ಶ್ರೀಮದ್-ವಾರುಣ-ಮಹಾಪುರಾಣಮ್ ೧

ಶ್ರೀಮದ್-ವಾರುಣ-ಮಹಾಪುರಾಣಮ್ ೧

(ದಂಬೆಕೃಷ್ಣಮೂರ್ತಿಶಾಸ್ತ್ರೀಪ್ರಣೀತಮ್)

ವಿಷಯಸೂಚೀ

೧. ಸರ್ಗಕಾಣ್ಡಮ್
೧) ವೇದೋಕ್ತಸೃಷ್ಟಿಪರ್ವ
೨) ಉಪನಿಷದುಕ್ತಸೃಷ್ಟಿಪರ್ವ
೩) ದರ್ಶನೋಕ್ತಸೃಷ್ಟಿಪರ್ವ
೪) ಸ್ಮೃತ್ಯುಕ್ತಸೃಷ್ಟಿಪರ್ವ
೫) ಪುರಾಣೋಕ್ತಸೃಷ್ಟಿಪರ್ವ
೬) ಇತಿಹಾಸೋಕ್ತಸೃಷ್ಟಿಪರ್ವ
೭) ಆಧುನಿಕವಿಜ್ಞಾನೋಕ್ತಸೃಷ್ಟಿಪರ್ವ
೨. ಪ್ರತಿಸರ್ಗಕಾಣ್ಡಮ್
೩. ವಂಶಕಾಣ್ಡಮ್
೪. ಮನ್ವನ್ತರಕಾಣ್ಡಮ್
೫. ವಂಶಾನುಚರಿತಕಾಣ್ಡಮ್
೬. ದೇವೀಕಾಣ್ಡಮ್
೭. ಗಣಪತಿಕಾಣ್ಡಮ್
೮. ಗಾಯತ್ರೀಕಾಣ್ಡಮ್
೯. ಶಿವಕಾಣ್ಡಮ್
೧೦. ಕುಮಾರಕಾಣ್ಡಮ್
೧೧. ವಿಷ್ಣುಕಾಣ್ಡಮ್
೧೨. ಗುರುಕಾಣ್ಡಮ್
೧೩. ಪ್ರಾಚೇತಸಕಾಣ್ಡಮ್
೧೪. ಇಂದ್ರಾದಿದೇವತಾಕಾಣ್ಡಮ್
೧೫. ನವಗ್ರಹಕಾಣ್ಡಮ್
೧೬. ಪರಬ್ರಹ್ಮಕಾಣ್ಡಮ್
೧೭. ಕರ್ಮ-ಜ್ಞಾನ-ಭಕ್ತಿ-ಮುಕ್ತಿಯೋಗಕಾಣ್ಡಮ್

೧. ಸರ್ಗಕಾಣ್ಡಮ್

ಅಶರೀರಸ್ಯ ತತ್ತ್ವಸ್ಯ ವಿಶ್ವಾಕಾರಪರಿಗ್ರಹಃ |

ವಿರಾಟ್ಪುರುಷರೂಪೇಣ ಸರ್ಗೋ ಲೋಕತ್ರಯಾತ್ಮಕಃ || ೧ ||

ನಿರಾಕಾರವೂ, ಶರೀರರಹಿತವೂ ಆದ ಪರತತ್ತ್ವ / ಬ್ರಹ್ಮವಸ್ತುವಿನ— ಮೂರುಲೋಕಗಳಿಂದ ಕೂಡಿದ, ವಿರಾಟ್ಪುರುಷರೂಪದಿಂದ ವಿಶ್ವದ ಆಕಾರದ ಪರಿಗ್ರಹಣ / ಸ್ವೀಕಾರವೇ— ಸರ್ಗ / ಸೃಷ್ಟಿ / ಮೂಲಸೃಷ್ಟಿ / ಸೃಷ್ಟಿಯ ಮೊದಲ ಹಂತ ಎನಿಸಿದೆ.

ಬ್ರಹ್ಮಾದಿಸ್ತಮ್ಭಪರ್ಯನ್ತಃ ಪ್ರತಿಸರ್ಗ ಇತಿ ಸ್ಮೃತಃ |
ವಿಸರ್ಗಃ ಪ್ರತಿಸೃಷ್ಟಿರ್ವಾ ಮೂಲಸೃಷ್ಟೇರನನ್ತರಮ್ || ೨ ||

ಈ ಮೂಲಸೃಷ್ಟಿಯ ಬಳಿಕ, ಆ ವಿರಾಡ್ರೂಪೀ ತ್ರೈಲೋಕ್ಯಶರೀರಾಭಿಮಾನಿಯಾದ ಚತುರ್ಮುಖಬ್ರಹ್ಮನಿಂದ ತೊಡಗಿ ಶಿಲೆಯಂತಹ ಜಡಪದಾರ್ಥದ ವರೆಗಿನ ಸೃಷ್ಟಿಯು ವಿಸರ್ಗ / ಪ್ರತಿಸರ್ಗ / ಪ್ರತಿಸೃಷ್ಟಿ ಎನಿಸುವುದು. ಇದೇ ಎರಡನೆಯ ಹಂತದ ಸೃಷ್ಟಿ.

ಮಹಾಭೂತಾನಿ ಪಂಚಾಥ ಪಂಚತನ್ಮಾತ್ರಮೇವ ಚ |
ದಶೇಂದ್ರಿಯಾಣಿ ಬಾಹ್ಯಾನಿ ಚತುರಂತಸ್ಥಮಿತ್ಯಪಿ || ೩ ||
ತ್ರಿಗುಣಾಃ ಕಾರಣಾಜ್ಜಾತಾಃ ಕಾರ್ಯಬ್ರಹ್ಮೈಕಮೇವ ಚ |
ಅಷ್ಟಾವಿಂಶತಿತತ್ತ್ವಾನಾಮಿತ್ಥಂ ಸರ್ಗ ಇತೀರಿತಃ || ೪ ||
ಅಪೌರುಷೇಯ ಏವೈಷಃ ಪ್ರತಿಸರ್ಗಸ್ತು ಪೌರುಷಃ |
ದೇವತಿರ್ಯಙ್ಮನುಷ್ಯಾಣಾಂ ಜಡಾದೀನಾಂ ಚತುರ್ಮುಖಾತ್ || ೫ ||

ಆಕಾಶ, ವಾಯು, ಅಗ್ನಿ, ಆಪಸ್ (ಜಲಮ್), ಪೃಥಿವೀ— ಎಂಬ ಪಂಚಮಹಾಭೂತಗಳು (೫) ಮತ್ತು ಅವುಗಳಿಗನುಕ್ರಮವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ— ಎಂಬ ಪಂಚತನ್ಮಾತ್ರೆಗಳು (೫), ತದನುಕ್ರಮವಾಗಿರುವ ಹೊರಗಿನವಾದ ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು— ಇವುಗಳೊಳಗಿನ ಆಯಾ ಜ್ಞಾನೇಂದ್ರಿಯಶಕ್ತಿಗಳು (೫), ಮಾತು, ಕೈ, ಕಾಲು, ಗುದ, ಗುಹ್ಯ— ಎಂಬಿವುಗಳ ಪಂಚಕರ್ಮೇಂದ್ರಿಯಶಕ್ತಿಗಳು (೫), ಧೀಶಕ್ತಿ / ಮಹತ್ ತತ್ತ್ವಾಭಿಮಾನಿಯಾದ ಒಳ ಇಂದ್ರಿಯಸಮೂಹವಾಗಿ ಅಂತಃಕರಣಚತುಷ್ಟಯರೂಪದಿಂದ ನಾಲ್ಕಾಗಿ ತೋರುವ ಅಹಂ, ಚಿತ್ತ, ಬುದ್ಧಿ, ಮನಸ್ (೪), ಸತ್ತ್ವ, ರಜ, ತಮ— ಎಂಬ ಗುಣತ್ರಯ (೩) ಗಳ ವೈಷಮ್ಯದಿಂದ ಏಕಮೇವಾದ್ವಿತೀಯವಾದ ಕಾರಣಬ್ರಹ್ಮವಸ್ತುವು / ಪರಬ್ರಹ್ಮವು ಏಕಮೇವವಾದ ಕಾರ್ಯಬ್ರಹ್ಮವಾದಂತೆ ತೋರುವುದು (೧). ಹೀಗೆ, ಒಟ್ಟು ೨೮ ತತ್ತ್ವಗಳ ಸೃಷ್ಟಿಯೇ ಸರ್ಗವೆನಿಸಿದೆ. ಇದು ಅಪೌರುಷೇಯ ಸೃಷ್ಟಿಯು. ಪ್ರತಿಸರ್ಗವಾದರೋ ಚತುರ್ಮುಖಬ್ರಹ್ಮನೆಂಬ ವಿರಾಟ್ಪುರುಷನಿಂದ / ವೈರಾಜನಿಂದ / ಕಾರ್ಯಬ್ರಹ್ಮದಿಂದ / ಅಪರಬ್ರಹ್ಮದಿಂದ ಉಂಟಾದ ದೇವ, ಪಶು, ನರ ಮುಂತಾದ ಚೇತನರ ಹಾಗೂ ಅಚೇತನ ವಸ್ತುಗಳ ಸೃಷ್ಟಿಯು. ಇದು ಪುರುಷನಿಂದಾದುದರಿಂದ ಪೌರುಷೇಯವು.

ಆಧಿದೈವಿಕಸರ್ಗೋऽಯಂ ನಾರಾಯಣಾತ್ಸದಾಶಿವಾತ್ |
ಆದಿಶಕ್ತ್ಯೇತಿ ವಾ ಪ್ರೋಕ್ತಾ ವಿಸರ್ಗೋ ವಿಧಿನಾ ತಥಾ || ೬ ||

ಇನ್ನು ಸೃಷ್ಟಿಯ ೩ ಆಯಾಮಗಳನ್ನು ನೋಡಿದರೆ, ಮೊದಲಿಗೆ ಆಧಿದೈವಿಕ ಸರ್ಗವಾದರೋ ಇದು— ಶ್ರೀಮನ್ನಾದಿನಾರಾಯಣ / ಮೂಲಸದಾಶಿವ ಪರಮೇಶ್ವರ / ಆದಿಶಕ್ತಿ ಜಗನ್ಮಾತಾ— ಈ ಹೆಸರುಗಳಿಂದ ಕರೆಯಲ್ಪಡುವ ದೇವದೇವಚೈತನ್ಯದಿಂದ ಉಂಟಾಗುವ ತ್ರಿಮೂರ್ತಿಗಳ ಹಾಗೂ ಚತುರ್ದಶಭುವನರೂಪೀ ವಿರಾಟ್ಪುರುಷನ ಸೃಷ್ಟಿಯೇ ಸರ್ಗವು. ಆ ಬಳಿಕ ವಿಧಿ / ತ್ರಿಮೂರ್ತಿಗಳಲ್ಲೋರ್ವನಾದ ಸೃಷ್ಟಿಕರ್ತ ಬ್ರಹ್ಮಾ ನಿಂದ ಉಂಟಾಗುವ ಸಕಲ ಚರಾಚರಗಳ ಸೃಷ್ಟಿಯೇ ವಿಸರ್ಗವು.

ಆಧಿಭೌತಿಕಸರ್ಗಸ್ತು ಪರತತ್ತ್ವಾತ್ ಪ್ರಧಾನಕಮ್ |
ಪ್ರಕೃತಿರ್ಮಹದಿತ್ಯೇವಂ ಭೂತತನ್ಮಾತ್ರಸಂಗತಃ || ೭ ||

ಇನ್ನು ಆಧಿಭೌತಿಕದೃಷ್ಟಿಯಿಂದ ನೋಡಿದರೆ, ಪರತತ್ತ್ವ / ಬ್ರಹ್ಮಾತ್ಮತತ್ತ್ವ > ಪ್ರಧಾನ / ಪ್ರಕೃತಿ  > ಮಹತ್ ತತ್ತ್ವ > ಅವ್ಯಾಕೃತ ಅಪಂಚೀಕೃತ ಆಕಾಶಾದಿ ಪಂಚಮಹಾಭೂತಗಳು  > ಶಬ್ದಾದಿ ಪಂಚತನ್ಮಾತ್ರೆಗಳು (ಸರ್ಗ)  > ವ್ಯಾಕೃತ ಪಂಚೀಕೃತ ಆಕಾಶಾದಿ ಪಂಚಭೂತಗಳು  > ಓಷಧಿವನಸ್ಪತಿಗಳು ಹಾಗೂ ಅಚೇತನ  > ಅನ್ನ  > ಸಚೇತನರಾದ ಜೀವರು (ಪ್ರತಿಸರ್ಗ)….ಇದು ಸೃಷ್ಟಿಕ್ರಮ.

ಆಧ್ಯಾತ್ಮಿಕವಿಸರ್ಗೋऽಯಂ ವ್ಯಷ್ಟಿರೂಪಂ ಪರಾತ್ಮನಃ |
ಪ್ರತ್ಯಗ್ರೂಪಂ ಭೇದದೃಶ್ಯಂ ಸಮಷ್ಟಿಃ ಸರ್ಗ ಈರಿತಃ || ೮ ||

ಇನ್ನು ಮೂರನೆಯದಾದ ಆಧ್ಯಾತ್ಮಿಕಸೃಷ್ಟಿಯಾದರೋ, ಏಕಾತ್ಮದಿಂದ ಸಮಸ್ತ ಪ್ರತ್ಯಗಾತ್ಮರ / ಜೀವರ / ಸಚೇತನರ / ಪ್ರಾಣವಂತರ / ಸ್ಥೂಲ-ಸೂಕ್ಷ್ಮ-ಸ್ಥಾವರ-ಜಂಗಮ-ಸಸ್ಯ-ಪಶು-ಪ್ರಾಣಿ-ಪಕ್ಷಿ-ಕ್ರಿಮಿ-ಕೀಟಾದಿ ಸಕಲ ಜೀವವರ್ಗಸಮೂಹದ ಸಮಷ್ಟಿ ಸೃಷ್ಟಿ (ಸರ್ಗ), ಹಾಗೂ ಲೋಕದಲ್ಲಿ ಪ್ರತಿಯೊಂದು ಪ್ರಭೇದದಲ್ಲೂ ಒಂದು ಇನ್ನೊಂದಕ್ಕಿಂತ ಭಿನ್ನವಾಗಿ ವ್ಯಾವಹಾರಿಕವಾಗಿ ತೋರುವ ಅವಾಂತರಭೇದವುಳ್ಳ (ಮನುಜರಲ್ಲಿ ಒಬ್ಬ ಮತ್ತೊಬ್ಬನಂತಿಲ್ಲದಿರುವುದು ಒಂದು ದೃಷ್ಟಾಂತ) ದೃಶ್ಯಪ್ರಪಂಚವೆಂಬ ವ್ಯಷ್ಟಿ ಸೃಷ್ಟಿ (ವಿಸರ್ಗ). 

|| ಇತಿ ಸರ್ಗಕಾಂಡ-ಲಕ್ಷಣಮ್ ||

|| ಇದು ಸರ್ಗಕಾಂಡದ ಲಕ್ಷಣವು ||


೧) ವೇದೋಕ್ತಸೃಷ್ಟಿಪರ್ವ

ಪ್ರಥಮೋऽಧ್ಯಾಯಃ


ಉಮಾಮಹೇಶ್ವರಂ ವನ್ದೇ ಗುರುಂ ವಿಘ್ನೇಶ್ವರಂ ಹರಿಮ್ |
ಲಕ್ಷ್ಮೀಂ ಸರಸ್ವತೀಂ ಕಾಲೀಂ ಬ್ರಹ್ಮಾಣಂ ಚ ಷಡಾನನಮ್ || ೧ ||

ನನ್ನ ಕುಲದೇವರೂ ಮೂಲಗುರುವೂ ಆದ ಉಮಾಮಹೇಶ್ವರನನ್ನೂ, ವಿದ್ಯೆ ಕಲಿಸಿದ ಗುರುಗಳನ್ನೂ, ಸಮಾಜದ ಸಮಸ್ತ ಸದ್ಗುರುಪರಂಪರೆಯನ್ನೂ, ವಿಘ್ನನಿವಾರಕನಾದ ವಿಘ್ನೇಶ್ವರನನ್ನೂ, ಸ್ಥಿತಿಕಾರಕನಾದ ಶ್ರೀಹರಿಯನ್ನೂ, ವಿಷ್ಣುಪತ್ನಿಯೂ ಸರ್ವಸಂಪತ್ಪ್ರದಳೂ ಆದ ಲಕ್ಷ್ಮೀದೇವಿಯನ್ನೂ, ವಿದ್ಯಾಧಿದೇವತೆಯಾದ ಸರಸ್ವತೀದೇವಿಯನ್ನೂ, ದುಷ್ಟಸಂಹಾರಿಣಿ ದುರ್ಗೆಯಾದ ಕಾಳಿಕಾಮಾತೆ / ಗೌರೀ / ಅನ್ನಪೂರ್ಣೇಶ್ವರೀ / ಮಹಿಷಮರ್ದಿನಿ / ಪಾರ್ವತಿದೇವಿ ಯನ್ನೂ, ವಿಧಿಲೇಖಕನೂ ಸೃಷ್ಟಿಕರ್ತನೂ ಆಯುಷ್ಯಪ್ರದನೂ ಆದ ಚತುರ್ಮುಖ ಬ್ರಹ್ಮನನ್ನೂ, ಹಾಗೂ ಶಿವಕುಮಾರನೂ ಬ್ರಹ್ಮಜ್ಞನಾಗಿ ಸುಬ್ರಹ್ಮಣ್ಯನೆನಿಸಿದ ೬ ಮಂದಿ ಕೃತ್ತಿಕಾದೇವಿಯರ ಹಾಲುಂಡು ಕಾರ್ತಿಕೇಯನಾದ ಆರ್ಮೊಗದವನಾದ ಷಡಾನನ / ಷಣ್ಮುಖ ನನ್ನೂ ವಂದಿಸುತ್ತೇನೆ.

ದಶದಿಕ್ಪಾಲಕಾನ್ ವನ್ದೇ ಸಪ್ತರ್ಷೀಂಶ್ಚ ನವಗ್ರಹಾನ್ |
ಪರಂಬ್ರಹ್ಮ ಪರಾಶಕ್ತಿಂ ನಾರಾಯಣಂ ಸದಾಶಿವಮ್ || ೨ ||

ಪೂರ್ವಾಧಿಪ ಇಂದ್ರ, ಆಗ್ನೇಯಾಧಿಪ ಅಗ್ನಿ, ದಕ್ಷಿಣಾಧಿಪ ಯಮ, ನೈರ್ಋತ್ಯಾಧಿಪ ನಿರುತಿ, ಪಶ್ಚಿಮಾಧಿಪ ವರುಣ, ವಾಯವ್ಯಾಧಿಪ ವಾಯು, ಉತ್ತರಾಧಿಪ ಕುಬೇರ, ಈಶಾನ್ಯಾಧಿಪ ಈಶಾನ, ಊರ್ಧ್ವಾಧಿಪ ಬ್ರಹ್ಮಾ, ಅಧೋದಿಶಾಧಿಪ ಅನಂತ— ಹೀಗೆ ಹತ್ತು ದಿಕ್ಕುಗಳ ದಿಕ್ಪಾಲಕರನ್ನೂ, ವಿವಿಧ ಮನ್ವಂತರಗಳ ೭ ಮಂದಿ ವಿಭಿನ್ನ ಸಪ್ತರ್ಷಿಗಳನ್ನೂ, ಸೂರ್ಯಾದಿ ನವಗ್ರಹಗಳನ್ನೂ, ಸರ್ವದೇವತಾತ್ಮಕವಾದ ಪರಬ್ರಹ್ಮ / ಪರಾಶಕ್ತಿ / ನಾರಾಯಣ / ಸದಾಶಿವನನ್ನೂ ವಂದಿಸುತ್ತೇನೆ.

ವ್ಯಾಸಂ ದತ್ತಂ ಚ ವಾಲ್ಮೀಕಿಂ ವನ್ದೇ ಪ್ರಚೇತಸಂ ಪರಮ್ |
ಪ್ರಾಚೇತಸಾನ್ ಭಾರ್ಗವಾಂಶ್ಚ ಜಾಮದಗ್ನ್ಯಾನ್ ನಮಾಮ್ಯಹಮ್ || ೩ ||

ಸಮಸ್ತ ವೇದರಾಶಿಯನ್ನು ನಾಲ್ಕಾಗಿ ವಿಭಜಿಸಿ ಸರಳೀಕರಿಸಿ, ವೇದಾರ್ಥವನ್ನು ಅಷ್ಟಾದಶಪುರಾಣಗಳ ಮೂಲಕ ವಿಸ್ತರಿಸಿ ವಿಶದೀಕರಿಸಿ ಈಗಿನ ವೇದವ್ಯಾಸರೆನಿಸಿದ "ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ"— ಎಂಬಂತೆ ಸಾಕ್ಷಾತ್ ವಿಷ್ಣುಸ್ವರೂಪರಾದ, ಮಹರ್ಷಿ ಪರಾಶರರ ಪುತ್ರ ಕೃಷ್ಣದ್ವೈಪಾಯನ ಮಹರ್ಷಿಗಳು ಹಾಗೂ ಹಿಂದಿನ ಸಮಸ್ತ ವ್ಯಾಸಪರಂಪರೆಯನ್ನೂ, ತ್ರಿಮೂರ್ತಿರೂಪರಾಗಿ ಅವಧೂತ ಪರಂಪರೆಯ ಹರಿಕಾರರಾದ ಆತ್ರೇಯ ದತ್ತಗುರುಭಗವಂತನನ್ನೂ, ಭೃಗುವಂಶೀಯರೂ ವರುಣಕುಲಸಂಭೂತರಾಗಿ (ಪ್ರಚೇತಸ್ / ಪ್ರಚೇತಾಃ— ವರುಣ) ಪ್ರಾಚೇತಸರೆನಿಸಿದ ರಾಮಾಯಣಕರ್ತೃ ಆದಿಕವಿ ವಾಲ್ಮೀಕಿಮಹರ್ಷಿಗಳನ್ನೂ, ಜಲಾಧಿಪತಿಯಾಗಿ ಸಕಲ ಜೀವರ ಜೀವನಾಧಿಪನೂ ಆದ (ಜೀವನಮ್— ಜಲ) ವರುಣದೇವನನ್ನೂ, ಆತನ ವಂಶಜಾತರೂ ಮಹಿಮಾನ್ವಿತರೂ ನನ್ನ ಪೂರ್ವಜರೂ ಆದ ಸಮಸ್ತ ಪ್ರಾಚೇತಸರನ್ನೂ, ವರುಣಪುತ್ರರಾದ ಭೃಗುಮಹರ್ಷಿಗಳು ಹಾಗೂ ಆ ಪರಂಪರೆಯ ಜಮದಗ್ನಿ-ಪರಶುರಾಮಾದಿ ಸಕಲ ಭಾರ್ಗವರನ್ನೂ (“ಮಹರ್ಷೀಣಾಂ ಭೃಗುರಹಮ್”— ಮಹರ್ಷಿಗಳಲ್ಲಿ ಭೃಗುವು ನಾನು ಎಂದಿರುವನು ಗೀತಾಚಾರ್ಯ; “ಭೃಗೋಃ ವಂಶೇ ಜಾತಾಃ ಭಾರ್ಗವಾಃ, ಭೃಗುರ್ವೈ ವಾರುಣಿಃ”— ಭೃಗುವಂಶಜಾತರು ಭಾರ್ಗವರು, ಭೃಗುವು ವರುಣಪುತ್ರನೆಂದಿದೆ ತೈತ್ತಿರೀಯೋಪನಿಷತ್ತಿನ ಪಂಚಕೋಶವಿದ್ಯಾಪ್ರಬೋಧಕವಾದ ಭೃಗುವಲ್ಲೀ; ಭೃಗುಪತ್ನಿ ಖ್ಯಾತಿಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯು ಜನಿಸಿ ಭಾರ್ಗವಿಯೆನಿಸಿ ವಿಖ್ಯಾತಳಾಗಿ, ಈ ವಂಶಪಾವನೆಯಾದಳು. ಭಾರ್ಗವ ಪರಶುರಾಮನಾಗಿ ಸಾಕ್ಷಾತ್ ಮಹಾವಿಷ್ಣುವೇ ಈ ಕುಲದಲ್ಲಿ ಜಮದಗ್ನಿಸುತನಾಗಿ ಅವತರಿಸಿ ಕುಲದೀಪಕನಾಗಿ, ಕುಲವನ್ನು ಪಾವನಗೊಳಿಸಿದನು.), ಪ್ರಸ್ತುತ ವೈವಸ್ವತಮನ್ವಂತರದ ಗೋತ್ರಪ್ರವರ್ತಕ ಸಪ್ತರ್ಷಿಗಳಲ್ಲೊಬ್ಬರಾದ, ನನ್ನ ಪೂರ್ವಜರೂ ಆದ ಜಮದಗ್ನಿಮಹರ್ಷಿಗಳು ಹಾಗೂ ಅವರ ವಂಶೀಯ ಸಕಲ ಮಹಿಮಾನ್ವಿತ ಜಾಮದಗ್ನ್ಯರನ್ನೂ (ಜಮದಗ್ನೇಃ ವಂಶೇ ಜಾತಾಃ ಜಾಮದಗ್ನ್ಯಾಃ) ತ್ರಿಕರಣಪೂರ್ವಕವಾಗಿ ನಾನು ನಮಿಸುತ್ತೇನೆ.

ಪಿತೄನಪ್ಯಹಂ ವನ್ದೇ ಸರ್ವಕಾರ್ಯಾರ್ಥಸಾಧಕಾನ್ |
ನಿರ್ವಿಘ್ನತಾಸುಸಿದ್ಧ್ಯರ್ಥಂ ಪುರಾಣೇ ವಾರುಣೇ ಕೃತೌ || ೪ ||

ಸರ್ವಕಾರ್ಯಗಳೂ ಯಶಸ್ವಿಯಾಗಲು ಬೇಕಾದ ನನ್ನ ಪೂರ್ವಜ ಪಿತೃಗಳನ್ನು ನಾನು ವಂದಿಸಿ ಅವರ ಆಶೀರ್ವಾದವನ್ನೂ ಬೇಡುತ್ತಿದ್ದೇನೆ. ಹೀಗೆ, "ಶ್ರೀಮದ್ವಾರುಣಮಹಾಪುರಾಣ" ವನ್ನು ಇವರೆಲ್ಲರ ಕೃಪೆ-ಪ್ರೇರಣೆಗಳಿಂದ ಸಂಕಲಿಸಿ, ಸಂಗ್ರಹಿಸಿ, ವಿರಚಿಸಲು ನಿರ್ವಿಘ್ನತೆಯು ಸಿದ್ಧಿಸಿ, ಪೂರ್ಣತಾಸಿದ್ಧಿಯೂ ಆಗಲೆಂದು ಪ್ರಾರ್ಥಿಸುತ್ತೇನೆ.

ಋತಂ ಸತ್ಯಂ ಚ ಸೃಷ್ಟ್ಯಾದೌ ತಪಸೋऽದ್ಭುತಕರ್ಮಣಃ |
ಅಜಾಯತ ತತೋ ರಾತ್ರಿಸ್ತತಸ್ಸಮುದ್ರ ಅರ್ಣವಃ || ೫ ||

ಈಗ ಮೊದಲನೆಯದಾಗಿ ವೇದಗಳಲ್ಲಿ ಸೃಷ್ಟಿಯ ಬಗ್ಗೆ ಏನು ಹೇಳಿದೆ ಎಂಬ ಕುರಿತು ನೋಡೋಣ. ಋಗ್ವೇದದ ಮಂಡಲ ೧೦, ಸೂಕ್ತ ೧೯೦ ರಲ್ಲಿ, “ಋತಂ ಚ ಸತ್ಯಂ ಚಾಭೀದ್ಧಾತ್ ತಪಸೋ ಅಧಿ ಅಜಾಯತ, ತತೋ ರಾತ್ರಿರಜಾಯತ ತತಃ ಸಮುದ್ರೋ ಅರ್ಣವಃ” ಎಂದಿದೆ. ಅಂದರೆ, ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಅದ್ಭುತವಾದ ತಪಸ್ಸೆಂಬ ಕರ್ಮದಿಂದ ಋತವೂ, ಸತ್ಯವೂ ಜನಿಸಿದವು. ಅನಂತರ ರಾತ್ರಿಯೂ, ಬಳಿಕ ಜಲರಾಶಿಯಾಗಿ ಅರ್ಣವವೆನಿಸಿದ ಸಮುದ್ರವೂ ಉಂಟಾಯಿತು.

ಋ ಗತಾವೃತಮಿತ್ಯಾಹುರ್ಗತಿರ್ವಿಶ್ವಸ್ಯ ಸನ್ತತಾ |
ನಿಯತಿರ್ನಿಯಮಶ್ಚೈವ ವ್ಯಾವಹಾರಿಕಮೇವ ವಾ || ೬ ||

“ಋ ಗತೌ” ಎಂಬ ಗತ್ಯರ್ಥಕವಾದ ಧಾತುವಿನಿಂದ “ಋತಮ್” ಎಂಬ ಪದದ ವ್ಯುತ್ಪತ್ತಿಯೆಂದು ಹೇಳುವರು. ವಿಶ್ವದ / ಸೃಷ್ಟಿಯ ಸಂತತವಾದ / ನಿರಂತರವಾದ ಗತಿಶೀಲತೆ / ಚಲನಶೀಲಸ್ವಭಾವದ ನಿಯತಿ ಅಥವಾ ವ್ಯಾವಹಾರಿಕ ಜಗತ್ತಿನ ನಿಯಮವೇ ಋತ.

ಲಯಸ್ಸರ್ವಸ್ಯ ವಿಶ್ವಸ್ಯ ಸಮತಾ ಕಾಲಕರ್ಮಣೋಃ |
ಯಥಾ ಸಂಗೀತಶಾಸ್ತ್ರೇऽಸ್ತಿ ತದ್ವದೃತಮಿತೀರಿತಮ್ || ೭ ||

ಸಕಲ ವಿಶ್ವದ ಗತಿಯ ಲಯವೇ ಋತವು. ಕಾಲದ ಹಾಗೂ ಕ್ರಿಯೆಯ ಗತಿಯ ಲಯವೇ ಋತ. ಹೇಗೆ ಸಂಗೀತದಲ್ಲಿ ತಾಳಕ್ಕೆ ಒಂದು ಲಯವಿದೆಯೋ ಹಾಗೆಯೇ ಋಜುಮಾರ್ಗದ ಬದುಕಿನ ಗತಿ / ಲಯ ವೇ ಋತವು.

ದೇಶೇ ಕಾಲೇ ಚ ಪಾತ್ರೇ ಚ ಋತಂ ವಿಪರಿವರ್ತತೇ |
ದೇಶಾಚಾರಸ್ತಥಾ ಕಾಲಾಚಾರೋ ವ್ಯಕ್ತಿಗತಂ ಋತಮ್ || ೮ ||

ಈ ಋತವು ವಿಭಿನ್ನ ಪ್ರದೇಶ, ಕಾಲಘಟ್ಟ (ಋತು, ಯುಗ ಇತ್ಯಾದಿ) ಹಾಗೂ ವ್ಯಕ್ತಿಗಳಲ್ಲಿ ಆಯಾ ಸ್ಥಳೀಯ ಸಂಪ್ರದಾಯ, ಆಯಾ ಕಾಲದ ರೂಢಿಗತ ಶಿಷ್ಟಾಚಾರ ಹಾಗೂ ಆಯಾ ವ್ಯಕ್ತಿಯ ಪ್ರಕೃತಿ-ಸ್ವಭಾವಾದಿಗಳನ್ನು ಹೊಂದಿಕೊಂಡು ಬದಲಾಗುತ್ತದೆ.

ಋತಂ ಧರ್ಮ ಇತಿ ಪ್ರೋಕ್ತಂ ದೇಶಕಾಲಗತಂ ಪುನಃ |
ಋಜುತಾಂ ತತ್ರ ಜಾನೀಯಾತ್ ಕರ್ಮವಾಙ್ಮನಸೀತ್ಯಪಿ || ೯ ||

ಋತವು ಆಯಾ ದೇಶ-ಕಾಲಗಳಿಗೆ ಸರಿಯಾದ ಧರ್ಮವೆಂದು ಹೇಳಲಾಗಿದೆ. ಉದಾ— ಕೃತ / ತ್ರೇತಾ / ದ್ವಾಪರ ಯುಗಧರ್ಮವು ಕಲಿಯುಗಧರ್ಮವಾಗದು. ಮಾತೃವಾಕ್ಯಪರಿಪಾಲನಾರ್ಥವಾಗಿ ವ್ಯಾಸಾಚರಿತ ನಿಯೋಗಪದ್ಧತಿಯು ಇದಕ್ಕೊಂದು ದೃಷ್ಟಾಂತ. ಮಾಡುವ ಕೆಲಸ, ಆಡುವ ಮಾತು ಮತ್ತು ಯೋಚಿಸುವ ಮನಸ್ಸು— ಇವುಗಳಲ್ಲಿ ವಕ್ರತೆಯಿಲ್ಲದ, ನೇರ, ಪ್ರಾಮಾಣಿಕ ಋಜುತ್ವವೂ ಋತವೆಂದೇ ತಿಳಿಯಬೇಕು.

ಸತ್ಯಂ ತ್ವಲೌಕಿಕಂ ನಿತ್ಯಂ ದೇಶಕಾಲಾದಿವರ್ಜಿತಮ್ |
ಶಾಶ್ವತಂ ಪರಮಾರ್ಥಂ ಚ ಸತೇ ಯನ್ನಿಹಿತಂ ಚ ತತ್ || ೧೦ ||

ಸತ್ಯವಾದರೋ ಲೋಕರೂಢಿಯನ್ನು ಮೀರಿ ಅಲೌಕಿಕವೆನಿಸಿದ, ನಿತ್ಯವೂ, ಶಾಶ್ವತವೂ ಆದ, ಯಾವುದೇ ದೇಶ-ಕಾಲ-ವ್ಯಕ್ತಿಗಳಿಗೆ ವ್ಯತ್ಯಾಸವಾಗದ, ಪಾರಮಾರ್ಥಿಕವಾದ, ಸತ್ / ಅಸ್ತಿತ್ವ ದಲ್ಲಿ ಯಾವುದು ಸದಾ ಇರುವ ತತ್ತ್ವವೋ / ಪರಬ್ರಹ್ಮವೋ ಅಂತಹ ತತ್ತ್ವವೇ ಆಗಿರುವುದು (“ಸತೇ ಯತ್ ನಿಹಿತಮ್ ತತ್ ಸತ್ಯಮ್”).

ಅಥವಾ ಬಹುನೈತೇನ ವಿನೈತೇ ತು ಪರಸ್ಪರಮ್ |
ಸಮಾನಾರ್ಥೌ ಚ ವಿಜ್ಞೇಯೌ ವಿನಾನ್ತರಯುತೌ ಬಹು || ೧೧ ||

ಅಥವಾ ಹೀಗೆ ಹೆಚ್ಚು ಸೂಕ್ಷ್ಮವೂ ವಿಸ್ತಾರವೂ ಆಗಿ ಹೇಳುವ ಬದಲು, ಸ್ಥೂಲವಾಗಿ ಹೇಳುವುದಾದರೆ, ಋತ-ಸತ್ಯಗಳೆರಡೂ ಪರಸ್ಪರ ಅಧಿಕ ಅಂತರ / ವ್ಯತ್ಯಾಸಗಳಿಲ್ಲದ, ಸಮಾನ ಅರ್ಥಪ್ರದ ಶಬ್ದಗಳೆಂಬುದಾಗಿ ತಿಳಿಯಬಹುದು.

ಸಮುನ್ದಯನ್ತಿ ಚನ್ದ್ರೋದ|ಯಾತ್ಕ್ಲಿದ್ಯನ್ತ್ಯತ್ರ ಆಪ ಉ |
ಅಪಾಂ ಚೈವ ಸಮುನ್ನೇನ ಸ ಸಮುದ್ರ ಇತೀರಿತಃ || ೧೨ ||

ಚಂದ್ರೋದಯದ ತರುವಾಯ ನೀರಿನ ಅಲೆಗಳು ಚಂದ್ರಗುರುತ್ವದಿಂದಾಗಿ ಮೇಲುಮೇಲಕ್ಕೆ ಬೃಹದಾಕಾರವಾಗಿ ಏರುವ ಉಬ್ಬರದಿಂದ ನಮ್ಮನ್ನು / ತನ್ನ ಬಳಿಸಾರಿದವರನ್ನು ಇದರ ನೀರು / ಆಪಃ / ಜಲರಾಶಿಯು ಒದ್ದೆಮಾಡುವುದರಿಂದ ವಾರಿಧಿಯು ಸಮುದ್ರವೆನಿಸಿದೆ.

ಮುದ್ರಯಾ ಮರ್ಯಾದಯಾ ವಾ ಸಮುದ್ರೋ ವರ್ತತೇ ತಥಾ |
ಸಮ್ಯಗುದ್ಗತ-ರೋऽಗ್ನಿಶ್ಚಾ|ತ್ರ ಸಮುದ್ರ ಉದಾಹೃತಃ |
ಔರ್ವಾಗ್ನಿರ್ವಡವಾಗ್ನಿರ್ವಾ ವರ್ತತೇ ಹ್ಯುದಧಾವಿತಿ || ೧೩ ||

ಎಂದಿಗೂ ತನ್ನ ಸೀಮಾಮರ್ಯಾದೆಯೆಂಬ ಮುದ್ರೆಯ ಎಲ್ಲೆಮೀರದಿರುವುದರಿಂದ ಸಮುದ್ರವೆನಿಸಿದೆ. ಒಂದಾನೊಂದು ಕಾಲದಲ್ಲಿ ಭೃಗುವಂಶೀಯನಾದ ಔರ್ವನೆಂಬ ಮುನಿಯ ಕ್ರೋಧಾಗ್ನಿಯನ್ನು ಎಲ್ಲಿಯೂ ಇಡಲಾಗದೇ ಕೊನೆಗೆ ಆತನ ಪಿತೃಗಳ ಆದೇಶದಂತೆ ಉದಧಿ / ಶರಧಿ / ಸಮುದ್ರದೊಳಗೆ ಇಡಲ್ಪಟ್ಟಿತು. ಅದನ್ನು ಹಯಶಿರನು ನುಂಗಿದುದರಿಂದ (ಅಥವಾ ಆ ಕೋಪಾಗ್ನಿಯು ಹಯರೂಪವನ್ನು ತಾಳಿದುದರಿಂದ) ಈ ಔರ್ವಾಗ್ನಿಗೆ ವಡವಾನಲ / ಬಡವಾಗ್ನಿಯೆಂದು ಹೆಸರಾಯಿತು (ವಡವಾ / ಬಡವಾ— ಕುದುರೆ, ಹಯ; “ವಬಯೋರಭೇದಃ”— ವ,ಬ ಗಳಿಗೆ ಭೇದವಿಲ್ಲ). ಹೀಗೆ, “ಸಮ್ಯಕ್ ಉದ್ಗತಃ, ರಃ / ಅಗ್ನಿಃ ಯತ್ರ ತತ್ ಸಮುದ್ರಃ”— ಚೆನ್ನಾಗಿ ಅರಗಿಸಿಕೊಂಡ ಅಗ್ನಿಯು ಯಾವುದರೊಳಗಿದೆಯೋ ಅದು ಸಮುದ್ರವೆನಿಸಿತು.

ಮುದಂ ರಾತಿ ದದಾತೀತಿ ಸಮುದ್ರೋ ದರ್ಶನೇನ ತು |
ರತ್ನಾದೀನಿ ಚ ಮುದ್ರಾಣಿ ಸಮುದ್ರೇಣ ಸಹಾಸ್ತಿ ವೈ || ೧೪ ||

ನೋಟಮಾತ್ರದಿಂದಲೇ ಮುದವನ್ನು / ಹರ್ಷವನ್ನು ಉಂಟುಮಾಡುವುದರಿಂದ ಸಮುದ್ರ. ಯಾವುದರೊಳಗೆ ಮುತ್ತು-ರತ್ನಾದಿ ಮುದ್ರೆಗಳಿರುವುದರಿಂದ ರತ್ನಾಕರವೆನಿಸಿದೆಯೋ ಅದೇ ಸಮುದ್ರವೆನಿಸಿದೆ. “ಮುದ್ರಾಭಿಃ ಸಹ ವರ್ತತೇ, ಇತಿ ಸ-ಮುದ್ರಃ”.

ಅಪಾಂ ಚೈವ ಸಮುದ್ರೇಕಾತ್ ಸಮುದ್ರ ಇತಿ ಸಂಜ್ಞಿತಃ || ೧೫ ||

ನೀರಿನ ಸತತ  ಅಲೆಗಳ ರೂಪದ ಉದ್ರಿಕ್ತತೆಯಿಂದಾಗಿ ಸಮುದ್ರವೆಂಬ ಸಂಜ್ಞೆ ಬಂತು.

ಉದಯತೀನ್ದೌ ಪೂರ್ಣಸ್ತು ಸಮುದ್ರಃ ಪೂರ್ಯತೇ ಸದಾ |
ಪ್ರಕ್ಷೀಯಮಾಣೇ ಬಹುಲೇ ಕ್ಷೀಯತೇऽಸ್ತಮಿತೇ ಚ ವೈ || ೧೬ ||

ಪೂರ್ಣಚಂದ್ರೋದಯದ ಪೌರ್ಣಮಿಯಂದು ಅತಿಯಾಗಿ ಉಬ್ಬರವುಂಟಾಗಿ ಸಮುದ್ರವು ತುಂಬಿತುಳುಕುವುದು. ಬಹುಳ / ಅಮಾವಾಸ್ಯೆಯಂದು ಚಂದ್ರನು ಸಂಪೂರ್ಣ ಕ್ಷಯಿಸಿದಾಗ / ಅಸ್ತಮಿಸಿದಾಗ ಸಮುದ್ರದಲ್ಲಿ ಇಳಿತವಾಗಿ ಶಾಂತವಾಗುವುದು.

ಆಪೂರ್ಯಮಾಣೋ ಹ್ಯುದಧಿ|ರಾತ್ಮನೈವಾಪಿ ಪೂರ್ಯತೇ |
ತತೋ ವೈ ಕ್ಷೀಯಮಾಣೇ ತು ಸ್ವಾತ್ಮನ್ಯೇವ ಹ್ಯಪಾಂ ಕ್ಷಯಃ || ೧೭ ||

ಹೀಗೆ, ತುಂಬಿ ತುಳುಕುವ ಸಮುದ್ರವು / ಸಮುದ್ರದ ಉಬ್ಬರವು ತನ್ನಿಂದಲೇ ತಾನು ತುಂಬುವುದು / ಉಂಟಾಗುವುದು. ಹಾಗೆಯೇ, ತಗ್ಗು ಕೂಡ ತನ್ನಿಂದಲೇ ಆಗುವುದು.

ಉದ್ದೀಪ್ಯನ್ತೇऽಗ್ನಿಸಂಯೋಗಾ|ದುಖಾಸ್ವಾಪೋ ಯಥಾ ಸ್ವಯಮ್ |
ತಥಾ ಸ್ವತಃ ಸಮುದ್ರೋऽಪಿ ವರ್ಧತೇ ಶಶಿನೋದ್ರಯೇ || ೧೮ ||

ಹೊರಗಿನ ಬೆಂಕಿಯಿಂದ (ಅಗ್ನಿಸಂಯೋಗಾತ್), ಪಾತ್ರೆಗಳಲ್ಲಿರುವ (ಉಖಾಸು), ಜಲರಾಶಿಯು (ಆಪಃ), ಹೇಗೆ ತಾನಾಗಿ ಬಿಸಿಯಾಗುವುದೋ ಹಾಗೆಯೇ, ಚಂದ್ರನಿಂದಾಗಿ ಸಮುದ್ರದ ನೀರೂ ತಾನಾಗಿಯೇ ಮೇಲೆ ಬರುವುದು.

ಅನ್ಯೂನಾನತಿರಿಕ್ತತ್ವಾತ್ ವರ್ಧನ್ತ್ಯಾಪೋ ಹ್ರಸನ್ತಿ ಚ || ೧೯ ||

ಸಮುದ್ರದ ನೀರಿನ ಒಟ್ಟು ಪ್ರಮಾಣವು ಕಡಿಮೆಯೂ ಆಗದೆ ಹೆಚ್ಚೂ ಆಗದೆ ನೀರಿನ ಮಟ್ಟವು ಹೆಚ್ಚು-ಕಡಿಮೆಯಾಗುವುದು.

ಉದಯೇऽಸ್ತಮಯೇ ಚೇನ್ದೋಃ ಪಕ್ಷಯೋಃ ಶುಕ್ಲಕೃಷ್ಣಯೋಃ |
ಕ್ಷಯವೃದ್ಧೀ ಸಮುದ್ರಸ್ಯ ಶಶಿವೃದ್ಧಿಕ್ಷಯೇ ತಥಾ || ೨೦ ||

ಶುಕ್ಲಪಕ್ಷದಲ್ಲಿ ವರ್ಧಿಸುವ ಚಂದ್ರನು ಕೃಷ್ಣಪಕ್ಷದಲ್ಲಿ ಕ್ಷಯಿಸುವಂತೆಯೇ, ಚಂದ್ರೋದಯಕ್ಕೆ ಉಬ್ಬಿದ ಸಮುದ್ರವು, ಚಂದ್ರಾಸ್ತದಲ್ಲಿ ತಗ್ಗುವುದು.

ದಶೋತ್ತರಾಣಿಪಞ್ಚಾಹು|ರಙ್ಗುಲಾನಾಂ ಶತಾನಿ ಚ |
ಅಪಾಂ ವೃದ್ಧಿಃ ಕ್ಷಯೋ ದೃಷ್ಟಃ ಸಮುದ್ರಾಣಾಂ ತು ಪರ್ವಸು || ೨೧ ||

ಹೀಗೆ, ಪರ್ವದಿನಗಳಾದ ಅಮಾವಾಸ್ಯೆಯಲ್ಲಿ ಸಮುದ್ರದ ಜಲಮಟ್ಟವು ೧,೫೦೦ ಅಂಗುಲಗಳಷ್ಟು ಕುಗ್ಗಿದರೆ, ಪೌರ್ಣಮಿಯಂದು ಅಷ್ಟೇ ಹಿಗ್ಗುವುದು.

ಜಲಾನ್ಯರ್ಣಾಂಸಿ ಸನ್ತ್ಯಸ್ಮಿನ್ನಿತ್ಯರ್ಣವಸ್ತಥೋಚ್ಯತೇ || ೨೨ ||

ಇದರಲ್ಲಿ ಅಗಾಧ ಜಲರಾಶಿ (ಅರ್ಣಗಳು) ಇದೆಯೆಂಬುದರಿಂದಾಗಿ ಸಮುದ್ರವು ಅರ್ಣವವೆನ್ನಲ್ಪಡುತ್ತದೆ.

ಅಸ್ತ್ಯಸ್ಯಾರ್ಣಾಂಸಿ ದಾತೃತ್ವೇ|ನ ಸದಾ ಫೇನಸಂಯುತಃ |
ಸರ್ವಾಧಾರೋ ಹ್ಯಶಾನ್ತಶ್ಚಾ|ರ್ಣವಃ ಸಮುದ್ರವಾಚಿಕಮ್ || ೨೩ ||

ಧಾರಾಳವಾಗಿ ಯಾರಿಗೂ ಬೇಕಾದಷ್ಟು ಹೇರಳವಾದ ಜಲರಾಶಿಯು ಚಲನಶೀಲತೆಯಿಂದ ಸದಾ ಬುರುಗಿನಿಂದ / ನೊರೆಯಿಂದ ಕೂಡಿದ್ದು ಸಮುದ್ರವು ಅರ್ಣವವೆನಿಸಿದೆ. ಎಲ್ಲಕ್ಕೂ (?ಆದಿಶೇಷನಿಗೂ) ಆಧಾರವಾಗಿರುವುದೇ ಅರ್ಣವ. ಸದಾ ಚಲಿಸುವ ಜಲವುಳ್ಳದ್ದು ಅರ್ಣವ. ಹೀಗೆ ಅರ್ಣವವು ಸಮುದ್ರಸೂಚಕ ಶಬ್ದವಾಗಿದೆ.

ಶತಂ ಶತಸಹಸ್ರಾಣಾಂ ಕೋಟಿಮಾಹುರ್ಮನೀಷಿಣಃ |
ಶತಂ ಕೋಟಿಸಹಸ್ರಾಣಾಂ ಶಙ್ಕುರಿತ್ಯಭಿಧೀಯತೇ || ೨೪ ||
ಶತಂ ಶಙ್ಕುಸಹಸ್ರಾಣಾಂ ಮಹಾಶಙ್ಕುರಿತಿ ಸ್ಮೃತಃ |
ಮಹಾಶಙ್ಕುಸಹಸ್ರಾಣಾಂ ಶತಂ ವೃನ್ದಮಿಹೋಚ್ಯತೇ || ೨೫ ||
ಶತಂ ವೃನ್ದಸಹಸ್ರಾಣಾಂ ಮಹಾವೃನ್ದಮಿತಿ ಸ್ಮೃತಮ್ |
ಮಹಾವೃನ್ದಸಹಸ್ರಾಣಾಂ ಶತಂ ಪದ್ಮಮಿಹೋಚ್ಯತೇ || ೨೬ ||
ಶತಂ ಪದ್ಮಸಹಸ್ರಾಣಾಂ ಮಹಾಪದ್ಮಮಿತಿ ಸ್ಮೃತಮ್ |
ಮಹಾಪದ್ಮಸಹಸ್ರಾಣಾಂ ಶತಂ ಖರ್ವಮಿಹೋಚ್ಯತೇ || ೨೭ ||
ಶತಂ ಖರ್ವಸಹಸ್ರಾಣಾಂ ಮಹಾಖರ್ವಮಿತಿ ಸ್ಮೃತಮ್ |
ಮಹಾಖರ್ವಸಹಸ್ರಾಣಾಂ ಸಮುದ್ರಮಭಿಧೀಯತೇ || ೨೮ ||
ಶತಂ ಸಮುದ್ರಸಾಹಸ್ರ|ಮೋಘ ಇತ್ಯಭಿಧೀಯತೇ |
ಶತಮೋಘಸಹಸ್ರಾಣಾಂ ಮಹೌಘ ಇತಿ ವಿಶ್ರುತಃ || ೨೯ ||

ನೂರುಸಾವಿರ / ಲಕ್ಷದ ನೂರುಪಟ್ಟು— ೧ ಕೋಟಿ(೧,೦೦,೦೦,೦೦೦ = ೧೦ ೭).

ಸಾವಿರಕೋಟಿಯ ನೂರುಪಟ್ಟು— ೧ ಶಂಕು (೧೦೦,೦೦೦,೦೦,೦೦,೦೦೦ = ೧೦ ೧೨).

ಸಾವಿರಶಂಕುಗಳ ನೂರುಪಟ್ಟು— ೧ ಮಹಾಶಂಕು (೧೦ ೧೭ ).

ಸಾವಿರಮಹಾಶಂಕುಗಳ ನೂರುಪಟ್ಟು— ೧ ವೃಂದ (೧೦ ೨೩).

ಸಾವಿರವೃಂದಗಳ ನೂರುಪಟ್ಟು— ೧ ಮಹಾವೃಂದ (೧೦ ೨೮).

ಸಾವಿರಮಹಾವೃಂದಗಳ ನೂರುಪಟ್ಟು— ೧ ಪದ್ಮ (೧೦ ೩೩).

ಸಾವಿರಪದ್ಮಗಳ ನೂರುಪಟ್ಟು— ೧ ಮಹಾಪದ್ಮ (೧೦ ೩೮).

ಸಾವಿರಮಹಾಪದ್ಮಗಳ ನೂರುಪಟ್ಟು— ೧ ಖರ್ವ (೧೦ ೪೩ ).

ಸಾವಿರಖರ್ವಗಳ ನೂರುಪಟ್ಟು  (೧,೦೦,೦೦೦ ಖರ್ವಗಳು)— ೧ ಮಹಾಖರ್ವ (೧೦ ೪೮).

೧ ಲಕ್ಷ ಮಹಾಖರ್ವ— ೧ ಸಮುದ್ರ (೧೦ ೫೩).

೧ ಲಕ್ಷ ಸಮುದ್ರ— ೧ ಓಘ (೧೦ ೫೮).

೧ ಲಕ್ಷ ಓಘ— ೧ ಮಹೌಘ (೧೦ ೬೩).

 ಎಂಬ ನಮ್ಮ ಪ್ರಾಚೀನ ಸಂಖ್ಯಾಶಾಸ್ತ್ರದ ಲೆಕ್ಕಾಚಾರ ಎಷ್ಟು ಅದ್ಭುತ!!! ಇದರಲ್ಲಿ ಸಮುದ್ರವೆಂಬುದೊಂದು ಸಂಖ್ಯೆಯ ಸ್ಥಾನಬೆಲೆಯಾಗಿದೆ. ಇದು ವಾಲ್ಮೀಕಿರಾಮಾಯಣದ ಯುದ್ಧಕಾಂಡದ ೨೮ನೆಯ ಅಧ್ಯಾಯದಲ್ಲಿ ಬರುತ್ತದೆ.

ವೃಣೋತಿ ಸರ್ವಂ ವರುಣೋ ವ್ರಿಯತೇऽನ್ಯೈರಪಿ ಸ್ಮೃತಃ |
ವೃಞ್ ವರಣೇ ಚ ಸಮ್ಭಕ್ತಾ|ವಾವರಣೇ ಚ ಸಂಸ್ಮೃತಃ || ೩೦ ||

ಜಗತ್ತಿನ / ಸೃಷ್ಟಿಯ ಎಲ್ಲವನ್ನೂ ಸೃಜಿಸಲೋಸುಗ ಸೃಷ್ಟಿಪೂರ್ವದಲ್ಲಿ ಆಯ್ದುಕೊಳ್ಳುತ್ತಾನೆ / ಸ್ವೀಕಾರಮಾಡುತ್ತಾನೆ / ಪರಿಗ್ರಹಿಸುತ್ತಾನೆ ಅಥವಾ ಇತರ ಸರ್ವರಿಂದಲೂ ಪರಿಗ್ರಹಿಸಲ್ಪಡುವವನು / ಪೂಜಿಸಲ್ಪಡುವವನು ವರುಣ. “ವೃಞ್ ವರಣೇ ಸಂಭಕ್ತೌ ಆವರಣೇ ಚ” ಎಂಬ ವೃಞ್ ಧಾತುವಿನ ಅರ್ಥ— (೧) ವರಣ / ಪರಿಗ್ರಹ / ಸ್ವೀಕಾರ (ಉದಾ— ಋತ್ವಿಗ್ ವರಣ), (೨) ಸಂಭಕ್ತಿ / ಸೂಕ್ತವಾಗಿ ಎಲ್ಲವನ್ನೂ ಎಲ್ಲರಿಗೂ ಅವರವರ ಕರ್ಮಫಲದಂತೆ ವಿಭಾಗಿಸಿ ಹಂಚುವವನು ಅಥವಾ ಭಕ್ತಿಯಿಂದ ಚೆನ್ನಾಗಿ ಭಜಿಸಲ್ಪಡುವವನು ಹಾಗೂ (೩) ಆವರಣ / ಸಕಲರನ್ನೂ ಒಳಗೊಳ್ಳುವ, ತನ್ನ ರಕ್ಷಾಕವಚದೊಳಗೆ ಆವರಿಸಿಕೊಳ್ಳುವ ವಿಶ್ವವ್ಯಾಪಕ ವಿಷ್ಣುಶಕ್ತಿ. (ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ— ವಿಶ್ವವನ್ನೆಲ್ಲ ವ್ಯಾಪಿಸಿಯೂ, ಅದರೊಳಗೆ ಪ್ರವೇಶಿಸಿಯೂ ಇರುವುದರಿಂದಾಗಿ ಭಗವಂತನಿಗೆ ವಿಷ್ಣುವೆಂಬ ಹೆಸರು.)

ವರಣಂ ಗೌರವೇಣೈವ ಭಜನಂ ಸೇವನಂ ಜನೈಃ |
ಸ್ವೀಕಾರಶ್ಚ ತಥಾ ಯಸ್ತು ಸದಾನಂದಮಯಃ ಪ್ರಭುಃ || ೩೧ ||

ಗೌರವಪೂರ್ವಕವಾಗಿ ಲೋಕದ ಸರ್ವಜನರಿಂದಲೂ ಮಳೆಗಾಗಿಯೋ, ಸುಭಿಕ್ಷೆಗಾಗಿಯೋ ವರುಣರೂಪಿಯಾದ ಪರಮಾತ್ಮನು (ದೇವನೊಬ್ಬ ನಾಮ ಹಲವು, ರೂಪ ಹಲವು) ಪೂಜಿಸಲೋಸುಗ ಸ್ವೀಕರಿಸಲ್ಪಡುವನು / ಆಯ್ದುಕೊಳ್ಳಲ್ಪಡುವನು, ಭಜಿಸಲ್ಪಡುವನು, ಪೂಜಿಸಲ್ಪಡುವನು, ವಿವಿಧರೀತಿಯಿಂದ ಸೇವೆ ಮಾಡಲ್ಪಡುವನು. ಅಂತಹ ವರುಣಭಗವಂತನು ಸದಾ ಬ್ರಹ್ಮಾನಂದಸ್ವರೂಪನಾದ ಲೋಕಪ್ರಭುವೇ ಆಗಿರುವನು. ಮಳೆ-ಬೆಳೆಗಳಿಂದ ಲೋಕವನ್ನು ಕಾಯುವ, ಸಸ್ಯಾದಿಗಳನ್ನು ಸೃಜಿಸುವ (ಹಾಗಾಗಿ ಬ್ರಹ್ಮಾಶಕ್ತಿಯೂ ಹೌದು), ಕೆಲವೊಮ್ಮೆ ಅತಿವೃಷ್ಟಿಯಿಂದ ಪ್ರಳಯಕ್ಕೂ ಕಾರಣವಾಗುವ— ಹೀಗೆ ೩ ವಿಧದ ಕಾರ್ಯಗಳೂ ಆತನದೇ ಲೀಲೆಯಾಗಿದೆ. ಹೀಗಾಗಿ ಆದಿಪರಾಶಕ್ತಿ / ಜಗಜ್ಜನನಿ / ಜಗತ್ಪಿತಾಸ್ವರೂಪಿಯೂ ಹೌದು.

ಸರ್ವದಾ ಭಕ್ತಕಾರ್ಯೇಷು ವರ್ತತೇ ಸಂವಿಭಜ್ಯತೇ |
ಋತೇನೈವ ಸುಸಮ್ಪತ್ತಿಸ್ಸರ್ವಮಸ್ತೀತಿ ತತ್ರ ವೈ || ೩೨ ||

ಯಾವಾಗಲೂ ತನ್ನ ಮರೆಹೊಕ್ಕ ನಿಜಭಕ್ತರ ಹಿತಕಾಯುವ ಕಾರ್ಯಗಳಲ್ಲೇ ನಿರತನು. ಹೀಗೆ ಸರ್ವಮಂಗಲಕರನಾದುದರಿಂದ ಶಿವಶಕ್ತಿಯೂ ಹೌದು (ಶಿವ— ಶುಭ). ಸಂಪತ್ತುಗಳನ್ನು ಅವರವರ ಪೂರ್ವಕರ್ಮಫಲಕ್ಕನುಸಾರ ಲೋಕಧರ್ಮ / ಋತದ ನಿಯತಿಯಂತೆ ಸೂಕ್ತವಾಗಿ ಹಂಚುವವನು. ಆ ಎಲ್ಲಾ ಶ್ರೇಷ್ಠ ಸಂಪತ್ತು ವರುಣನ ಪ್ರತ್ಯಕ್ಷರೂಪವಾದ ಸಾಗರದೊಳಗೆ ರತ್ನಾದಿಗಳ ರೂಪದಲ್ಲಿ ಹುದುಗಿರುವುದರಿಂದಲೇ ಸಾಗರವು ರತ್ನಾಕರವೆನಿಸಿರುವುದು. ಅಂತಹ ಭೂಮಿಯು “ರತ್ನಗರ್ಭಾ ವಸುಂಧರಾ” ಎನಿಸಿರುವುದು.

ತೇನಾವೃತಮಶೇಷೇಣ ಜಗದ್ವರುಣ ಉಚ್ಯತೇ |
ಭಗವತ್ಪ್ರೋಕ್ತಗೀತಾಯಾಂ ವರುಣೋ ಯಾದಸಾಂ ತು ಸಃ || ೩೩ ||

ಸಮಸ್ತ ವಿಶ್ವವು ಆತನಿಂದ ಆವೃತವಾಗಿದೆಯೆಂಬುದರಿಂದಾಗಿಯೂ ಆತನು / ಪರಮಾತ್ಮನು ವರುಣನಾಮಕನಾದನು. ಭಗವಂತನು ಉಪದೇಶಿಸಿದ ಮಹಾಭಾರತದೊಳಗಣ ಭಗವದ್ಗೀತೆಯಲ್ಲಿ “ವರುಣೋ ಯಾದಸಾಮ್ ಅಹಮ್” ಎಂದಿರುವನು ಶ್ರೀಕೃಷ್ಣನಾಮಕನಾದ ಭಗವಂತ— “ಜಲಚರಗಳಲ್ಲಿ / ನೀರಿನೊಳಗಿನ ತತ್ತ್ವಗಳಲ್ಲಿ ವರುಣನೇ ನಾನಾಗಿರುವೆ / ವರುಣರೂಪಿಯಾಗಿ ಅಥವಾ ವರುಣನಾಮಕನಾಗಿ ನೀರಿನೊಳಗೆ ನಾನಿರುವೆ” ಎಂಬುದಾಗಿ. 

ವೇಗೇನ ಯಾನ್ತಿ ಯಾದಾಂಸಿ ಜಲಜನ್ತವ ಇತ್ಯಪಿ |
ತೇಷಾಮಧಿಪ ಇತ್ಯೇವ ವರುಣೋ ಯಾದಸಾಂ ಪತಿಃ || ೩೪ ||

ನೀರಿನೊಳಗೆ ಜಲಚರಗಳು ಬಹು ವೇಗವಾಗಿ ಚಲಿಸುತ್ತವೆಂಬುದರಿಂದಾಗಿ ಅವು “ಯಾದಾಂಸಿ” ಎನಿಸಿವೆ (ಸ-ಕಾರಾಂತ ನಪುಂಸಕಲಿಂಗ ಯಾದಸ್ ಶಬ್ದದ ಪ್ರಥಮಾವಿಭಕ್ತಿ ಬಹುವಚನರೂಪ. ಯಾದಃ, ಯಾದಸೀ, ಯಾದಾಂಸಿ— ಏಕ, ದ್ವಿ, ಬಹುವಚನರೂಪಗಳು. ಉದಾ— ಮನಃ, ಮನಸೀ, ಮನಾಂಸಿ ಎಂಬ ಮನಸ್ ಶಬ್ದದಂತೆ). ಅವುಗಳ ಅಧಿಪತಿಯು ವರುಣರೂಪೀ / ವರುಣನೆಂಬ ಹೆಸರಿನ ಆ ಭಗವಂತನೇ ಆಗಿದ್ದು, “ಯಾದಸಾಂ ಪತಿಃ”— ಜಲಾಧಿದೇವತೆ ಎನಿಸಿರುವನು.

ಕಶ್ಯಪಾದಿತಿಜಾತಾಚ್ಚ ಹ್ಯಾದಿತ್ಯಃ ಕಾಶ್ಯಪಃ ಸ್ಮೃತಃ |
ಪತ್ನ್ಯಾಂ ತಸ್ಯ ತು ಚರ್ಷಣ್ಯಾಂ ಭೃಗುವಾಲ್ಮೀಕಿನೌ ಸುತೌ || ೩೫ ||

ಬ್ರಹ್ಮನ ಪುತ್ರರಾದ ಮರೀಚಿಯ ಪುತ್ರ ಕಶ್ಯಪರು. ಈ ಸಪ್ತರ್ಷಿಗಳಲ್ಲೊಬ್ಬರಾದ ಕಶ್ಯಪರಿಂದ ಅದಿತಿ ದೇವಿಯಲ್ಲಿ ವರುಣನು ಜನಿಸಿ, ಆದಿತ್ಯ ನೂ ಎನಿಸಿದನು. ವರುಣನು ಪತ್ನಿ ಚರ್ಷಣಿಯಲ್ಲಿ ಭೃಗು ಹಾಗೂ ವಾಲ್ಮೀಕಿಯೆಂಬ ಪುತ್ರರನ್ನು ಪಡೆದನು.

ಇತ್ಥಂ ಪೂರ್ವಮಪಾಂ ಸೃಷ್ಟಿ|ರತೋ ಬ್ರಹ್ಮ ಹ್ಯಪಾಂಪತಿಃ |
ಪ್ರಚೇತಾಶ್ಚೇತಯನ್ಸರ್ವಾಂ|ಲ್ಲೋಕಾನಿಮಾಂಶ್ಚ ವಾರುಣಾನ್ || ೩೬ ||

ಈ ರೀತಿಯಾಗಿ / ಹೀಗೆ ಹಿಂದೆ ಮೊದಲಿಗೆ ಜಲರಾಶಿಯ ಸೃಷ್ಟಿಯಾದುದರಿಂದ ಜಲಾಧಿಪತಿಯು / ವರುಣನು ಪರಬ್ರಹ್ಮ. ಆತನು ತನ್ನದೇ ಸೃಷ್ಟಿಯಾದ ಈ ವಾರುಣಜಗತ್ತಿನ ಎಲ್ಲರನ್ನೂ ಚೇತನವಂತರನ್ನಾಗಿ / ಸಚೇತನರಾಗಿ ಮಾಡಿ ಪ್ರಚೇತಾಃ ಎನಿಸಿರುವನು.

ಸಮುದ್ರಾದರ್ಣವಾತ್ಕಾಲಗಣನಾ ಸಂವತ್ಸರಾದಯಃ |
ಅಹೋರಾತ್ರಾಣಿ ವಿಶ್ವಸ್ಯ ನಿಮೇಷಾಣಾಂ ತಥಾ ವಶೀ || ೩೭ ||

ಸದಾ ತೆರೆ-ನೊರೆಗಳಿಂದ  ಕೂಡಿ ತರಂಗಮಯವಾದ ಸಮುದ್ರದಿಂದ ಸಂವತ್ಸರ, ಹಗಲು-ರಾತ್ರಿ ಮುಂತಾದ ಕಾಲಗಣನೆಯ ಪ್ರತಿ ನಿಮಿಷವೂ ಆ ಪರಮಾತ್ಮನ ನಿಯಂತ್ರಣದಲ್ಲೇ ಇರುವಂತೆ ಕಾಲವು ಸೃಜಿಸಲ್ಪಟ್ಟಿತು. ಋಗ್ವೇದ ಮಂಡಲ ೧೦, ಸೂಕ್ತ ೧೯೦ ರಲ್ಲೇ ಮುಂದುವರೆದು— “ಸಮುದ್ರಾತ್ ಅರ್ಣವಾತ್ ಅಧಿ ಸಂವತ್ಸರೋ ಅಜಾಯತ, ಅಹೋರಾತ್ರಾಣಿ ವಿದಧತ್ ವಿಶ್ವಸ್ಯ ಮಿಷತೋ ವಶೀ, ಸೂರ್ಯಾ ಚಂದ್ರಮಸಾ ಧಾತಾ ಯಥಾಪೂರ್ವಮ್ ಅಕಲ್ಪಯತ್, ದಿವಂ ಚ ಪೃಥಿವೀಂ ಚ ಅನ್ತರಿಕ್ಷಮಥೋ ಸ್ವಃ” ಎಂಬುದರ ತಾತ್ಪರ್ಯವನ್ನಿಲ್ಲಿ ವಿಸ್ತರಿಸಲಾಗಿದೆ.

ಸೂರ್ಯಂ ಚನ್ದ್ರಮಸಂ ಧಾತಾ ಯಥಾಪೂರ್ವಮಕಲ್ಪಯತ್ |
ದಿವಂ ಚ ಪೃಥಿವೀಂ ಸ್ವಂ ಚ ಹ್ಯನ್ತರಿಕ್ಷಮಥೋ ತಥಾ || ೩೮ ||

ಹೀಗೆ ವಿಶ್ವದ ಸೃಜನೆಗೆ ಆಧಾರನಾಗಿ, ನಿಧಾನ / ಮೂಲನಾಗಿ ಧಾತೃ / ಧಾತಾ ಎನಿಸಿದ ದೇವದೇವನು, ಬ್ರಹ್ಮನ ಹಿಂದಿನ ಕಲ್ಪದಂತೆಯೇ ವಿಧಿವತ್ತಾಗಿ ಸೂರ್ಯ, ಚಂದ್ರ, ನಕ್ಷತ್ರ, ಆಕಾಶಾದಿ ಪಂಚಮಹಾಭೂತಗಳು, ಪೃಥ್ವಿ-ಅಂತರಿಕ್ಷ-ಸ್ವರ್ಗಾದಿ ಸಪ್ತ (ಭೂಃ, ಭುವಃ,  ಸ್ವಃ / ಸುವಃ, ಮಹಃ, ಜನಃ, ತಪಃ, ಸತ್ಯಮ್ ಎಂಬ ೭ )ಊರ್ಧ್ವಲೋಕಗಳನ್ನೂ, (ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ, ಪಾತಾಲಗಳೆಂಬ ೭ ) ಸಪ್ತ ಅಧೋಲೋಕಗಳನ್ನೂ— ಹೀಗೆ ಒಟ್ಟು ಈರೇಳು (೧೪) ಲೋಕಗಳನ್ನು ಸೃಜಿಸಿದನು.

ಇಮೇ ವಯನ್ತಿ ಪಿತರೋ ಯಂ ಯಜ್ಞಂ ತನ್ತುಭಿಸ್ತತಮ್ |
ವಿಶ್ವತ ಆಯತೋ ದೇವ|ಕರ್ಮಭಿಶ್ಶತಮೇಕ ಹ || ೩೯ ||

ಋಕ್ಸಂಹಿತೆ ಯ ೧೦ನೆಯ ಮಂಡಲದ ೧೩೦ನೆಯ ಸೂಕ್ತದ  “ಯೋ ಯಜ್ಞೋ ವಿಶ್ವತಸ್ತನ್ತುಭಿಸ್ತತ ಏಕಶತಂ ದೇವಕರ್ಮೇಭಿರಾಯತಃ | ಇಮೇ ವಯನ್ತಿ ಪಿತರೋ ಯ ಆಯಯುಃ ಪ್ರ ವಯಾಪ ವಯೇತ್ಯಾಸತೇ ತತೇ” ― ಎಂಬ ಮೊದಲಮಂತ್ರದಂತೆ, ಯಾವ ಸೃಷ್ಟಿಯೆಂಬ ಯಜ್ಞವನ್ನು (ಯಂ  ಯಜ್ಞಂ) , ಈ ಸೃಷ್ಟಿದೇವತೆಗಳಾದ ಪಿತೃದೇವತೆಗಳು (ಇಮೇ ಪಿತರಃ) , ಬಟ್ಟೆಯನ್ನು ನೂಲುಗಳಿಂದ ನೇಯುವಂತೆ ಸೃಷ್ಟಿವಸ್ತ್ರವನ್ನು / ಬ್ರಹ್ಮಾಂಡವಸ್ತ್ರವನ್ನು ನಾನಾ ಹಗ್ಗಗಳನ್ನು ನೇಯ್ದು ವಿಸ್ತೃತವಾಗಿ (ತನ್ತುಭಿಃ ತತಮ್) ನಿರ್ಮಿಸುವರು / ಹೊಲಿಯುತ್ತಾರೆ (ವಯನ್ತಿ) . ಪಿತೃದೇವತೆಗಳ ಈ ಕರ್ಮಗಳಿಂದ / ದೇವತೋಪಾಸನಾದಿಗಳಿಂದ (ದೇವಕರ್ಮಭಿಃ), ನೂರೊಂದು / ನೂರಾರು ವರ್ಷಗಳಿಂದ (ಏಕಶತಮ್) , ಈ ನೇಯ್ಗೆಯು ವಿಶ್ವದ ಎಲ್ಲೆಡೆಯೂ ವ್ಯಾಪಿಸಿ ಉದ್ದಗಲಕ್ಕೂ (ವಿಶ್ವತಃ, ಆಯತಃ) ನಿರಂತರವಾಗಿ ಹಬ್ಬಿ ವರ್ಧಿಸಿದೆ.

ಪಿತರಸ್ತು ಪ್ರಾಣರೂಪಾಃ ಸೃಷ್ಟಿದೇವಾಃ ಪ್ರಜಾಪತೇಃ |
ತನ್ತವಃ ಪಂಚಭೂತಾನಿ ವಸ್ತ್ರಮಿವ ವಯನ್ತಿ ತೇ || ೪೦ || 

ಪಿತೃಗಳಾದರೋ (ಪಿತರಃ ತು) ,  ಪ್ರಜಾಪತಿ (ಸಕಲ ಸೃಷ್ಟಿಪ್ರಜಾವರ್ಗದ ಪತಿ) / ಪರಮಾತ್ಮ ನ (ಪ್ರಜಾಪತೇಃ) , ಪ್ರಾಣರೂಪಿಗಳಾಗಿ (ಪ್ರಾಣರೂಪಾಃ) , ಲೋಕದ ಜನಕಸ್ಥಾನೀಯರಾಗಿ ಸೃಷ್ಟಿಮಾಡುವ ದೇವತೆಗಳೂ (ಸೃಷ್ಟಿದೇವಾಃ)  ಆಗಿರುವರು. ಸಮಸ್ತಸೃಷ್ಟಿಯೇ ವಸ್ತ್ರ / ಬಟ್ಟೆ. ಆ ಸೃಷ್ಟಿಯೆಂಬ ಬಟ್ಟೆಯ ನೂಲುಗಳೇ ಪೃಥ್ವಿ, ಅಪ್ / ಜಲ, ತೇಜ / ಅಗ್ನಿ, ವಾಯು, ಆಕಾಶಗಳೆಂಬ ಪಂಚಭೂತಗಳು (ಪಂಚಭೂತಾನಿ ತನ್ತವಃ)  . ಹೀಗೆ, ಬಟ್ಟೆ ನೇಯ್ದಂತೆಯೇ (ವಸ್ತ್ರಮ್ ಇವ), ಆ ಪಿತೃದೇವತೆಗಳು (ತೇ), ಸೃಷ್ಟಿಯನ್ನು ಸದಾ ಹೊಲಿಯುವಂತೆ ಮುಂದುವರಿಸುತ್ತಾರೆ (ವಯನ್ತಿ)  .

ಪ್ರವಯಾಪವಯೇತ್ಯುಕ್ತಂ ಭೋಕ್ತೋತ್ಕೃಷ್ಟಾಸ್ತಥೈವ ಚ |
ನಿಕೃಷ್ಟಾಚೇತನಾ ಭೋಗ್ಯಾಃ ಪ್ರಾಙ್ಮುಖೇ ವಾ ಪರಾಙ್ಮುಖೇ || ೪೧ ||

(ಪ್ರವಯ-ಅಪವಯ ಇತಿ ಉಕ್ತಂ) ಈ ಮಂತ್ರದಲ್ಲಿ ಪ್ರವಯ ಎಂದಿರುವುದು ಉತ್ಕೃಷ್ಟ ಚೇತನರೂಪದ ಭೋಕ್ತೃಗಳ ಸೃಷ್ಟಿಗೆ (ಉತ್ಕೃಷ್ಟಾಃ ತಥಾ ಏವ ಚ ಭೋಕ್ತಾಃ). ಅಪವಯ ಎಂದು ನಿಕೃಷ್ಟವೂ, ಅಚೇತನವೂ ಆದ ಭೋಗ್ಯವಸ್ತುಗಳನ್ನು ಹೇಳಿದೆ (ನಿಕೃಷ್ಟ-ಅಚೇತನಾಃ ಭೋಗ್ಯಾಃ) . ಅಥವಾ ಪ್ರವಯವೆಂದರೆ ನೀಚಯೋನಿಯಿಂದ ಮೇಲು ಮೇಲಿನ ಸ್ತರಕ್ಕೆ ಮುಂದುವರಿಯುವ ಮುಮ್ಮುಖವಾದ (ಪ್ರಾಙ್ಮುಖೇ) ಸೃಷ್ಟಿ. ಅಪವಯವೆಂದರೆ ಪಾಪಾದಿಗಳಿಂದ ಅಧಃಪತನಗೊಂಡು, ಉನ್ನತಜನ್ಮದಿಂದ ನೀಚಜನ್ಮಗಳಿಗೆ ಹೋಗುವ ಹಿಮ್ಮುಖ (ಪರಾಙ್ಮುಖೇ) ಸೃಷ್ಟಿ. ಇವೆರಡನ್ನೂ ವಸ್ತ್ರದ ನೇಯ್ಗೆಯನ್ನು ಹಿಂದಕ್ಕೂ ಮುಂದಕ್ಕೂ ಮಾಡಿದಂತೆ ಪಿತೃದೇವತೆಗಳು ಸೃಷ್ಟಿನೈರಂತರ್ಯವನ್ನು ಕಾಪಿಡುವರು.

ತತೇ ತೇ ವಿಸ್ತರೇ ಲೋಕೇ ಸತ್ಯೇ ಸರ್ವೇ ಪ್ರಜಾಪತಿಮ್ |
ದೇವಾಃ ಪ್ರಾಣಸ್ವರೂಪತ್ವೇ ಪೂಜಯನ್ತಿ ಪ್ರಜಾಪತಿಮ್ || ೪೨ ||

ವಿಸ್ತಾರವಾದ ಸತ್ಯಲೋಕದಲ್ಲಿ ಎಲ್ಲ ಪಿತೃದೇವತೆಗಳು ಪ್ರಜಾಪತಿಯ ಪ್ರಾಣರೂಪರಾಗಿ ಸೃಷ್ಟಿಕರ್ತನನ್ನು ಉಪಾಸನೆ ಮಾಡುತ್ತಿರುವರು. ಅಥವಾ, ವಿಸ್ತಾರವಾದ ಸಮಸ್ತ ಸೃಷ್ಟಿಯಲ್ಲಿ ಪಿತೃದೇವತೆಗಳು ಪ್ರಾಣಶಕ್ತಿಯಾಗಿ ಹಬ್ಬಿ ಜಗತ್ಕರ್ತೃವಾದ ಪರಮೇಶ್ವರನ ಉಪಾಸನೆಯನ್ನು ಸದಾ ಮಾಡುತ್ತಿರುವರು.

ತನುತ ಉತ್ಕೃಣತ್ತ್ಯೇಷಃ ಸೃಷ್ಟಿಜಾಲಂ ಪ್ರಜಾಪತಿಃ |
ತೇನೇ ನಾಕೇऽಪಿ ಸರ್ವತ್ರ ಮಯೂಖಾಸ್ತತ್ರ ಶೋಭಿತಾಃ || ೪೩ ||

ಇಂತಹ ಸೃಷ್ಟಿಜಾಲವನ್ನು ಸೃಷ್ಟಿಕರ್ತನಾದ ಪ್ರಜಾಪತಿಯು ಸ್ವರ್ಗಾದಿ ಸಕಲಲೋಕಗಳಲ್ಲೂ ಸಂಕೀರ್ಣವಾಗಿ ವಿಸ್ತರಿಸಿದನು. ಹೀಗೆ ಸಕಲಲೋಕಗಳಲ್ಲೂ ಭಗವಂತನ ಶಕ್ತಿಯ ಕಿರಣಗಳು ನಾನಾದೈವೀರೂಪದಲ್ಲಿ ಸುಶೋಭಿತವಾಗಿವೆ.

(ಆಧಾರ— ಋ.ಸಂ. ೧೦.೧೩೦.೨— “ ಪುಮಾನ್ ಏನಂ ತನುತ ಉತ್ ಕೃಣತ್ತಿ ಪುಮಾನ್ ವಿ ತತ್ನೇ ಅಧಿ ನಾಕೇ ಅಸ್ಮಿನ್ ಇಮೇ ಮಯೂಖಾ ಉಪ ಸೇದುಃ ಊ ಸದಃ ಸಾಮಾನಿ ಚಕ್ರುಃ ತಸರಾಣಿ ಓತವೇ ”)

ದೇವಾಸ್ತತ್ರ ಸಮಾಸೀನಾ ಸೃಷ್ಟಿಜಾಲೇ ಸುರಕ್ಷಯೇ |
ಸಾಮಮನ್ತ್ರಾಣಿ ಜಾಲಸ್ಯ ತಸರಾಂಶ್ಚಕ್ರುರೋತವೇ || ೪೪ ||

ಆ ಸೃಷ್ಟಿಜಾಲದಲ್ಲಿ ದೇವತೆಗಳು ಸುರಕ್ಷಣೆಗಾಗಿ ಆಯಾ ಸ್ಥಾನಗಳಲ್ಲಿ ಆಸೀನರಾದವರಾಗಿರುವರು. ಸೃಷ್ಟಿಯಜ್ಞವೆಂಬ ಬಟ್ಟೆಯ ನೇಯ್ಗೆಗಾಗಿ ಹಾಗೂ ಅದರ ರಕ್ಷಣೆಗಾಗಿ (ಅವತು— ರಕ್ಷಿಸಲಿ; ಓತವೇ— ರಕ್ಷಣೆಗಾಗಿ; ಅವ ರಕ್ಷಣೇ ಧಾತುಃ) ಸಾಮಮಂತ್ರಗಳು ಗ್ರಂಥಿ (ಗಂಟು)ಗಳನ್ನುಂಟುಮಾಡುವುವು [ತಸರಮ್ (ವೈದಿಕ) / ತಸರಃ (ಲೌಕಿಕಸಂಸ್ಕೃತ)— ಹಗ್ಗದ ಗಂಟು].

ಕಿಮಾಸೀತ್ ಪ್ರಮಾಣಂ ನಿದಾನಂ ಕಿಮಾಸೀತ್
ಸುಮೂರ್ತಿಶ್ಚ ಕಾऽऽಸೀತ್ ತಥಾಜ್ಯಂ ಕಿಮಾಸೀತ್ |
ಪರಿಧಿಃ ಕ ಆಸೀಚ್ಛನ್ದಃ ಕಿಮಾಸೀತ್
ದೇವಾ ಯದಾ ದೇವಮಯಜನ್ತ ವಿಶ್ವೇ || ೪೫ ||

ಸಕಲ ದೇವತೆಗಳು ಆ ಪರಮಪುರುಷನಾದ ದೇವದೇವನನ್ನು ಕುರಿತು ಯಜ್ಞಮಾಡಿದಾಗ, ಆ ಯಜ್ಞಕ್ಕೆ ಪ್ರಮಾಣವೇನಿತ್ತು? ಕಾರಣ / ಮೂಲ ಯಾವುದಿತ್ತು? ದೇವತಾಪ್ರತಿಮೆ / ಆಕಾರ / ರೂಪ ಯಾವುದಾಗಿತ್ತು? ಆಹುತಿ / ಆಜ್ಯ ಯಾವುದಾಗಿತ್ತು? ಆ ಯಜ್ಞವನ್ನು ಆವರಿಸಿದ ರಕ್ಷಾಪರಿಧಿ ಯಾವುದು? ಛಂದಸ್ಸುಗಳು ಯಾವುವು ಆಗಿದ್ದವು?

(ಆಧಾರ— ಋ.ಸಂ.೧೦.೧೩೦.೩— “ಕಾಸೀತ್ ಪ್ರಮಾ ಪ್ರತಿಮಾ ಕಿಂ ನಿದಾನಮ್, ಆಜ್ಯಂ ಕಿಮ್ ಆಸೀತ್ ಪರಿಧಿಃ ಕ ಆಸೀತ್ | ಛನ್ದಃ ಕಿಮಾಸೀತ್ ಪ್ರಉಗಮ್ ಕಿಮುಕ್ಥಂ, ಯದ್ದೇವಾ ದೇವಮ್ ಅಯಜನ್ತ ವಿಶ್ವೇ ||”)

ಸ್ತೋಮೈಶ್ಛಂದೋನಿಬದ್ಧೈರ|ಸ್ತುವನ್ ಸಪ್ತಮಹರ್ಷಯಃ |
ದೃಷ್ಟ್ವಾ ಮಾರ್ಗಂ ಚ ಪೂರ್ವೇಷಾಂ ಧೀರಾ ದೈವ್ಯಾऽಯಜನ್ ಪರಮ್ || ೪೬ ||

ತಮ್ಮ ಪೂರ್ವಜರ ದಾರಿಯನ್ನು ಅವಲೋಕಿಸಿ, ಧೀರರೂ ದೈವೀಪುರುಷರೂ ಆದ ಸಪ್ತರ್ಷಿಗಳು, ವೇದದ ದೇವಸ್ತುತಿಪರವಾದ ಛಂದೋಬದ್ಧವಾದ ಸ್ತೋಮಮಂತ್ರಗಳಿಂದ ಆ ಪರಮಸತ್ಯವನ್ನು ಕುರಿತು ಸ್ತುತಿಸಿದರು ಹಾಗೂ ಯಜ್ಞವನ್ನಾಚರಿಸಿದರು.

ಇಮಾನಿ ವೈ ಪ್ರಮಾಣಾನಿ ನಿದಾನಾನಿ ತಥೈವ ಚ |
ಪ್ರ-ಉಗಂ ಸ್ತೋಮಮನ್ತ್ರಂ ಚ ಛನ್ದಾಂಸ್ಯೇವ ತು ಪರಿಧಯಃ || ೪೭ ||

 ಇವೇ, ಸೃಷ್ಟಿಯಜ್ಞಕ್ಕೆ ಪ್ರಮಾಣ ಹಾಗೂ ಮೂಲಕಾರಣ / ನಿದಾನಗಳಾದವು. ಹಾಗೆಯೇ, ಈ ಸ್ತೋಮಮಂತ್ರಗಳೇ ಪ್ರ-ಉಗವೆನಿಸಿದರೆ, ಛಂದಸ್ಸುಗಳ ವಿವಿಧ ನಿಯಮಗಳೆಂಬ ಇತಿಮಿತಿಗಳೇ ಸೃಷ್ಟಿಯಜ್ಞದ ಪರಿಧಿಗಳಾದವು.

(ಋ.ಸಂ. ೧೦|೧೩೦|೭— “ಸಹ ಸ್ತೋಮಾಃ ಸಹ ಛನ್ದಸ ಆವೃತಃ ಸಹ ಪ್ರಮಾ ಋಷಯಃ ಸಪ್ತ ದೈವ್ಯಾಃ | ಪೂರ್ವೇಷಾಂ ಪನ್ಥಾಮ್ ಅನುದೃಶ್ಯ ಧೀರಾ ಅನ್ವಾಲೇಭಿರೇ ರಥ್ಯೋ ನ ರಶ್ಮೀನ್ ||)

ಅಗ್ನೇರ್ಬಭೂವ ಗಾಯತ್ರೀ ಸವಿತಾ ಚೋಷ್ಣಿಹಸ್ತಥಾ |
ಅನುಷ್ಟುಭಾ ಮಹಸ್ಸೋಮೋ ಬೃಹತೀ ಯುಙ್ ಬೃಹಸ್ಪತೇಃ || ೪೮ ||

ಅಗ್ನಿಯಿಂದ ಗಾಯತ್ರೀಚ್ಛಂದಸ್ಸು ಹುಟ್ಟಿತು / ಗಾಯತ್ರೀಚ್ಛಂದಸ್ಸು ಅಗ್ನಿಯ ಜೊತೆಗೂಡಿತು / ಅಗ್ನಿಸ್ತುತಿಪರವಾದ ಹೆಚ್ಚಿನ ಎಲ್ಲ ಮಂತ್ರಗಳು ಗಾಯತ್ರೀಚ್ಛಂದಸ್ಸಿನಲ್ಲಿವೆ / ಅಗ್ನಿಯು ಗಾಯತ್ರೀಚ್ಛಂದಸ್ಸಿನ ದೇವತೆ. ಸವಿತೃವು ಉಷ್ಣಿಕ್ / ಉಷ್ಣಿಹ್ ಛಂದಸ್ಸಿನ ದೇವತೆ. ಹೀಗಾಗಿ ಸವಿತೃವು ಉಷ್ಣಿಕ್ ಛಂದಸ್ಸಿನಲ್ಲಿರುವ ಮಂತ್ರಗಳಿಂದ ಸುಪುಷ್ಟನಾಗುವನು. ಸೋಮನು ಅನುಷ್ಟುಪ್ ಛಂದಸ್ಸಿನ ದೇವತೆಯಾಗಿ, ಅಂತಹ ಮಂತ್ರಗಳಿಂದ ಪೂಜ್ಯನೆನಿಸಿದನು (ಮಹ ಪೂಜಾಯಾಮ್). ಇನ್ನು, ಬೃಹತೀಚ್ಛಂದಸ್ಸು ದೇವಗುರು ಬೃಹಸ್ಪತಿಯ ಸಹವರ್ತಿಯಾಗಿ, ಆತನ ವಾಕ್ಶಕ್ತಿಯನ್ನು ವರ್ಧಿಸಿ, ಆತನನ್ನು ವಾಚಸ್ಪತಿಯನ್ನಾಗಿಸಿತು.

(ಋ.ಸಂ.೧೦|೧೩೦|೪— “ಅಗ್ನೇರ್ಗಾಯತ್ರ್ಯಭವತ್ಸಯುಗ್ವಾ ಉಷ್ಣಿಹ ಯಾ ಸವಿತಾ ಸಂ ಬಭೂವ | ಅನುಷ್ಟುಭಾ ಸೋಮ ಉಕ್ಥೈರ್ಮಹಸ್ವಾನ್ ಬೃಹಸ್ಪತೇರ್ಬೃಹತೀ ವಾಚಮಾವತ್ ||”)


ಮಿತ್ರಾವರುಣಯೋಃ ಶ್ರೀಸ್ತು ವಿರಾಡಿನ್ದ್ರಸ್ಯ ತ್ರೈಷ್ಟುಭಮ್ |
ವಿಶ್ವೇದೇವಾನಾವಿವೇಶ
ಜಗತೀತ್ಥಮಕಲ್ಪಯತ್ || ೪೯ ||


ವಿರಾಟ್ ಛಂದಸ್ಸು ಮಿತ್ರ-ವರುಣರ ಮಹಿಮಾ ಪ್ರಭೆಯಾಗಿತ್ತು. ತ್ರಿಷ್ಟುಪ್ ಛಂದಸ್ಸು ಪ್ರಾತಃಕಾಲದ ಆಹುತಿಯಲ್ಲಿ ಇಂದ್ರನ ಭಾಗವಾಗಿತ್ತು. ಜಗತೀ ಛಂದಸ್ಸು ವಿಶ್ವೇದೇವತೆಗಳನ್ನು ಪ್ರವೇಶಿಸಿತು. ವೈದಿಕ ಋಷಿಗಳು, ವಿಶೇಷವಾಗಿ ಈ ಸೂಕ್ತಕ್ಕೆ ಋಷಿಯಾದ ಯಜ್ಞಃ ಪ್ರಾಜಾಪತ್ಯಃ ಎಂಬವನು, ಈ ರೀತಿಯಾಗಿ ಸೃಷ್ಟಿಯಜ್ಞವನ್ನು ಪರಿಕಲ್ಪಿಸಿದನು.


(ಋ.ಸಂ. ೧೦.೧೩೦.೫— "ವಿರಾಣ್ಮಿತ್ರಾವರುಣಯೋರಭಿಶ್ರೀರಿಂದ್ರಸ್ಯ ತ್ರಿಷ್ಟುಭಿಹ ಭಾಗೋ ಅಹ್ನಃ | ವಿಶ್ವಾನ್ ದೇವಾನ್ ಜಗತಿ ಆವಿವೇಶತೇನ ಚಾಕ್ಲೃಪ್ರ ಋಷ್ಯೋ ಮನುಷ್ಯಾಃ ||) 


ಯಜ್ಞೇ ಜಾತೇ ಪಿತರೋ ನಃ ಪುರಾಣೇ
ಸೃಷ್ಟಾಸ್ತಸ್ಮಿನ್ ಋಷಯೋ ವೈ ಮನುಷ್ಯಾಃ |
ಪಶ್ಯನ್ ಮನ್ಯೇ ಮನಸಾ ಚಕ್ಷುಷೈವ
ಸರ್ವಾನೇತದ್ಯಜನಂ ಯೈಃ ಕೃತಂ ತಾನ್ || ೫೦ ||


ಈ ಪ್ರಾಚೀನ ಸೃಷ್ಟಿಯಜ್ಞವು ನೆರವೇರಿದಾಗ, ಅದರಲ್ಲಿ ಋಷಿಗಳು, ಮನುಷ್ಯರು ಹಾಗೂ ನಮ್ಮ ಪಿತೃಗಳು ಸೃಷ್ಟಿಸಲ್ಪಟ್ಟರು. ಈ ಅದ್ಭುತ ಚಿತ್ರಣವನ್ನು ಮನವೆಂಬ ಅಂತಶ್ಚಕ್ಷುವಿನಿಂದಲೇ ನೋಡುತ್ತಾ, ಯಾವ ಈ ಸೃಷ್ಟಿಯಜನವು ಯಾರಿಂದ ಮಾಡಲ್ಪಟ್ಟಿತೋ ಅವರೆಲ್ಲರನ್ನು ಗೌರವಪೂರ್ವಕವಾಗಿ ಸ್ತುತಿಸುತ್ತೇನೆ (ಮನ್ಯೇ).


(ಋ.ಸಂ.೧೦.೧೩೦.೬— "ಚಾಕ್ಲೃಪ್ರೇ ತೇನ ಋಷಯೋ ಮನುಷ್ಯಾ ಯಜ್ಞೇ ಜಾತೇ ಪಿತರೋ ನಃ ಪುರಾಣೇ | ಪಶ್ಯನ್ ಮನ್ಯೇ ಮನಸಾ ಚಕ್ಷಸಾ ತಾನ್ ಯ ಇಮಂ ಯಜ್ಞಾಂ ಅಯಜಂತ ಪೂರ್ವೇ ||")


ಸಸ್ತೋಮಾಶ್ಛನ್ದಸಾಯುಕ್ತಾಃ
ಸಪ್ರಮಾಸ್ಸಪ್ತ ದೈವಿಕಾಃ |
ಋಷಯಃ ಪೂರ್ವಪನ್ಥಾನಂ
ದೃಷ್ಟ್ವಾ ವವೃತಿರೇ ಹ್ಯನು || ೫೧ ||


ಸ್ತೋಮಮಂತ್ರಗಳ ಹಾಗೂ ಛಂದಸ್ಸುಗಳೊಂದಿಗೆ ಆಧಾರಪ್ರಮಾಣವನ್ನು ಪಡೆದ ದೈವೀಪುರುಷರಾದ ಸಪ್ತರ್ಷಿಗಳು, ತಮ್ಮ ಪೂರ್ವಜರ ಮಾರ್ಗವನ್ನು ಅವಲೋಕಿಸುತ್ತಾ, ಅದನ್ನು ಅನುಸರಿಸಿ ಸೃಷ್ಟಿಯಜ್ಞವನ್ನು ಮುಂದುವರಿಸಿದರು.


(ಋ.ಸಂ.೧೦.೧೩೦.೭— "ಸಹ ಸ್ತೋಮಾಃ ಸಹ ಛಂದಸ ಆವೃತಃ ಸಹ ಪ್ರಮಾ ಋಷಯಃ ಸಪ್ತ ದೈವ್ಯಾಃ | ಪೂರ್ವೇಷಾಂ ಪನ್ಥಾಮನುದೃಶ್ಯ ಧೀರಾ ಅನ್ವಾಲೇಭಿರೇ ರಥ್ಯೋ ನ ರಶ್ಮೀನ್ ||")


|| ಇತಿ ಶ್ರೀಮದ್ವಾರುಣೇ ಮಹಾಪುರಾಣೇ ಪ್ರಥಮೇ ಸರ್ಗಕಾಣ್ಡೇ ಪ್ರಥಮೇ ವೇದೋಕ್ತಸೃಷ್ಟಿಪರ್ವಣಿ ಯಜ್ಞಃ ಪ್ರಾಜಾಪತ್ಯೋ ನಾಮ ಋಷಿದೃಷ್ಟ ಋಗ್ವೇದೀಯಸೂಕ್ತಸಾರೋ ನಾಮ ಪ್ರಥಮೋऽಧ್ಯಾಯಃ ||


|| ಇಲ್ಲಿಗೆ ಶ್ರೀಮದ್ ವಾರುಣ ಮಹಾಪುರಾಣದಲ್ಲಿ ಮೊದಲನೆಯದಾದ ಸರ್ಗಕಾಂಡದಲ್ಲಿ, ಮೊದಲನೆಯದಾದ ವೇದೋಕ್ತಸೃಷ್ಟಿಪರ್ವದಲ್ಲಿ, ಪ್ರಜಾಪತಿಯ ಮಗನಾದ ಯಜ್ಞನೆಂಬ ಋಷಿಯು ಕಂಡುಕೊಂಡ ಋಗ್ವೇದೀಯಸೂಕ್ತದ ಸಾರ ಎಂಬ ಮೊದಲನೆಯ ಅಧ್ಯಾಯವು ಸಂಪೂರ್ಣವಾಯಿತು ||

Comments

Popular posts from this blog

ಶ್ರೀಮದ್-ವಾರುಣ-ಮಹಾಪುರಾಣಮ್ ೩

ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧

ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ