ್ಲಿ ಬೆಳಗುವಿಕೆಯು ಚಂದ್ರನ ಸ್ವರೂಪಲಕ್ಷಣ. ತಟಸ್ಥಲಕ್ಷಣವೆಂದರೆ ವಸ್ತುವಿನ ಸ್ವರೂಪಕ್ಕೆ ಸೇರದಿದ್ದರೂ ಅದನ್ನು ಗುರುತಿಸಲು ಸಹಾಯಕವಾಗಿರುವುದು. ಉದಾ—ಮರದ ಕೊಂಬೆಯ ಮೇಲಿರುವವನೇ ಚಂದ್ರನು. ವಿಶೇಷಲಕ್ಷಣವು ವಸ್ತುವಿನದ್ದೇ ಆಗಿ, ವಸ್ತುವನ್ನು ಆ ಜಾತಿಯ ಬೇರೆ ವಸ್ತುಗಳಿಂದ ಬೇರ್ಪಡಿಸಿ ತಿಳಿಸುವುದು. ಉದಾ—ಕೇಸರಗಳಿಂದ ಕೂಡಿದ ಕ್ರೂರಮೃಗವೇ ಸಿಂಹ.) ಅಲ್ಲಿ ಸ್ವರೂಪಲಕ್ಷಣವು ಸತ್ಯಮ್ ಎಂಬುದಾಗಿ. (ಪರಮೇಶ್ವರನ) ಸತ್ಯತ್ವಕ್ಕೆ ಕಾರಣವು—ಯತ್ರ ತ್ರಿಸರ್ಗೋ ಅಮೃಷಾ ಯಾವ ಬ್ರಹ್ಮದಲ್ಲಿ ತಮೋರಜಸ್ಸತ್ತ್ವಗಳೆಂಬ ಮೂರು ಮಾಯಾಗುಣಗಳಿಂದಾದ ಪಂಚಭೂತಗಳು-ಇಂದ್ರಿಯಗಳು-ದೇವತಾರೂಪವಾದ ಸೃಷ್ಟಿಯು ಸುಳ್ಳಲ್ಲದ್ದೆಂಬಂತೆ ಜಗನ್ಮಿಥ್ಯೆಯಾದರೂ ಸತ್ಯವೆಂಬಂತೆ ತೋರುವುದೋ ಅಂತಹ ಪರಂ ಸತ್ಯಮ್ ಪರಮಸತ್ಯವೆಂದರ್ಥ. ಇದಕ್ಕೆ ದೃಷ್ಟಾಂತವು—ತೇಜೋವಾರಿಮೃದಾಂ ಯಥಾ ವಿನಿಮಯಃ ಎಂದು. ವಿನಿಮಯವೆಂದರೆ ವ್ಯತ್ಯಯ, ವ್ಯತ್ಯಾಸ, ಒಂದರಲ್ಲಿ ಬೇರೊಂದರ ಆಭಾಸ, ಅದು ಸತ್ಯವಸ್ತುವಾದ ಬ್ರಹ್ಮವನ್ನೇ ಆಧರಿಸಿರುವುದರಿಂದ ಬ್ರಹ್ಮದಂತೆಯೇ ಸತ್ಯವೆಂಬಂತೆಯೇ ತೋರುವುದು ಎಂದರ್ಥ. ಅದರಲ್ಲಿ, ಅಗ್ನಿಯಲ್ಲಿ ನೀರು ತೋರುವುದಕ್ಕೆ ಮರುಭೂಮಿಯ ಬಿರುಬಿಸಿಲಲ್ಲಿನ ಮರೀಚಿಕೆಯೇ ದೃಷ್ಟಾಂತ. ಮಣ್ಣು, ಗಾಜಿನಲ್ಲಿ ನೀರು ತೋರುವುದು, ನೀರಿನಲ್ಲಿ ಗಾಜು ತೋರಿದಂತಾಗುವುದು ಇತ್ಯಾದಿ ಊಹಿಸಬೇಕು. 


ಅಥವಾ— ಬ್ರಹ್ಮವಸ್ತುವೊಂದೇ ಪರಮಾರ್ಥಸತ್ಯವೆಂದು ಪ್ರತಿಪಾದಿಸಲು ಅದರ ಹೊರತಾದವು ಮಿಥ್ಯೆಯೆಂದು ಹೇಳಿದೆ. ಈ ತ್ರಿಗುಣಾತ್ಮಕ ತ್ರಿಲೋಕಗಳು ವಸ್ತುತಃ ಪರಮಾರ್ಥದೃಷ್ಟಿಯಿಂದ ಇಲ್ಲವಾದರೂ (ಜಗನ್ಮಿಥ್ಯಾ) ಸೃಷ್ಟಿಯು ವ್ಯಾವಹಾರಿಕವಾಗಿ ಇದ್ದಂತೆ ತೋರುವುದು ವ್ಯರ್ಥ / ಮಿಥ್ಯೆಯೇ ಸರಿ. ಯತ್ರ ಎಂಬಲ್ಲಿ ಪ್ರಾಪ್ತವಾದ ತ್ರಿಗುಣಾದಿ ಉಪಾಧಿಗಳ ಸಂಬಂಧವನ್ನು ಅಲ್ಲಗಳೆಯುತ್ತಾನೆ— ಸ್ವೇನ ಧಾಮ್ನಾ ನಿರಸ್ತಕುಹಕಂ ತನ್ನದಾದ ಜ್ಞಾನದ ಮಹಾಪ್ರಭೆಯಿಂದಲೇ ಕಪಟ, ಕುಹಕ, ಮಾಯೆಯೆಂಬ ಅಜ್ಞಾನ, ಅವಿದ್ಯಾ, ಕಾಮ, ಕರ್ಮಾದಿ ಅಂಧಕಾರವನ್ನು ಹೋಗಲಾಡಿಸುವವನೂ, ಮಾಯಾಮಯನೂ ಆದವನನ್ನು ಧ್ಯಾನಿಸೋಣ ಎಂಬುದಾಗಿ. 


ಇನ್ನು ಭಗವಂತನ ತಟಸ್ಥಲಕ್ಷಣವನ್ನು ಹೇಳುತ್ತಾರೆ— ಜನ್ಮಾದಿ ಎಂಬುದಾಗಿ. ಈ ವಿಶ್ವದ ಜನ್ಮ-ಸ್ಥಿತಿ-ಭಂಗಗಳು ಯಾವನಿಂದಾಗುವುವೋ ಆತನನ್ನು ಧೀಮಹಿ ಧ್ಯಾನಿಸೋಣ ಎಂದು. ಇದಕ್ಕೆ ಕಾರಣ— ಅನ್ವಯಾತ್ ಇತರತಃ ಚ ಅರ್ಥೇಷು ಆಕಾಶಾದಿ ಪಂಚಭೂತಗಳ ಸೃಷ್ಟ್ಯಾದಿ ಕಾರ್ಯಗಳಲ್ಲಿ / ಮಾಡಬೇಕಾದುವುಗಳಲ್ಲಿ ಇವುಗಳೊಳಗೆಲ್ಲ ಪರಮೇಶ್ವರನ ಸದ್ರೂಪವಾದ / ಅಸ್ತಿತ್ವರೂಪವಾದ ಅನ್ವಯದಿಂದಾಗಿ ಹಾಗೂ ಮಾಡಬಾರದವುಗಳಲ್ಲಿ / ಅಕಾರ್ಯಗಳಲ್ಲಿ ಅಂದರೆ—ಗಗನಕುಸುಮ / ಆಕಾಶದಲ್ಲಿ ಹೂವಿನ ಸೃಷ್ಟಿ ಮುಂತಾಗಿರುವುದು ಅಪ್ರಾಕೃತವಾದ್ದರಿಂದ / ಅಸ್ವಾಭಾವಿಕವಾದ್ದರಿಂದ ಅಂಥವುಗಳನ್ನು ಮಾಡದಿರುವ ವ್ಯತಿರೇಕತೆಯಿಂದಾಗಿ. ಅಥವಾ, ಅನ್ವಯವೆಂದರೆ ಅನುವೃತ್ತಿ, ಪ್ರವೃತ್ತಿ, ಸೃಷ್ಟಿ; ವ್ಯತಿರೇಕವೆಂದರೆ ವ್ಯಾವೃತ್ತಿ, ಸರ್ವವ್ಯಾಪಕತೆ, ಅನುಪ್ರವೇಶನ. ಅನುವೃತ್ತತೆಯಿಂದಾಗಿ ಸದ್ರೂಪಬ್ರಹ್ಮವು— ಮಣ್ಣು ಮಡಕೆಗೆ ಉಪಾದಾನಕಾರಣ(ಕಚ್ಚಾವಸ್ತು)ವಾದಂತೆ ಚಿನ್ನವು ಆಭರಣಕ್ಕೆ ಉಪಾದಾನಕಾರಣವಾದಂತೆಯೇ— ಜಗತ್ತಿಗೆ ಉಪಾದಾನಕಾರಣ (ಮೂಲವಸ್ತು) ವಾಗಿದೆ. ವ್ಯಾವೃತ್ತತ್ವದಿಂದಾಗಿ ವಿಶ್ವವು ಕಾರ್ಯವಾಗಿದೆ— ಮಡಕೆ, ಆಭರಣಗಳು ಕ್ರಮವಾಗಿ ಮಣ್ಣು, ಚಿನ್ನಗಳ ಕಾರ್ಯವಾದಂತೆ.


ಅಥವಾ— ಈ ಜಗತ್ತು ನಾನಾ ಅವಯವಗಳಿಂದ ಕೂಡಿ ಸಾವಯವವಾಗಿರುವುದರಿಂದ ಇದರ ಸೃಷ್ಟ್ಯಾದಿಗಳು ಅನ್ವಯವ್ಯತಿರೇಕಗಳಿಂದ ಆ ಸಗುಣ ಪರಮೇಶ್ವರನಿಂದಲೇ ಆಗುವುದೆಂಬುದು ಜಗತ್ತಿಗೂ ಆತನಿಗೂ ಇರುವ ಸಂಬಂಧ. ಹಾಗೆಯೇ ತೈತ್ತಿರೀಯೋಪನಿಷತ್ ಹೇಳುತ್ತದೆ— "ಯತೋ ವಾ ಇಮಾನಿ ಭೂತಾನಿ ಜಾಯಂತೇ | ಯೇನ ಜಾತಾನಿ ಜೀವಂತಿ | ಯತ್ ಪ್ರಯಂತ್ಯಭಿಸಂವಿಶಂತಿ |..." ಅರ್ಥಾತ್, "ಯಾವುದರಿಂದ (ಯಾವ ನಿರ್ಗುಣಬ್ರಹ್ಮದಿಂದ) ಈ ಚರಾಚರಗಳು ಹುಟ್ಟಿದಂತೆಯೂ, ಯಾವುದರಿಂದಾಗಿ ಜೀವಿಸಿದಂತೆಯೂ, ಯಾವುದನ್ನು ಕೊನೆಗೆ ಮರುಪ್ರವೇಶಿಸಿದಂತೆಯೂ ತೋರುತ್ತಿರುವುದೋ ಅದೇ ನಿರ್ಗುಣಬ್ರಹ್ಮವು / ಸಗುಣ ಪರಮೇಶ್ವರನು…" ಇತ್ಯಾದಿ ಶ್ರುತಿವಾಕ್ಯಗಳೇ ಪ್ರಮಾಣ. 


ಇನ್ನು, ಸ್ಮೃತಿಯಲ್ಲಾದರೋ ಹೀಗಿದೆ— "ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ | ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ ||" (ಮಹಾಭಾರತ—ವಿಷ್ಣುಸಹಸ್ರನಾಮಪೀಠಿಕಾ) ಅರ್ಥಾತ್, "ಯುಗದ ಆದಿಯು ಬರಲಾಗಿ ಯಾವನಿಂದ ಎಲ್ಲ ಚರಾಚರಗಳೂ ಉಂಟಾಗುವುವೋ, ಯುಗದ ಅಂತ್ಯದಲ್ಲಿ ಮತ್ತೆ ಎಲ್ಲವೂ ಯಾವನಲ್ಲಿ ಲೀನವಾಗುವುವೋ…" ಎಂದು ಮುಂತಾಗಿದೆ. ಹಾಗಿದ್ದರೆ ಪ್ರಧಾನ / ಪ್ರಕೃತಿ / ಮಹತ್ತತ್ತ್ವ / ಅವ್ಯಕ್ತವನ್ನೇ ಜಗತ್ಕಾರಣವನ್ನಾಗಿ ತಿಳಿಯಬೇಕೆಂಬ ಅಭಿಪ್ರಾಯವೋ? ಅಲ್ಲವೆನ್ನುತ್ತಾನೆ— ಅಭಿಜ್ಞೋ ಯಃ, ತಮ್ ಎಂಬ ಪದಗಳಿಂದ. ಅಚೇತನವಾದ ಪ್ರಕೃತಿಯಿಂದಲ್ಲ, ಆದರೆ ಚೇತನವಾದ, ಸರ್ವಜ್ಞವಾದ ಪರಬ್ರಹ್ಮವಸ್ತುವಿನಿಂದ ಎಂದರ್ಥ. ಅವನಾವನೋ ಅಂಥವನನ್ನು ಧ್ಯಾನಿಸೋಣ ಎಂದಿದೆ. "ಸ ಈಕ್ಷತ ಲೋಕಾನ್ನು ಸೃಜಾ ಇತಿ | ಸ ಇಮಾನ್ ಲೋಕಾನಸೃಜತ" — "ಅವನು ಲೋಕಗಳನ್ನು / ಜನರನ್ನು ಸೃಜಿಸುವೆನೆಂದು ಸಂಕಲ್ಪಿಸಿದನು. ಆತನೇ ಇದೆಲ್ಲವನ್ನೂ ಸೃಜಿಸಿದನು" ಎಂದು ಶ್ರುತಿಯಿಂದ ಸ್ಪಷ್ಟವಾಗುತ್ತದೆ. "ಈಕ್ಷತೇಃ ನ, ಅಶಬ್ದಮ್" ಎಂಬ ನ್ಯಾಯಪ್ರಸ್ಥಾನವಾದ ಬ್ರಹ್ಮಸೂತ್ರದಿಂದ "ಕಣ್ಣಿನ ವೀಕ್ಷಣೆಗೆ ತೋರುವ ಪ್ರಕೃತಿಯು ಸೃಷ್ಟಿಗೆ ಮೂಲಕಾರಣವಲ್ಲ. ಯಾಕೆಂದರೆ, ಹಾಗೆ ತಿಳಿದರೆ ಅದು ಶ್ರುತಿಪ್ರಮಾಣಕ್ಕೂ ವಿರೋಧವಾಗುತ್ತದೆ. ಅಲ್ಲದೆ ಅನುಭವದಿಂದಲೂ, ಜಡದಿಂದ ಚೇತನದ ಉಗಮವು ಸಾಧ್ಯವಲ್ಲ" ಎಂದು ತಿಳಿದುಬರುವುದು. ಹೀಗೆ ಶ್ರುತಿ, ಸ್ಮೃತಿ, ನ್ಯಾಗಳೆಂಬ ಪ್ರಸ್ಥಾನತ್ರಯದಿಂದಲೂ ಯಾವುದೋ ಚೇತನದಿಂದಲೇ / ಪರಬ್ರಹ್ಮದಿಂದಲೇ ಸೃಷ್ಟಿಯಾಯಿತೆಂದು ಸಿದ್ಧವಾಯಿತು. 


ಹಾಗಾದರೆ, ಜೀವನೇ ಧ್ಯೇಯನೋ ಎಂದರೆ, ಅಲ್ಲಗಳೆಯುತ್ತಾರೆ— ಸ್ವರಾಟ್ ತಾನೇ ಸ್ವತಃ ರಾಜಿಸುತ್ತಾನೆ, ಬೆಳಗುತ್ತಾನೆ ಯಾವನೋ ಅವನನ್ನು ಧ್ಯಾನಿಸೋಣ, ಸ್ವತಃಸಿದ್ಧಜ್ಞಾನಸ್ವರೂಪನನ್ನು ಎಂದರ್ಥ. ಹಾಗಿದ್ದರೆ, ಸೃಷ್ಟಿಕರ್ತ ಚತುರ್ಮುಖ ಬ್ರಹ್ಮಾ ಧ್ಯೇಯನೋ "ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ " ಎಂಬ ಶ್ರುತಿಯಿಂದಾಗಿ? ಅಲ್ಲವೆನ್ನುತ್ತಾನೆ— ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಎಂಬುದರಿಂದ. ಆದಿಕವಿಯಾದ ಬ್ರಹ್ಮಾನಿಗೂ ಕೂಡ ಯಾವ ಪರಬ್ರಹ್ಮವು ವೇದವನ್ನು ವಿಸ್ತರಿಸಿತೋ / ಪ್ರಕಾಶಿಸಿತೋ ಅದೇ ಧ್ಯೇಯವಸ್ತುವು. "ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ | ತಂ ಹ ದೇವಮಾತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ " ಇತ್ಯಾದಿ ಶ್ರುತಿಗಳೇ ಇದಕ್ಕೆ ಪ್ರಮಾಣ. ಅರ್ಥಾತ್, "ಯಾವನು ಮೊದಲು ಚತುರ್ಮುಖನನ್ನು ಸೃಜಿಸಿ ಅವನಂತರ್ಯಾಮಿಯಾಗಿದ್ದು ನಿಯಮಿಸಿದನೋ, ಆತನಿಗೆ ಯಾವನು ವೇದಗಳನ್ನುಪದೇಶಿಸಿದನೋ, ಅಂತಹ ಅತ್ಮ, ಬುದ್ಧಿಗಳಿಗೆ ಪ್ರಕಾಶಕನಾದ ದೇವದೇವನನ್ನು / ಪರಮಾತ್ಮನನ್ನು / ಪರಬ್ರಹ್ಮವನ್ನು / ಪರಮೇಶ್ವರನನ್ನು / ಭಗವಂತನನ್ನು ಮೋಕ್ಷಾಕಾಂಕ್ಷಿಯಾದ ನಾನು ಶರಣುಹೊಂದುತ್ತೇನೆ ".


ಚತುರ್ಮುಖಬ್ರಹ್ಮನಿಗೆ ಬೇರೆಡೆಯಿಂದ ವೇದಾಧ್ಯಯನವಾಯಿತೆಂಬುದು ಪ್ರಸಿದ್ಧವಲ್ಲದ  ಸತ್ಯ; ಅದಾದರೋ ಹೃದಯದಿಂದ ಮನಸ್ಸಿನಿಂದಲೇ ಅಂತಃಪ್ರೇರಣೆಯಿಂದಲೇ ವಿಸ್ತರಿಸಿದನು ಎಂದರ್ಥ.  ಈ ರೀತಿ ಬುದ್ಧಿವೃತ್ತಿಪ್ರವರ್ತಕತ್ವದಿಂದ ಸವಿತೃಗಾಯತ್ರೀಮಂತ್ರದ ಅರ್ಥವೂ ತೋರಿಸಲ್ಪಟ್ಟಿದೆ "ಧಿಯೋ ಯೋ ನಃ ಪ್ರಚೋದಯಾತ್ "— "ಯಾವ ಪರಮಾತ್ಮನು ನಮ್ಮ ಬುದ್ಧಿಗಳನ್ನು ಪ್ರಚೋದಿಸಲಿ " ಎಂಬುದಾಗಿ. ಹೀಗೊಂದು ಮಾತಿದೆ— 

"ಪ್ರಚೋದಿತಾ ಯೇನ ಪುರಾ ಸರಸ್ವತೀ

 ವಿತನ್ವತಾऽಜಸ್ಯ ಸತೀಂ ಸ್ಮೃತಿಂ ಹೃದಿ | ಸ್ವಲಕ್ಷಣಾ ಪ್ರಾದುರಭೂತ್ ಕಿಲಾಸ್ಯತಃ 

ಸ ಮೇ ಋಷೀಣಾಮೃಷಭಃ ಪ್ರಸೀದತಾಮ್ ||" 


"ಹಿಂದೆ ಯಾವನಿಂದ ಬ್ರಹ್ಮನ ರಾಣಿಯಾದ ಸರಸ್ವತಿಯು ಬುದ್ಧಿಮನಸ್ಸುಗಳಲ್ಲಿ ಪ್ರಚೋದಿತಳಾಗಿ ಶ್ರುತಿಯನ್ನು ಸ್ವಮುಖದಿಂದಲೇ ವಿಸ್ತರಿಸಿದಳೋ, ಅಂತಹ ಆದಿಮ ಋಷಿಶ್ರೇಷ್ಠನಾದ ಚತುರ್ಮುಖಬ್ರಹ್ಮನು ನನ್ನಲ್ಲಿ ಪ್ರಸನ್ನನಾಗಲಿ " ಎಂಬುದಾಗಿ. 


ಹಾಗಾದರೆ, ಚತುರ್ಮುಖಬ್ರಹ್ಮನು ಸ್ವತಃ ತಾನೇ "ಸುಪ್ತಪ್ರತಿಬುದ್ಧನ್ಯಾಯ " (ತಾನೇ ನಿದ್ರೆಯಿಂದೆದ್ದಂತೆ)ದಂತೆ ವೇದವನ್ನು ಪಡೆದಿರಬೇಕು ಎಂದರೆ ಹಾಗಲ್ಲವೆನ್ನುತ್ತಾನೆ— "ಯತ್ (ಯಸ್ಮಿನ್) ಬ್ರಹ್ಮಣಿ ಸೂರಯಃ (ಅಪಿ) ಮುಹ್ಯಂತಿ"— ಈ ಪರಬ್ರಹ್ಮದ ಕುರಿತಾಗಿ / ಪರಬ್ರಹ್ಮವಿಚಾರದಲ್ಲಿ ಜ್ಞಾನಿಗಳೂ ಮೋಹಗೊಳ್ಳುತ್ತಾರೆ / ಪ್ರಮಾದವೆಸಗುತ್ತಾರೆಂಬುದರಿಂದ, ಚತುರ್ಮುಖಬ್ರಹ್ಮನೆಂಬ ಜ್ಞಾನಿಯೂ ಇದಕ್ಕೆ ಹೊರತಲ್ಲ; ಆತನೂ ಜ್ಞಾನಕ್ಕೆ ಪರಾಧೀನನೇ. ಹಾಗಾಗಿ, ಸ್ವತಃ ಸಿದ್ಧಜ್ಞಾನಿಯಾದ ಪರಮೇಶ್ವರ / ಪರಮಾತ್ಮ / ಭಗವಂತ (ಸಗುಣಬ್ರಹ್ಮ)ನೇ ಜಗತ್ಕಾರಣನು. ಆದ್ದರಿಂದಲೇ ಸತ್ಯವು ಅಸತ್ತಿಗೆ ಸತ್ತೆ / ಅಸ್ತಿತ್ವವನ್ನು ಕೊಡುವುದರಿಂದಲೂ, ಪರಮಾರ್ಥಸತ್ಯವಾದುದರಿಂದಲೂ, ಸರ್ವಜ್ಞವಾದುದರಿಂದಲೂ "ನಿರಸ್ತಕುಹಕಂ ಧೀಮಹಿ" ಎಂದು ಗಾಯತ್ರಿಯಿಂದ ಪ್ರಾರಂಭಿಸಿರುವುದರಿಂದಲೂ, ಗಾಯತ್ರಿಯೆಂಬ ಬ್ರಹ್ಮವಿದ್ಯಾರೂಪವಾದುದೀ ಪುರಾಣವೆಂದು ತೋರಲ್ಪಟ್ಟಿದೆ. ಮತ್ಸ್ಯಪುರಾಣದಲ್ಲಿ ಪುರಾಣದಾನಪ್ರಸ್ತಾವದಲ್ಲಿ, 


"ಯತ್ರಾಧಿಕೃತ್ಯ ಗಾಯತ್ರೀಂ ವರ್ಣ್ಯತೇ ಧರ್ಮವಿಸ್ತರಃ |

ವೃತ್ರಾಸುರವಧೋಪೇತಂ ತದ್ಭಾಗವತಮಿಷ್ಯತೇ ||

ಲಿಖಿತ್ವಾ ತಚ್ಚ ಯೋ ದದ್ಯಾತ್ ಹೇಮಸಿಂಹಸಮನ್ವಿತಮ್ |

ಪ್ರೌಷ್ಠಪದ್ಯಾಂ ಪೌರ್ಣಮಾಸ್ಯಾಂ ಸ ಯಾತಿ ಪರಮಂ ಪದಮ್ ||

ಅಷ್ಟಾದಶಸಹಸ್ರಾಣಿ ಪುರಾಣಂ ತತ್ ಪ್ರಕೀರ್ತಿತಮ್ ||"


"ಯಾವುದರಲ್ಲಿ ಗಾಯತ್ರಿಯನ್ನು ಕುರಿತಾಗಿ ಹೇಳಿ ಧರ್ಮವಿಸ್ತಾರವು ಹೇಳಿದೆಯೋ, ವೃತ್ರಾಸುರವಧೆಯನ್ನೂ ಹೇಳಿದೆಯೋ ಅದೇ ಭಾಗವತಪುರಾಣವೆನಿಸಿದೆ. ಅದನ್ನು ಬರೆದು ಚಿನ್ನದ ಸಿಂಹಪುತ್ಥಳಿಯೊಂದಿಗೆ ಯಾವನು ಭಾದ್ರಪದಮಾಸದ ಹುಣ್ಣಿಮೆಯಂದು ದಾನಮಾಡುತ್ತಾನೋ ಅಂಥವನು ಪರಮಗತಿಯನ್ನು ಹೊಂದುತ್ತಾನೆ. ಆ ಪುರಾಣವು ೧೮,೦೦೦ ಶ್ಲೋಕಗಳಿಂದ ಕೂಡಿರುವುದು" ಎಂಬುದಾಗಿ.


ಇನ್ನೊಂದು ಪುರಾಣದಲ್ಲಿ,


"ಗ್ರಂಥೋऽಷ್ಟಾದಶಸಾಹಸ್ರೋ ದ್ವಾದಶಸ್ಕಂಧಸಮ್ಮಿತಃ |

ಹಯಗ್ರೀವಬ್ರಹ್ಮವಿದ್ಯಾ ಯತ್ರ ವೃತ್ರವಧಸ್ತಥಾ ||

ಗಾಯತ್ರ್ಯಾ ಚ ಸಮಾರಂಭಸ್ತದ್ವೈ ಭಾಗವತಂ ವಿದುಃ ||"


"೧೮,೦೦೦ ಶ್ಲೋಕಗಳಿಂದಲೂ, ೧೨ ಸ್ಕಂಧಗಳಿಂದಲೂ ಕೂಡಿ, ಹಯಗ್ರೀವೋಕ್ತ ಬ್ರಹ್ಮವಿದ್ಯೆಯೂ ವೃತ್ರಾಸುರವಧೆಯೂ ಇದ್ದು, ಗಾಯತ್ರಿಯಿಂದ ಆರಂಭಗೊಳ್ಳುವ ಪುರಾಣವೇ ಭಾಗವತವೆನ್ನುವರು" ಎಂಬುದಾಗಿ.


ಪದ್ಂಪುರಾಣದಲ್ಲಿ ಅಂಬರೀಷ ಮಹಾರಾಜನಿಗೆ ಗೌತಮಮಹರ್ಷಿಗಳು— 

"ಅಂಬರೀಷ ಶುಕಪ್ರೋಕ್ತಂ ನಿತ್ಯಂ ಭಾಗವತಂ ಶೃಣು |

ಪಠಸ್ವ ಸ್ವಮುಖೇನಾಪಿ ಯದೀಚ್ಛಸಿ ಭವಕ್ಷಯಮ್ ||"


"ಅಯ್ಯಾ ಅಂಬರೀಷನೆ! ನೀನು ಸಂಸಾರಸಾಗರದಿಂದ ಮುಕ್ತನಾಗಲಿಚ್ಛಿಸುವೆಯಾದರೆ, ನಿತ್ಯವೂ ಶುಕಮುನಿಪ್ರೋಕ್ತವಾದ ಭಾಗವತವನ್ನು ಶ್ರವಣ ಅಥವಾ ಪಠನ ಮಾಡು" ಎಂದು ಉಪದೇಶಿಸಿರುವರು. ಹೀಗಾಗಿಯೇ, ಭಾಗವತವೆಂದರೆ ಶುಕಮುನಿಪ್ರೋಕ್ತವಾದ ಶ್ರೀಮದ್ಭಾಗವತವೇ ಹೊರತು ಬೇರೆ ಭಾಗವತವಲ್ಲವೆಂದು ತಿಳಿಯಬೇಕು.


|| ಇತಿ ಶ್ರೀಧರಸ್ವಾಮಿವಿರಚಿತಾ ಭಾವಾರ್ಥದೀಪಿಕಾ || ೧.೧.೧ || (ಸ್ಕಂಧ-ಅಧ್ಯಾಯ-ಶ್ಲೋಕ)


ಶ್ರೀವಂಶೀಧರಕೃತೋ ಭಾವಾರ್ಥದೀಪಿಕಾಪ್ರಕಾಶಃ


ॐ ಸ್ವಸ್ತಿ ಶ್ರೀಗಣೇಶಾಯ ನಮಃ ||


ಶ್ರೀಕೃಷ್ಣಂ ರಾಧಿಕಾನಾಥಂ ವೃಂದಾವನನಿಕುಂಜಗಮ್ |

ವಲ್ಲವೀಗಣಸಂವೀತಮಾಶ್ರಯೇ ಸರ್ವಕಾರಣಮ್ || ೧ ||


ವೃಂದಾವನದ ದಟ್ಟವಾದ ಗಿಡಮರಬಳ್ಳಿಗಳಿಂದ ಕೂಡಿದ ಸ್ಥಳಗಳಲ್ಲಿ ಸಂಚರಿಸುತ್ತಿದ್ದ (ನಿಕುಂಜೇ ಗಚ್ಛತಿ ಇತಿ ನಿಕುಂಜಗಃ, ತಮ್), ಗೋಪೀವೃಂದ (ಗೋಪಾಲನೆ ಮಾಡುವ ಸ್ತ್ರೀಪುರುಷ ಸಮೂಹ; ವಲ್ಲವೀ— ವಲ್ಲ ಪ್ರೀತೌ, ವಲ್ಲಂ ಪ್ರೀತಿ ವಾತೀತಿ ವಲ್ಲವೀ— ವಲ್ಲ / ಪ್ರೀತಿಯನ್ನು ಪಸರಿಸುವವಳೇ ವಲ್ಲವೀ / ಗೋಪೀ)ದಿಂದ ಸುತ್ತುವರಿಯಲ್ಪಟ್ಟ, ಎಲ್ಲಕ್ಕೂ ಕಾರಣನಾದ, ಪ್ರಕೃತಿಸ್ವರೂಪಿಣಿಯಾದ ರಾಧಿಕಾಳ ಅಧಿಪತಿಯಾದ ಪರಮಪುರುಷ ಶ್ರೀಕೃಷ್ಣನನ್ನು ಆಶ್ರಯಿಸುತ್ತೇನೆ / ಶರಣುಹೊಂದುತ್ತೇನೆ.


ॐ ಸ್ವಸ್ತಿ ಶ್ರೀಗಣೇಶಾಯ ನಮ ಇತ್ಯಸ್ಯ ವ್ಯಾಕೃತಿಮ್ |

ಶ್ರೀವಂಶೀಧರಶರ್ಮಾಹಂ ಕರೋಮಿ ವಿದುಷಾಂ ಮುದೇ || ೨ ||


ಶ್ರೀವಂಶೀಧರಶರ್ಮನಾದ ನಾನು ವಿದ್ವಾಂಸರಿಗೆ ಮುದವನ್ನುಂಟುಮಾಡುವುದಕ್ಕಾಗಿ, "ಓಂ ಸ್ವಸ್ತಿ ಶ್ರೀಗಣೇಶಾಯ ನಮಃ" ಎಂಬೀ ಮಂತ್ರದ ವ್ಯಾಖ್ಯಾನವನ್ನು / ವಿಸ್ತಾರವನ್ನು ಮಾಡುತ್ತೇನೆ.


ಅದಾಗಿ, ಸರ್ವಶಾಸ್ತ್ರಾರಂಭದಲ್ಲಿ ಈ ದಶಾಕ್ಷರೀವಿದ್ಯೆಯೇ ಸ್ಮರಿಸಲ್ಪಡುತ್ತದೆ; ಹಾಗಿದ್ದರೆ, ಶ್ರೀಮಹಾವಿಷ್ಣುವೇ ಮೊದಲಾದ ಇತರರ ಸ್ಮರಣೆಯಿಂದಲೂ "ಮಂಗಲಾನಾಂ ಚ ಮಂಗಲಮ್ "— "ಮಂಗಲಗಳಿಗೂ ಮಂಗಲವು" ಇತ್ಯಾದಿವಾಕ್ಯಗಳಿಂದ ಮಂಗಲಕ್ಕೂ ಮಂಗಲವಾಗಿರುವುದರಿಂದಲೂ ಸ್ಮರಿಸಲ್ಪಡುವುದಿಲ್ಲವೆಂಬುದು ಹೇಗೆ ಸಾಧ್ಯ? ಎಂದರೆ, ಅಲ್ಲಿ ಈ ರೀತಿ ತಿಳಿಯಬೇಕು— ಈ ದಶಾಕ್ಷರಿಯನ್ನು ಸ್ಮರಿಸಿದರೇ ಸರ್ವದೇವಸ್ಮರಣೆಯ ಸಂಭವವಿರುವುದರಿಂದ ಇದನ್ನೇ ಸ್ಮರಿಸಬೇಕು. 


ಹಾಗೆಯೇ, ಈ ವಿಚಾರದಲ್ಲಿ ಗರುಡೋಕ್ತವಾದ ಮೂಲಮಂತ್ರದ ಲಕ್ಷಣವು ಇಲ್ಲಿರುವುದರಿಂದಾಗಿ, ಈ ದಶಾಕ್ಷರೀಮಂತ್ರವು ಸರ್ವದೇವತೆಗಳ ಮೂಲಮಂತ್ರವಾಗಿರುವುದರಿಂದಲೂ, ಇದನ್ನು ಆದಿಯಲ್ಲಿ ಜಪಿಸುವುದು ನ್ಯಾಯವಾದುದು. ಅಂತೆಯೇ—


"ಪ್ರಣವಾದಿ ನಮೋऽನ್ತಂ ಚ ಚತುರ್ಥ್ಯನ್ತಂ ಚ ಸತ್ತಮ |

ದೇವತಾಯಾಃ ಸ್ವಕಂ ನಾಮ ಮೂಲಮಂತ್ರಃ ಪ್ರಕೀರ್ತಿತಃ ||"


"ಓಂಕಾರದಿಂದಾರಂಭಿಸಿ, ನಮಃಕಾರದಿಂದ ಕೊನೆಗೊಳಿಸುವ, ಹಾಗೆಯೇ, ಚತುರ್ಥೀವಿಭಕ್ತ್ಯಂತವಾದ ಆಯಾ ದೇವತೆಯ ಸ್ವನಾಮವನ್ನು ನಡುವೆ ಹೊಂದಿರುವ ಮಂತ್ರವೇ ಆಯಾ ದೇವತೆಯ ಮೂಲಮಂತ್ರವೆನ್ನಲಾಗಿದೆ. ಉದಾ— ಗಣಪತಿಯ ಮೂಲಮಂತ್ರ— "ಓಂ ಗಂ ಗಣಪತಯೇ ನಮಃ " ಎಂಬುದಾಗಿದೆ. 


"ಯಜ್ಞಾನಾಂ ಜಪಯಜ್ಞೋऽಸ್ಮಿ " ಎಂಬ ಗೀತಾಚಾರ್ಯ ಶ್ರೀಕೃಷ್ಣಪರಮಾತ್ಮನ ಶ್ರೀಮುಖೋಕ್ತಿಯಿರುವುದರಿಂದ, ದೇವಪೂಜೆಯಲ್ಲಿ ಜಪರೂಪವಾದ ಪೂಜೆಯೇ ಶ್ರೇಷ್ಠವಾದುದು. ಇಲ್ಲಿ ಹೇಗೆ ಸರ್ವದೇವತಾಸ್ಮರಣವೆಂದರೆ, 


"ಕಾರ್ಯಾರಂಭೇ ಗಣೇಶಶ್ಚ ಪೂಜನೀಯಃ ಪ್ರಯತ್ನತಃ || "


"ಕಾರ್ಯಾರಂಭದಲ್ಲಿ ಗಣೇಶನಾದರೋ ಪ್ರಯತ್ನಪೂರ್ವಕವಾಗಿ ಪೂಜಿಸಲ್ಪಡತಕ್ಕವನು" ಎಂಬ ಸ್ಮೃತಿವಾಕ್ಯದಿಂದಲೂ, ವಿಘ್ನನಾಶಕನೂ ವಿಘ್ನಕಾರಕನೂ ವಿಘ್ನೇಶ್ವರನೂ ಆಗಿರುವುದರಿಂದಾಗಿ ಗಣೇಶಸ್ಮರಣೆಯಿಂದ ಸರ್ವದೇವತಾಸ್ಮರಣೆಯಾದಂತಾಗುವುದೆಂದರ್ಥ. 


"ಶ್ರೀಗಣೇಶಾಯ ನಮಃ"


"ಗಣ್ಯಂತೇ ದುಃಖಪ್ರದತ್ವೇನ ಇತಿ ಗಣಾಃ, ವಿಘ್ನಾಃ "— ದುಃಖವನ್ನೀಯುವ ಗಣಗಳೇ ವಿಘ್ನಗಳು. ಅವುಗಳೊಡೆಯನಾದ ಗಣಪತಿಯ ಸ್ಮರಣೆ, ಅನುಗ್ರಹ, ಪ್ರಸನ್ನತೆಗಳಿಂದ ವಿಘ್ನನಿವಾರಣೆ. 


https://youtube.com/playlist?list=PLCjQnGh28p9pJIFGDUclpb3hNht60D5e7


Comments

Popular posts from this blog

ಶ್ರೀಮದ್-ವಾರುಣ-ಮಹಾಪುರಾಣಮ್ ೩

ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ