ದತ್ತಪುರಾಣಮ್ ೧— ಮನ್ತ್ರಗರ್ಭಗಣಪತಿಸ್ತೋತ್ರಮ್—ಶ್ರೀವಾಸುದೇವಾನಂದಸರಸ್ವತೀಸ್ವಾಮಿಮಹಾರಾಜರು

ದತ್ತಪುರಾಣಮ್
(ಸ್ವಾಮೀ ಶ್ರೀಮದ್-ವಾಸುದೇವಾನನ್ದ-ಸರಸ್ವತೀ-ಕೃತ-
‘ವಾಸುದೇವೀ’ ಸಂಸ್ಕೃತಟೀಕಾಸಹಿತಮ್)

ಅಥ ಮನ್ತ್ರಗರ್ಭಂ ಗಣಪತಿಸ್ತೋತ್ರಮ್

(ವಾಸುದೇವಾನಂದಸರಸ್ವತೀವಿರಚಿತಮ್)
ವಾರಣಾಸ್ಯೋ ದರಘ್ನೋರ್ಥ್ಯ ಏಕದನ್ತಶ್ಶಿವಾತ್ಮಜಃ |
ಸುಶರ್ಮಕೃತ್ತಾರಣೋರ್ಚ್ಯಃ ಕವಿಸ್ತತ್ಪುರುಷಪ್ರಿಯಃ || ೧ ||

ಆನೆಮೊಗದ (ವಾರಣ— ಆನೆ, ಆಸ್ಯ— ಮುಖ), ಭಯನಾಶಕನೂ (ದರ— ಭಯ, ಘ್ನಃ— ನಾಶಕ) ಶ್ರೀ-ಧೀಮಂತನೂ ಪ್ರಾರ್ಥನೀಯನೂ ಆದ (ಅರ್ಥ್ಯಃ— ಅರ್ಥ / ಧನ / ಸಿರಿ / ಶ್ರೀ ಹಾಗೂ ಧೀ / ಬುದ್ಧಿಸಂಪತ್ತುಳ್ಳವ, ಪ್ರಾರ್ಥಿಸಲ್ಪಡಲು ಯೋಗ್ಯನಾದವ), ಏಕದಂತನೂ (ಒಂದೇ ದಂತವುಳ್ಳವನೂ) ಶಿವನ ಆತ್ಮಜನೂ (ಶಿವನ ಮಗನೂ) ಆದ, ಪರಮಾನಂದವನ್ನೂ ಪರಮಾಶೀರ್ವಾದವನ್ನೂ ನೀಡುವ (ಸು— ಒಳ್ಳೆಯ, ಪರಮ, ಶ್ರೇಷ್ಠ; ಶರ್ಮ— ಆನಂದ, ಸುಖ, ಆಶೀರ್ವಾದ; ಕೃತ್— ಉಂಟುಮಾಡುವ), ಭವಸಾಗರದ ಕಷ್ಟಗಳಿಂದ ಪಾರುಮಾಡುವ (ಸಂಸಾರಸಾಗರತಾರಕನಾದ), ಅರ್ಚನೆ / ಪೂಜೆಗೆ ಯೋಗ್ಯನಾದ (ಅರ್ಚ್ಯನಾದ), ಸರ್ವಜ್ಞನೂ ಕವಿಯೂ ಪರಶಿವನ ಅತ್ಯಂತ ಪ್ರೀತಿಪಾತ್ರನೂ ಆದ (ರುದ್ರನ ಪಂಚಮುಖ / ಪಂಚಕಲ್ಪಾವತಾರಗಳು— ಸದ್ಯೋಜಾತ, ವಾಮದೇವ, ಅಘೋರ, ಈಶಾನ ಹಾಗೂ ತತ್ಪುರುಷ. ರುದ್ರಗಾಯತ್ರಿಯಲ್ಲಿ ಹೀಗಿದೆ— “ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ ||”) ಮಹಾಗಣಪತಿಯನ್ನು ವಂದಿಸುತ್ತೇನೆ.

ದೇವಃ ಪವಿತ್ರೇಕ್ಷಣೋರ್ದ್ಯೋ ದನ್ತೀಚಾರುಸ್ತ್ರಿಲೋಚನಃ |
ವಾಗ್ಮೀಶೋ ಮಾಯಾತೀತಾತ್ಮಾ ತಾಪಶೋಷಾಖ್ಯ ಆಖುಗಃ || ೨ ||

(ದೇವಃ) ಬೆಳಗುತ್ತಿರುವ (ದೀವ್ಯತಿ, ದಿವ್ ದ್ಯತೌ),  ಸೃಷ್ಟಿನಾಟಕವನ್ನಾಡುವ, ಅಸುರರನ್ನು ಸೋಲಿಸುವ / ಸಂಹರಿಸುವ (ದಿವ್ ವಿಜಿಗೀಷಾಯಾಮ್ / ಅರ್ದನೇ), ಸರ್ವಭೂತಗಳಲ್ಲೂ ಆತ್ಮತತ್ತ್ವದಿಂದ ವ್ಯವಹರಿಸುವ (ದಿವ್ ವ್ಯವಹಾರೇ), ಹೊಳೆಯುತ್ತಿರುವ (ದ್ಯೋತತೇ, ದಿವ್ ಕಾನ್ತೌ), ಸ್ತುತಿಗಳಿಂದ ಸ್ತುತಿಸಲ್ಪಡುವ (ದಿವ್ ಸ್ತುತೌ), ಎಲ್ಲೆಡೆಯೂ ಸಂಚರಿಸುವ (ದಿವ್ ಗತೌ), (ಪವಿತ್ರೇಕ್ಷಣಃ ಅರ್ದ್ಯಃ) ಪವಿತ್ರವಾದ ದೃಷ್ಟಿ / ನೇತ್ರಗಳುಳ್ಳ, ಯಾಚಿಸಲ್ಪಡಬೇಕಾದವನೂ ಆದ, (ದಂತೀಚಾರುಃ ತ್ರಿಲೋಚನಃ) ಸುಂದರವಾದ ದಂತದಿಂದ ಯುಕ್ತನಾದ, ಮುಕ್ಕಣ್ಣನಾದ, (ವಾಗ್ಮಿ+ಈಶಃ) ವಾಗ್ಮಿಗಳಿಗೆ ಒಡೆಯನಾದ, (ಮಾಯಾತೀತಾತ್ಮಾ) ಮಾಯೆಗೊಳಪಡದವನೂ, (ತಾಪ-ಶೋಷ-ಆಖ್ಯಃ ಆಖು-ಗಃ) ತಾಪಶೋಷನೆಂಬ ಹೆಸರಿನ ಇಲಿಯೇರಿ ಸಂಚರಿಸುವವನೂ ಆದ ಅಥವಾ ತಾಪತ್ರಯನಿವಾರಕನೂ ಮೂಷಕವಾಹನನೂ ಆದ ಗಣಪತಿಯನ್ನು ವಂದಿಸುತ್ತೇನೆ.

ನನ್ದೀವನ್ದ್ಯೋऽಯಮೀಶಾನೋ ಯಶಸ್ವೀ ಯಶ-ಆಸ್ಪದಃ |
ದರ್ಶನೀಯೋ ವಿಘ್ನರಾಜೋ ವಿಘ್ನಹಾ ವಿಘ್ನಕೃದ್ವಿರಾಟ್ || ೩ ||

(ನನ್ದೀವನ್ದ್ಯಃ) ನಂದಿಯಿಂದ ವಂದಿತನಾದ, (ಅಯಮ್ ಈಶಾನಃ) ಇವನು ಈಶಾನನೂ ಆಗಿದ್ದಾನೆ (“ಪಿತಾ ವೈ ಪುತ್ರರೂಪೇಣ” ಎಂಬಂತೆ, ತಂದೆ ಈಶ್ವರನೇ ಮಗ ಗಣಪತಿಯ ರೂಪದಲ್ಲಿ). (ಯಶಸ್ವೀ) ಸದಾ ಜಯಶಾಲಿಯೂ, ಯಶೋವಂತನೂ, (ಯಶ-ಆಸ್ಪದಃ) ಯಶಸ್ಸಿಗೆ ಎಡೆಮಾಡಿಕೊಡುವವನೂ (ಕಾರಣನೂ), (ದರ್ಶನೀಯಃ) ನೋಡಲು ಸುಂದರನೂ, (ವಿಘ್ನರಾಜಃ) ಸಕಲವಿಘ್ನಗಳಿಗೆ ಒಡೆಯನೂ, (ವಿಘ್ನಹಾ) ಸತ್ಕಾರ್ಯಗಳ ವಿಘ್ನನಾಶಕನೂ, ದುಷ್ಟರಿಗೂ ಹಲವು ಬಾರಿ ಪಾಪದ ಕೊಡ ತುಂಬಲು ವಿಘ್ನಗಳ ನಾಶಕನೂ, (ವಿಘ್ನಕೃತ್) ದುಷ್ಕಾರ್ಯಗಳ ವಿಘ್ನಕಾರಕನೂ, ಸತ್ಕಾರ್ಯ ಮಾಡುವವರಿಗೂ ಕೆಲವೊಮ್ಮೆ ಸತ್ವಪರೀಕ್ಷೆಗಾಗಿ ವಿಘ್ನವುಂಟುಮಾಡುವವನೂ, (ವಿರಾಟ್) ವಿರಾಟ್ ಸ್ವರೂಪನೂ ಆಗಿರುವನು. ವಿಶ್ವರೂಪನೂ ಆಗಿರುವನು ಮಹಾಗಣಪತಿ.

ಸಭ್ಯೋ ಹೃತ್ಪದ್ಮನಿಲಯೋऽದ್ಮರಸದ್ಮವಿಹಾಪಕಃ |
ರಕ್ತಾಙ್ಗೋऽರ್ಕೋ ಹೇಮಮಾಲೀ ಹೇರಂಬೋ ಹೇಮದಂಷ್ಟ್ರಕಃ || ೪ ||

(ಸಭ್ಯಃ) ಸಭ್ಯನೂ / ಸೌಜನ್ಯಾನ್ವಿತನೂ, (ಹೃತ್ಪದ್ಮನಿಲಯಃ) ಸರ್ವಜೀವಿಗಳ ಹೃದಯಕಮಲವಾಸಿಯೂ, (ಅದ್ಮರ-ಸದ್ಮ-ವಿಹಾಪಕಃ) ಡೊಳ್ಳುಹೊಟ್ಟೆಯ, ಹೊಟ್ಟೆಬಾಕತನದ ಚಾಪಲ್ಯವುಳ್ಳ(?), (ರಕ್ತಾಂಗಃ ಅರ್ಕಃ) ಕೆಂಪುಮೈಯವನೂ, ಅಗ್ನಿ-ಸೂರ್ಯ-ಸ್ಫಟಿಕ-ಸಂಕಾಶನೂ (ಅದರಂತೆ ಕಾಣುವವನೂ), (ಹೇಮಮಾಲೀ) ಚಿನ್ನದ ಹಾರಧರಿಸಿದವನೂ, (ಹೇರಂಬಃ) ರಣರಂಗದಲ್ಲಿ ಶೌರ್ಯಮದದಿಂದ ಗರ್ಜಿಸುವ / ಶಿವನ ಸಮೀಪದಲ್ಲಿ ಶಿವನನ್ನಾಲಂಬನ ಮಾಡಿರುವ / ಶಿವನ ಮೈಗೇ ಜೋತುಬೀಳುವ (ಹೇ / ರಣೇ / ಶಿವಸಮೀಪೇ ರಂಬತೇ / ಗರ್ಜತಿ / ಆಲಂಬತಿ ಇತಿ ಹೇರಂಬಃ), (ಹೇಮದಂಷ್ಟ್ರಕಃ) ಸ್ವರ್ಣಭೂಷಿತದಂತವುಳ್ಳ, ಮಹಾಗಣಪತಿಯನ್ನು ವಂದಿಸುತ್ತೇನೆ.

ಸ್ವರಾಡ್-ಪ್ರಭಾ ಅಜೋऽನನ್ತೋ ವರೇಣ್ಯೋ ಮತಿಮಾನ್-ಗುಣೀ |
ತೀರ್ಥಕೀರ್ತಿಃ ವರಕರಃ ಕ್ರತ್ವೀಶೋ ಹಾಪಿತಾಸುರಃ || ೫ ||

(ಸ್ವರಾಡ್) ಸ್ವಪ್ರಕಾಶದಿಂದಲೇ ರಾರಾಜಿಸುವ / ಬೆಳಗುವ (“ಸ್ವೇನ ರಾಜತಿ ಇತಿ ಸ್ವರಾಡ್, ಸ್ವರಾಜೌ, ಸ್ವರಾಜಃ— ಏಕ-ದ್ವಿ-ಬಹುವಚನರೂಪಗಳು),(ಪ್ರಭಾ) ಪ್ರಭಾಸ್ವರೂಪನಾದ / ಪ್ರಖರವಾದ ಜ್ಯೋತಿಸ್ವರೂಪನಾದ, (ಅಜಃ ಅನನ್ತಃ) ಜನ್ಮರಹಿತನೂ, ಅಂತ್ಯ / ಸಾವಿಲ್ಲದವನೂ, (ವರೇಣ್ಯಃ) ಅತ್ಯಂತ ಶ್ರೇಷ್ಠನೂ, ವರಬೇಡಲು ಆಶ್ರಯಿಸಲು ಯೋಗ್ಯನಾದವನೂ, (ಮತಿಮಾನ್ ಗುಣೀ) ಉತ್ತಮ ಪ್ರಜ್ಞಾವಂತನೂ, ಸದ್ಗುಣಗಳ ಗಣಿಯೂ, (ತೀರ್ಥಕೀರ್ತಿಃ) ಪವಿತ್ರತಮನೆಂಬ ಕೀರ್ತಿಯುಳ್ಳವನೂ, (ವರಕರಃ) ವರನೀಡುವ ಹಸ್ತಮುದ್ರಾಂಕಿತನಾದವನೂ, (ಕ್ರತು-ಈಶಃ) ಯಜ್ಞೇಶನೂ, (ಹಾಪಿತ-ಅಸುರಃ) ರಕ್ಕಸರನ್ನು ಹೊಡೆದೋಡಿಸಿದವನೂ ಆದ ಮಹಾಗಣಪತಿಯನ್ನು ವಂದಿಸುತ್ತೇನೆ.

ಕೃಪಾಕರೋ ಧೂಮ್ರಕೇತುಃ ತುಂದಿಲೋ ದೇವವಲ್ಲಭಃ |
ತಪಸ್ವೀಶಃ ತಾಪಹರೋ ಡಾಕಿನೀವಾರಿತೋऽಭಯಃ || ೬ ||

(ಕೃಪಾಕರಃ) ಕೃಪೆ / ದಯೆ-ಯ ಆಕರವಾಗಿರುವ / ಕೃಪಾನಿಧಿಯಾದ (“ಕೃಪಾಯಾಃ ಆಕರಃ”) / ಕೃಪೆಯನ್ನು ಉಂಟುಮಾಡುವವನಾದ (“ಕೃಪಾಂ ಕರೋತಿ ಇತಿ”), (ಧೂಮ್ರ-ಕೇತುಃ) ಹೊಗೆಯ ಬಣ್ಣದ ಧ್ವಜವುಳ್ಳ, (ತುಂದಿಲಃ) ದೊಡ್ಡ ಹೊಟ್ಟೆಯುಳ್ಳವನೂ, (ದೇವ-ವಲ್ಲಭಃ) ದೇವತೆಗಳ ಒಡೆಯನೂ, (ತಪಸ್ವೀಶಃ) ತಪಸ್ವಿಗಳ ಅಧಿಪನೂ, (ತಾಪ-ಹರಃ) ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕಗಳೆಂಬ ತ್ರಿವಿಧ ತಾಪಗಳ / ತಾಪತ್ರಯದ ನಾಶಕನೂ ಆದ ಮಹಾಗಣಪತಿಯು, (ಡಾಕಿನೀ-ವಾರಿತಃ) ಡಾಕಿನೀ ಮುಂತಾದ ಉಗ್ರರೂಪಿಗಳಿಂದಾದ ಭಯವನ್ನು ನಿವಾರಿಸಿ (“ಡಾಯ ಭಯದಾನಾಯ ಅಕತಿ ಕುಟಿಲಂ ವ್ರಜತಿ ಇತಿ”— ಕಾಲೀಗಣವಿಶೇಷಃ; ಭಯವುಂಟುಮಾಡಲು ಕುಟಿಲಗತಿ / ವಾಮಮಾರ್ಗವನ್ನು ಅನುಸರಿಸುವ ಕಾಳಿಯ ಗಣಗಳಲ್ಲೊಂದು.), (ಅಭಯಃ) ಅಭಯ / ನಿರ್ಭಯವನ್ನು ಉಂಟುಮಾಡುವವನಾಗಿದ್ದಾನೆ.

ವಿಶ್ವಪ್ರಿಯೋ ಯಕ್ಷವಂದ್ಯೋ ಯಷ್ಟಾ ನಯವಿವರ್ಧನಃ |
ನಾನಾರೂಪೋ ಧೀರ ಆದ್ಯೋ ಧೀಮತಾಂ ಧೀರಕಃ ಸುಧೀಃ || ೭ ||

(ವಿಶ್ವಪ್ರಿಯಃ) ಜಗತ್ತಿನ ಸಕಲರಿಗೂ ಪ್ರಿಯನಾದವನೂ, (ಯಕ್ಷ-ವಂದ್ಯಃ) ಯಕ್ಷಾದಿಗಳಿಂದಲೂ ವಂದಿತನಾದ, (ಯಷ್ಟಾ) ಯಜಮಾನನೂ, (ನಯ-ವಿ-ವರ್ಧನಃ) ವಿನಯಶೀಲತೆಯನ್ನು / ನಯ-ನೀತಿ-ಸದಾಚಾರಗಳನ್ನು ಹೆಚ್ಚಿಸುವವನೂ, (ನಾನಾ-ರೂಪಃ) ಬಗೆಬಗೆಯ ರೂಪವನ್ನು ತಾಳಬಲ್ಲವನೂ, (ಧೀರಃ) ಧೈರ್ಯಶಾಲಿಯೂ, (ಆದ್ಯಃ) ಸಕಲಕ್ಕೂ ಮೊದಲಿನವನಾದ ಆದಿಮೂಲ-ಸ್ವರೂಪನೂ, ಆದಿಪೂಜಿತನೂ, ಪ್ರಥಮ ಆದ್ಯತೆಯುಳ್ಳ ಪ್ರಧಾನನೂ, ಅಗ್ರಪೂಜೆಗೊಳ್ಳುವವನೂ, (ಧೀ-ಮತಾಂ ಧೀರಕಃ) ಬುದ್ಧಿವಂತರ, ಜ್ಞಾನಿಗಳ ಧೀಃಪ್ರೇರಕನೂ / ಬುದ್ಧಿಗೆ ಪ್ರಚೋದಕನೂ, ಬುದ್ಧಿದಾಯಕನೂ (ಧೀಃ + ಅಕಃ — ಧೀರಕಃ, ಬುದ್ಧಿಯನ್ನು ಉಂಟುಮಾಡುವವನು, ಅಕಃ— ಕರೋತಿ ಎಂಬುದರ ಆರ್ಷಪ್ರಯೋಗ), (ಸು-ಧೀಃ) ಉತ್ತಮ ಧೀಶಕ್ತಿಯುಳ್ಳ ಸರ್ವಜ್ಞನೂ ಆಗಿರುವನು ಈ ಮಹಾಗಣಪತಿ.


ಯಮೀಶ್ವರೋ ಮಹಾಹಸ್ತೀ ಮಹಾತ್ಮಾ ಮಹ ಉತ್ತಮಃ |
ಕರ್ತಾऽಕರ್ತಾ ಹಿತಕರೋ ಹಿತಜ್ಞೋ ಹಿತಶಾಸನಃ || ೮ ||


(ಯಮೀಶ್ವರಃ) ನಿಯಮನ / ನಿಯಂತ್ರಣ / ನಿಗ್ರಹ ಶಕ್ತಿಯುಳ್ಳವನು ಯಮೀ. ಅಂತಹ ನಿಯಂತ್ರಕರೆಲ್ಲರ ಈಶ್ವರನೇ / ನಾಯಕನೇ ಈ ಯಮೀಶ್ವರನೆನಿಸಿದ ಮಹಾಗಣಪತಿ. (ಮಹಾಹಸ್ತೀ) ದೊಡ್ಡ ಆನೆಯ ಮುಖವುಳ್ಳವನು. (ಮಹಾತ್ಮಾ) ಪರಮಾತ್ಮನು. (ಮಹಃ) "ಮಹ ಇತಿ ಬ್ರಹ್ಮ" ಎಂಬ ತೈತ್ತಿರೀಯೋಪನಿಷನ್ಮನ್ತ್ರದಂತೆ, ಸಾಕ್ಷಾತ್ ಪರಬ್ರಹ್ಮಸ್ವರೂಪಿಯು. (ಉತ್ತಮಃ) ಬಹು ಮೇಲಿನವನು, ಉನ್ನತಸ್ತರದವನು, ಶ್ರೇಷ್ಠತಮನು. (ಕರ್ತಾ) ಸಮಸ್ತ ಸೃಷ್ಟಿಯ ಕರ್ತೃವು. (ಅಕರ್ತಾ) ತಾನು ಸ್ವತಃ ಏನನ್ನೂ ಮಾಡದೆ ಸಕಲ ಚರಾಚರಮಯವಾದ ಸೃಷ್ಟಿಯ ಚೇಷ್ಟೆಗಳಿಗೆ ಸಾಕ್ಷಿಯಾಗಿರುವವನು. (ಹಿತಕರಃ) ಎಲ್ಲರಿಗೂ ಸುಖ-ದುಃಖಾತೀತವಾದ ಹಿತವನ್ನುಂಟುಮಾಡುವವನು. ಸುಖವೆಲ್ಲವೂ ಹಿತಕರವಾಗದು. ದುಃಖವೆಲ್ಲವೂ ಅಹಿತಕರವಲ್ಲ. ಪರಮಾತ್ಮನು ಸಕಲ ಜೀವರಿಗೆ ಶ್ರೇಯಸ್ಕರವಾದ ಹಿತವನ್ನೇ ಸದಾ ಉಂಟುಮಾಡುವನು. ಅದು ಕೆಲವೊಮ್ಮೆ ಸುಖರೂಪಿಯಾಗಿರಬಹುದು; ಮಗದೊಮ್ಮೆ ದುಃಖರೂಪಿಯಾಗಿರಬಹುದು. ಅದಾವರೂಪದಲ್ಲಿದ್ದರೂ ಆತ್ಯಂತಿಕವಾಗಿ ಹಿತಕರವಾದುದಾಗಿರುವುದು. (ಹಿತಜ್ಞಃ) ಯಾಕೆಂದರೆ, ಆಯಾ ಜೀವರ ಶ್ರೇಯಸ್ಸಿನ ದಾರಿಗಳಾವುವೆಂಬುದನ್ನು ಆತನೋರ್ವನೇ ಬಲ್ಲವನು. ಹೀಗಾಗಿ ಆತನು ಹಿತವೇನೆಂದು ಬಲ್ಲ ಸದಸದ್ವಿವೇಕವುಳ್ಳವನು (ಸತ್ + ಅಸತ್ + ವಿವೇಕ). (ಹಿತಶಾಸನಃ) ತನ್ನ ಪ್ರಜೆಗಳಿಗೆಲ್ಲ ಹಿತವನ್ನುಂಟುಮಾಡುವ ರೀತಿಯ ಆಡಳಿತ ಆತನದು. ದುಷ್ಟರಿಗೆ ಶಿಕ್ಷೆಯಾದರೆ ಪಾಪನಿವೃತ್ತಿ, ಲೋಕಹಿತ. ಶಿಷ್ಟರಿಗೆ ರಕ್ಷೆಯಾದರೆ ಪುಣ್ಯವೃದ್ಧಿ, ಲೋಕಾಭಿವೃದ್ಧಿ. ಅಂತಹ ದುಷ್ಟಶಿಕ್ಷಣ-ಶಿಷ್ಟರಕ್ಷಣ ರೂಪಿಯಾದ ಲೋಕಹಿತಶಾಸನವು ಆ ಮಹಾಗಣಪತಿಯದು.

ಸ್ತೋತಾ ಸ್ತವ್ಯಃ ತನ್ತ್ರಮೂಲಃ ತನ್ತ್ರಜ್ಞಃ ತನ್ತ್ರವಿಗ್ರಹಃ |
ತ್ರಯೀವೇದ್ಯೋ ನೋದನಾಜ್ಞೋ ನೋದನಾನೋದಿತದ್ವಿಜಃ || ೯ ||

(ಸ್ತೋತಾ) ಸ್ತುತಿಮಾಡುವ ಸ್ತೋತೃವೂ ಆತನೇ. (ಸ್ತವ್ಯಃ) ಸ್ತುತಿಸಲ್ಪಡಬೇಕಾದವನೂ / ಸ್ತುತಿಸಲ್ಪಡಲು ಯೋಗ್ಯನಾದವನೂ ಆತನೇ. (ತನ್ತ್ರಮೂಲಃ) ಮಹಾಗಣಪತಿಯೇ ಸಕಲ ತಂತ್ರೋಪಾಯಗಳಿಗೂ, ತಂತ್ರಾಗಮಶಾಸ್ತ್ರಗಳಿಗೂ, ತಂತ್ರಜ್ಞಾನಕ್ಕೂ ಮೂಲಕಾರಣನು. (ತನ್ತ್ರಜ್ಞಃ) ತಂತ್ರಗಾರಿಕೆಯನ್ನೂ, ತಂತ್ರಜ್ಞಾನವನ್ನೂ, ತಂತ್ರಾಗಮಾದಿಶಾಸ್ತ್ರಗಳನ್ನೂ ಬಲ್ಲವನಾಗಿರುವನು. (ತನ್ತ್ರವಿಗ್ರಹಃ) ಆತನೇ ಸಕಲ ತಂತ್ರಗಳ ಮೂರ್ತಸ್ವರೂಪನು / ಸಾಕಾರಮೂರ್ತಿಯಾಗಿರುವನು. (ತ್ರಯೀವೇದ್ಯಃ) 'ತ್ರಯೀ ' ಎಂದು ಕರೆಯಲ್ಪಡುವ ವೇದಮಂತ್ರಗಳಿಂದ ತಿಳಿಯಲ್ಪಡಲು ಯೋಗ್ಯನೂ, ತಿಳಿಯಲ್ಪಡತಕ್ಕವನೂ, (ನೋದನಾಜ್ಞಃ) ಪ್ರಬಲವಾಗಿ / ಬಲವಂತವಾಗಿ ಆಜ್ಞೆಮಾಡುವವನೂ, (ನೋದನಾ-ನೋದಿತ-ದ್ವಿಜಃ) ಒತ್ತಾಯಪೂರ್ವಕವಾಗಿ ಪ್ರಚೋದಿತನಾದ ಬ್ರಾಹ್ಮಣವಟುರೂಪಿಯೂ ಆಗಿರುವನು. ರಾವಣನು ಶಿವನನ್ನೊಲಿಸಿ ಪಡೆದ ಆತ್ಮಲಿಂಗವನ್ನು ದೇವತೆಗಳ ಲೋಕಹಿತದೃಷ್ಟಿಯ ಒತ್ತಾಯದ ಕೋರಿಕೆಗೆ ಮಣಿದು, ವಟುರೂಪಿಯಾಗಿ ಬಂದು ಗೋಕರ್ಣಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದವನು ಈ ಮಹಾಗಣಪತಿಯೇ.

Comments

Popular posts from this blog

ಶ್ರೀಮದ್-ವಾರುಣ-ಮಹಾಪುರಾಣಮ್ ೩

ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧

ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ